2025ರ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಒಂದು ಕನ್ನಡ ಸಿನಿಮಾ
Year in search 2025: 2025 ಚಿತ್ರರಂಗದ ಪಾಲಿಗೆ ಉತ್ತಮ ವರ್ಷವೇ ಆಗಿದೆ. ಹಲವು ಒಳ್ಳೆಯ, ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ಇನ್ನೇನು 2025 ಮುಗಿಯುತ್ತಾ ಬಂದಿದೆ. ಇನ್ನೊಂದು ವಾರ ಕಳೆದರೆ 2026ರ ಆಗಮನ ಆಗುತ್ತದೆ. ಈ ವರ್ಷ ಸಿನಿಮಾ ಪ್ರೇಮಿಗಳು ಗೂಗಲ್ನಲ್ಲಿ ಹೆಚ್ಚು ಹುಡುಕಿದ ಸಿನಿಮಾ ಯಾವುದು? ಯಾವ ಭಾರತದ ಸಿನಿಮಾ ಬಗ್ಗೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ? ಇಲ್ಲಿದೆ ನೋಡಿ ಪಟ್ಟಿ. ಅಂದಹಾಗೆ ಈ ಪಟ್ಟಿಯಲ್ಲಿ ಒಂದು ಕನ್ನಡದ ಸಿನಿಮಾ ಸಹ ಇದೆ.
Updated on: Dec 24, 2025 | 3:50 PM

ಇದೇ ವರ್ಷ ಬಿಡುಗಡೆ ಆದ ಸಿನಿಮಾಗಳು ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿರುವುದು ಸಾಮಾನ್ಯ. ಆದರೆ 2016ರಲ್ಲಿ ಬಿಡುಗಡೆ ಆದ ‘ಸನಮ್ ಥೇರಿ ಕಸಮ್’ ಸಿನಿಮಾ ಸಹ ಇದೇ ಪಟ್ಟಿಯಲ್ಲಿದೆ. ಈ ವರ್ಷ ಈ ಸಿನಿಮಾ ಮರು ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಪಟ್ಟಿಯಲ್ಲಿ ಈ ಸಿನಿಮಾಕ್ಕೆ ಐದನೇ ಸ್ಥಾನವಿದೆ.

ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಮತ್ತೊಂದು ಫ್ಲಾಪ್ ಅಥವಾ ಸಾಧಾರಣ ಹಿಟ್ ಸಿನಿಮಾ ಇದೆ. ಅದುವೇ ‘ವಾರ್ 2’. ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಪಟ್ಟಿಯಲ್ಲಿ ‘ವಾರ್ 2’ಗೆ ನಾಲ್ಕನೇ ಸ್ಥಾನ.

ರಜನೀಕಾಂತ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾ ಈ ವರ್ಷ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಆಗಿತ್ತು. ಉಪೇಂದ್ರ, ಆಮಿರ್ ಖಾನ್ ಸಹ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲ. ಆದರೆ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಇದಕ್ಕೆ ಮೂರನೆ ಸ್ಥಾನ.

ಕನ್ನಡ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಭಾರತದ ಅತಿ ದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ. ಬಾಕ್ಸ್ ಆಫೀಸ್ನಲ್ಲಿ 900 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ ಈ ಚಿತ್ರ, ಸಿನಿಮಾ ಪ್ರೇಮಿಗಳ ಅತೀವ ಕುತೂಹಲ ಕೆರಳಿಸಿದ್ದ ಸಿನಿಮಾ ಸಹ ಆಗಿದೆ. ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ‘ಕಾಂತಾರ: ಚಾಪ್ಟರ್ 1’ಗೆ ಎರಡನೇ ಸ್ಥಾನ ದೊರೆತಿದೆ.

ಈ ವರ್ಷದ ಅಚಾನಕ್ ಹಿಟ್ ಸಿನಿಮಾ ಎಂದರೆ ಅದು ಹಿಂದಿಯ ‘ಸೈಯ್ಯಾರ’. ಯಾರೂ ಹೆಸರೂ ಕೇಳದೇ ಇದ್ದ ನಾಯಕ-ನಾಯಕಿಯ ‘ಸೈಯ್ಯಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಚ್ ಚಲ್ ಎಬ್ಬಿಸಿತು. ಈ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ.

ಪಟ್ಟಿಯಲ್ಲಿ ಆರನೇ ಸ್ಥಾನ ಮಲಯಾಳಂ ಸಿನಿಮಾ ‘ಮಾರ್ಕೊ’, ಏಳನೇ ಸ್ಥಾನದಲ್ಲಿದೆ ‘ಹೌಸ್ಫುಲ್ 5’, ಎಂಟನೇ ಸ್ಥಾನದಲ್ಲಿ ರಾಮ್ ಚರಣ್ ನಟನೆಯ ಫ್ಲಾಪ್ ಸಿನಿಮಾ ‘ಗೇಮ್ ಚೇಂಜರ್’ ಒಂಬತ್ತನೇ ಸ್ಥಾನದಲ್ಲಿ ‘ಮಿಸಸ್’, ಹತ್ತನೇ ಸ್ಥಾನದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿದ್ದ ‘ಮಹಾವತಾರ ನರಸಿಂಹ’ ಇದೆ.




