ರಶ್ಮಿಕಾ-ವಿಜಯ್ ಮದುವೆ ಉಡುಗೆಯ ವಿಶೇಷತೆಯೇನು? ವಿನ್ಯಾಸಕ್ಕೆ ಸ್ಪೂರ್ತಿಯೇನು?
Vijay Deverakonda and Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಚಿತ್ರಗಳು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರು ವಧು-ವರರಾಗಿ ಅದ್ಭುತವಾಗಿ ಕಾಣುತ್ತಿದ್ದಾರೆ. ಇಬ್ಬರು ಧರಿಸಿರುವ ಉಡುಗೆಗಳ ಬಗ್ಗೆ ಸಖತ್ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟಕ್ಕೂ ಈ ಉಡುಗೆ ವಿನ್ಯಾಸದ ಹಿಂದಿನ ಆಲೋಚನೆ ಏನು? ಸ್ಪೂರ್ತಿ ಏನು? ಇಲ್ಲಿದೆ ಮಾಹಿತಿ...

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹ ನಿನ್ನೆ (ಫೆಬ್ರವರಿ 27) ನಡೆದಿದೆ. ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ಮತ್ತು ರಶ್ಮಿಕಾ ಸತಿ-ಪತಿಗಳಾಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಇವರ ಅದ್ಧೂರಿ ಮದುವೆ ನಡೆದಿದೆ. ನಿನ್ನೆ ಮದುವೆಯ ಬಳಿಕ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಬ್ಬರೂ ಸಹ ವಧು-ವರರಾಗಿ ಅದ್ಭುತವಾಗಿ ಕಾಣುತ್ತಿದ್ದರು. ರಶ್ಮಿಕಾ ಮತ್ತು ವಿಜಯ್ ಅವರ ಗ್ರೂಮ್-ಬ್ರೈಬಲ್ ಲುಕ್ ಸಖತ್ ವೈರಲ್ ಆಗುತ್ತಿದೆ. ಇವರಿಬ್ಬರ ಲುಕ್ ಹಿಂದೆ ಇರುವುದು ಒಬ್ಬರೇ ವ್ಯಕ್ತಿ, ಅವರ ಹೆಸರು ಅನಾಮಿಕಾ ಖನ್ನಾ.
ತಮ್ಮದೇ ಹೆಸರಿನ ಫ್ಯಾಷನ್ ಬ್ರ್ಯಾಂಡನ್ನು ಅನಾಮಿಕಾ ಖನ್ನಾ ಹೊಂದಿದ್ದು ಅದ್ಭುತವಾದ ವಿನ್ಯಾಸಗಳನ್ನು ಅವರು ಮಾಡಿದ್ದಾರೆ. ವಿಜಯ್-ರಶ್ಮಿಕಾ ಇಬ್ಬರ ಮದುವೆಯ ಲುಕ್ ಮಾತ್ರವಲ್ಲದೆ ಹಳದಿ, ಸಂಗೀತ್ ಇನ್ನೂ ಕೆಲವು ಕಾರ್ಯಕ್ರಮಗಳಿಗೂ ಸಹ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅದರಲ್ಲೂ ಮದುವೆಗೆ ಅವರು ವಿನ್ಯಾಸ ಮಾಡಿರುವ ಉಡುಗೆಗಳಂತೂ ಅದ್ಭುತವಾಗಿದ್ದು, ಇಬ್ಬರ ಚಿತ್ರ ನೋಡಿದವರು ರಾಮ-ಸೀತೆಯನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟು ಅದ್ಭುತವಾಗಿ ಅವರ ಲುಕ್ ಮೂಡಿ ಬಂದಿದೆ.
ಇಬ್ಬರ ಉಡುಗೆಗಳ ಹಿಂದಿನ ಕಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಾಮಿಕಾ, ‘ಕೆಂಪು ಬಣ್ಣದ ಅಂಚಿನ ಚೌಕಟ್ಟು ಹೊಂದಿರುವ ರಶ್ಮಿಕಾ ಮಂದಣ್ಣ ಅವರ ಲುಕ್ ಪವಿತ್ರ ಕಲಾತ್ಮಕತೆಯ ಆಚರಣೆಯಾಗಿದೆ. ದೇವಾಲಯದ ವಿಶಿಷ್ಟತೆಗಳನ್ನು ಸೀರೆಯ ಅಂಚಿನ ಮೇಲೆ ಸಂಕೀರ್ಣವಾಗಿ ಕಸೂತಿ ಮಾಡಲಾಗಿದೆ, ಹೈದರಾಬಾದ್‌ನ ಪಾರಂಪರಿಕ ದೇವಾಲಯದ ಕೆತ್ತನೆಗಳು ಮತ್ತು ಆಧ್ಯಾತ್ಮಿಕತೆಯನ್ನು ಈ ವಿನ್ಯಾಸ ಪ್ರತಿಧ್ವನಿಸುತ್ತದೆ. ಪ್ರಾಚೀನ ಚಿನ್ನವನ್ನು ಬಳಸಿ ಕೈಯಿಂದ ಮಾಡಿರುವ ಕಸೂತಿ ಅದ್ಭೂತ ಕಲಾತ್ಮಕತೆಯನ್ನು ನೀಡಿದೆ. ಸೀರೆಯನ್ ಕೇವಲ ಉಡುಗೆ ಮಾತ್ರ ಆಗಿಸದೆ ಭಕ್ತಿ ಮತ್ತು ಕರಕುಶಲತೆಯ ಕ್ಯಾನ್ವಾಸ್ ಆಗಿ ಪರಿವರ್ತಿಸಲಾಗಿದೆ. ಜೊತೆಗೆ ಸ್ತ್ರೀ ಶಕ್ತಿಯನ್ನು ಸಹ ಈ ಉಡುಗೆ ಪ್ರತಿನಿಧಿಸುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ತಾಳಿ ಕಟ್ಟುವಾಗ ರಶ್ಮಿಕಾ ಮಂದಣ್ಣ ಆನಂದ ಭಾಷ್ಪ
ಇನ್ನು ವಿಜಯ್ ದೇವರಕೊಂಡ ಅವರ ಉಡುಗೆ ಅವರ ಲುಕ್ ನ ಹಿಂದಿನ ಆಲೋಚನೆಯ ಬಗ್ಗೆ ಹೇಳಿರುವ ಅನಾಮಿಕಾ, ‘ಹೈದರಾಬಾದ್‌ನ ಜವಳಿ ಪರಂಪರೆಯಲ್ಲಿ ಬೇರೂರಿರುವ ವಿಜಯ್ ದೇವರಕೊಂಡ ಅವರ ವಿವಾಹ ಉಡುಪು ವನಸಿಂಗರಂ (ನೇಯ್ಗೆಯ ವಿಧಾನ) ನೇಯ್ಗೆಯಿಂದ ಮಾಡಿದ್ದಾಗಿದೆ. ದಂತದ ನುಣುಪಿನ ಧೋತಿಯನ್ನು ಸಿಂಧೂರ ಅಂಗವಸ್ತ್ರದೊಂದಿಗೆ ಜೊತೆ ಮಾಡಲಾಗಿದೆ. ಇದು ಅರಣ್ಯ ಮತ್ತು ದೇವಾಲಯದ ಕಲಾತ್ಮಕತೆಯಿಂದ ಕಸೂತಿ ಮಾಡಲ್ಪಟ್ಟಿದೆ. ಶಕ್ತಿ, ವಂಶಾವಳಿ ಮತ್ತು ಪವಿತ್ರ ವಾಸ್ತುಶಿಲ್ಪದ ಸಂಕೇತಗಳು ಅವರ ಉಡುಗೆಯಲ್ಲಿ ಪ್ರತಿನಿಧಿಸುತ್ತವೆ ಎಂದಿದ್ದಾರೆ. ವಿಜಯ್ ದೇವರಕೊಂಡ ಅವರು ನೇಕಾರರ ಸಮುದಾಯಕ್ಕೆ ಸೇರಿದವರೇ ಆಗಿರುವ ಕಾರಣ ಅದನ್ನು ಗಮನದಲ್ಲಿಟ್ಟುಕೊಂಡೇ ಅವರ ಉಡುಪನ್ನು ವಿನ್ಯಾಸ ಮಾಡಲಾಗಿದೆ.
ರಶ್ಮಿಕಾ ಮತ್ತು ವಿಜಯ್ ಅವರ ಉಡುಪಿನ ವಿನ್ಯಾಸವಂತೂ ಒಂದೇ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಅದರಲ್ಲೂ ವಿಜಯ್ ದೇವರಕೊಂಡ ಅವರ ಉಡುಗೆ, ಧರಿಸಿದ್ದ ಆಭರಣಗಳು, ಒಟ್ಟಾರೆ ಅವರ ಸ್ಟೈಲ್ ಅಂತೂ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




