ಯುವಕನೊಬ್ಬ ದಾರಿಯಲ್ಲಿ ನಿಂತಿರುತ್ತಾನೆ, ಅದೇ ದಾರಿಯಲ್ಲಿ ಬಂದ ಇನ್ನಿಬ್ಬರು ಯುವಕರನ್ನುದ್ದೇಶಿಸಿ ನನ್ನ ಶೂ ಲೇಸ್ ಬಿಚ್ಚಿದೆ ಕಟ್ಟಿ ಎನ್ನುತ್ತಾನೆ, ಏನೋ ನಮಗೆ ಶೂ ಲೇಸ್ ಕಟ್ಟು ಅನ್ತೀಯಾ, ಯಾಕೆ ನಿನಗೆ ಕೈಇಲ್ಲವಾ ಎಂದು ಅವನ ಭುಜಕ್ಕೆ ಹೊಡೆದಾಗ ಗೊತ್ತಾಗುತ್ತದೆ ಅವನಿಗೆ ನಿಜಕ್ಕೂ ಕೈ ಇಲ್ಲವೆಂದು, ಕೂಡಲೇ ಹಿನ್ನೆಲೆಯಲ್ಲಿ ‘ಮೋಯೆ ಮೋಯೆ’ ಎಂದು ಹಾಡು ಶುರುವಾಗತ್ತದೆ, ಆ ಹಾಡಿನ ಬೀಟ್ಗೆ ತಕ್ಕಂತೆ ಮೂವರು ಹುಡುಗರು ತೀವ್ರ ದುಖಃವನ್ನು ಪ್ರದರ್ಶಿಸುತ್ತಾರೆ. ಈ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಇವನ್ನು ‘ಮೋಯೆ ಮೋಯೆ’ ಟ್ರೆಂಡ್ (Trend) ಎನ್ನಲಾಗುತ್ತಿದೆ. ಈ ‘ಮೋಯೆ ಮೋಯೆ’ ಟ್ರೆಂಡ್ ಅನ್ನು ಲೇವಡಿ ಮಾಡುವ ಟ್ರೆಂಡ್ ಸಹ ಇದೀಗ ವೈರಲ್ ಆಗಿದ್ದು, ಅದರಲ್ಲಿಯೂ ಇದೇ ‘ಮೋಯೆ ಮೋಯೆ’ ಹಾಡನ್ನೇ ಬಳಸಲಾಗುತ್ತಿದೆ. ಅಂದಹಾಗೆ ಈ ಹಾಡಿನ ಅರ್ಥವೇನು? ಹಾಡು ಯಾವ ಭಾಷೆಯದ್ದು, ಯಾರು ಹಾಡಿರುವುದು, ಹಾಡು ಭಾರತದಲ್ಲಿ ವೈರಲ್ ಆಗಿದ್ದೇಕೆ?
ಈ ಹಾಡು ಸೆರ್ಬಿಯಾ ಭಾಷೆಯದ್ದು, ಅಸಲಿಗೆ ಹಾಡು ‘ಮೋಯೆ ಮೋಯೆ’ ಅಲ್ಲ ಬದಲಿಗೆ ‘ಮೋಯೆ ಮೋರೆ’, ಇಂಗ್ಲೀಷ್ನಲ್ಲಿ ಇದನ್ನು ‘Moje More’ ಎಂದು ಬರೆಯಲಾಗುತ್ತದೆ. ‘ಮೋಯೆ ಮೋರೆ’ ಹಾಡು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ಹಾಡನ್ನು ಹಾಡಿರುವುದು ತೆಯಾ ದೋರಾ ಹೆಸರಿನ ಸೆರ್ಬಿಯನ್ ಗಾಯಕಿ. ಲುಕಾ ಜೋವೊನಿಕ್ ಎಂಬುವರ ಜೊತೆ ಹಾಡಿಗೆ ಸಾಹಿತ್ಯ ಸಹ ಅವರೇ ಬರೆದಿದ್ದಾರೆ.
ಇಲ್ಲಿದೆ ನೋಡಿ ಮೂಲ ಹಾಡು
ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋಗಳಿಗೆ ಬಳಸಲಾಗುತ್ತಿದೆ, ಅಸಲಿಗೆ ಈ ಹಾಡು ಭಾವುಕ ಹಾಡಾಗಿದೆ. ಒಬ್ಬಂಟಿತನವನ್ನು, ಜನ ಹೇಗೆ ಮತ್ತೊಬ್ಬರ ಭಾವನೆಗಳಿಗೆ ಬೆಲೆ ಕೊಡದೆ ಬದುಕುತ್ತಿದ್ದಾರೆ ಎಂಬುದನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ‘ಯಾರಿಗೂ ನನ್ನ ಆತ್ಮದ ನೋವು ಬೇಕಿಲ್ಲ, ನನ್ನ ಗಾಯದ ನೋವಿನ ಅರಿವಿಲ್ಲ, ಪ್ರತಿ ರಾತ್ರಿ ಕವಿಯುತ್ತಿದ್ದಂತೆ ನನ್ನ ಆ ಹಳೆ ಕೆಟ್ಟ ಕನಸೇ ವಾಪಸ್ಸಾಗುತ್ತಿದೆ. ಪ್ರತಿ ದಿನವೂ ಆ ಕೆಟ್ಟ ಕನಸು ವಾಪಸ್ಸಾಗುತ್ತಿದೆ’’ ಈ ರೀತಿಯ ಅರ್ಥ ಹೊಮ್ಮಿಸುವ ಸಾಲುಗಳು ಹಾಡಿನ ತುಂಬಾ ಇವೆ.
ಇದನ್ನೂ ಓದಿ:Animal Movie: ‘ಅನಿಮಲ್’ ಸಿನಿಮಾದ ಡಿಲೀಟೆಡ್ ದೃಶ್ಯ ವೈರಲ್; ಏನಿದೆ ಅದರಲ್ಲಿ?
‘ಮೋಯೆ ಮೋರೆ’ ಎಂದರೆ ಕೆಟ್ಟ ಕನಸು ಎಂದರ್ಥ. ನನ್ನ ಸಮುದ್ರ ಎಂಬ ಅರ್ಥವೂ ಈ ಸಾಲಿಗಿದೆ, ಆದರೆ ಹಾಡಿನಲ್ಲಿ ಕೆಟ್ಟ ಕನಸು ಎಂಬರ್ಥೆದಲ್ಲಿಯೇ ಬಳಸಲಾಗಿದೆ. ಈ ಹಾಡು ಯೂಟ್ಯೂಬ್ನಲ್ಲಿ ಭಾರಿ ಟ್ರೆಂಡ್ ಆಗಿತ್ತು, ಅದರಲ್ಲಿಯೂ ಹಾಡನ್ನು ಅತಿ ಹೆಚ್ಚು ಜನ ವೀಕ್ಷಿಸಿದ್ದು ಏಷ್ಯಾದಲ್ಲಿ ಅದರಲ್ಲೂ ಭಾರತದಲ್ಲಿ. ಹಾಗಾಗಿ ಹಾಡಿನ ಗಾಯಕಿ ತೆಯೊ ಡೋರಾ ಧನ್ಯವಾದಗಳನ್ನು ಹೇಳಿದ್ದರು.
ಟ್ರೆಂಡಿಂಗ್ ವಿಡಿಯೋ
ಮೂಲ ಹಾಡಿನಲ್ಲಿ ಹಲವು ಅಮೂರ್ತ ಅರ್ಥದ ದೃಶ್ಯಗಳಿವೆ, ಯುದ್ಧ ಭೂಮಿಯಲ್ಲಿ, ಬಂದೂಕು ಹಿಡಿದ ಮೂರ್ತಿಗಳ ಮಧ್ಯೆ, ಯುದ್ಧದ ಕರುಣಾಜನಕ ಅಂತ್ಯವನ್ನು ಪ್ರತಿನಿಧಿಸುವ ಒಂಟಿ ಕುದುರೆಯ ಜೊತೆ, ಮಡಿದವರ ಆತ್ಮಗಳ ಜೊತೆಗೆ ಗಾಯಕಿ ತೆಯಾ ದೋರಾ ನಿಂತು ಈ ಹಾಡು ಹಾಡುತ್ತಿರುವಂತೆ ಕೊರಿಯೋಗ್ರಾಫ್ ಮಾಡಲಾಗಿದೆ. ಹಾಡಿನ ಡ್ರಾಪ್ ಮತ್ತು ಬೀಟ್ಗಳು ಅದ್ಭುತವಾಗಿವೆ. ಡ್ರಾಪ್ ಮತ್ತು ಬೀಟ್ನಿಂದಲೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಇಷ್ಟು ವೈರಲ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Tue, 5 December 23