Tips to Reduce Stress During Covid: ಕೊರೊನಾದ ಒತ್ತಡ ನಿವಾರಣೆಗೆ ಇಲ್ಲಿವೆ 7 ಮಾರ್ಗಗಳು

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿ 7 ಟಿಪ್ಸ್​ಗಳಿವೆ. ಇವುಗಳನ್ನು ಅನುಸರಿಸುವ ಮೂಲಕ ಒತ್ತಡ ನಿವಾರಣೆ ಮಾಡಿಕೊಳ್ಳಿ.

  • TV9 Web Team
  • Published On - 14:08 PM, 17 Apr 2021
Tips to Reduce Stress During Covid: ಕೊರೊನಾದ ಒತ್ತಡ ನಿವಾರಣೆಗೆ ಇಲ್ಲಿವೆ 7 ಮಾರ್ಗಗಳು
ಪ್ರಾತಿನಿಧಿಕ ಚಿತ್ರ

ಕೊರೊನಾ ಕಾಣಿಸಿಕೊಂಡ ಮೇಲೆ ಸಿಕ್ಕಾಪಟ್ಟೆ ಮಾನಸಿಕ ಒತ್ತಡ ಹೆಚ್ಚಾಗಿದೆ ಅನ್ನೋರು, ಆತಂಕ ಕಾಡುತ್ತಿರುವವರು, ಅಭದ್ರತೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕರಿಗೆ ತಮ್ಮ ಒತ್ತಡವನ್ನು ನಿವಾರಣೆ ಮಾಡಿಕೊಳ್ಳೋದು ಹೇಗೆ ಎಂಬ ಬಗ್ಗೆಯೇ ಗೊತ್ತಾಗ್ತಾ ಇಲ್ಲ. ಉದ್ಯೋಗ ಕಳೆದುಕೊಳ್ಳಬಹುದೇನೋ ಎಂಬ ಭಯ, ಬಿಜಿನೆಸ್ ಏನಾಗುತ್ತದೋ ಏನೋ ಎಂಬ ಚಿಂತೆ, ಮಕ್ಕಳ ಭವಿಷ್ಯದ ಬಗ್ಗೆ, ತಮ್ಮದೇ ಆರೋಗ್ಯದ ಬಗ್ಗೆ ಹೀಗೆ ನಾನಾ ಒತ್ತಡ, ಚಿಂತೆಗಳು ಕಾಡುತ್ತಿವೆ. ಅದರಲ್ಲೂ ಲಾಕ್​ಡೌನ್, ನೈಟ್ ಕರ್ಫ್ಯೂ ಇಂಥದ್ದನ್ನು ಹಾಕಿದ ಸಂದರ್ಭದಲ್ಲಿ ಮತ್ತೂ ಒತ್ತಡ ಆಗುತ್ತದೆ. ಹಾಗಿದ್ದರೆ ಇದರಿಂದ ಹೊರಬರುವುದಕ್ಕೆ ಏನು ಮಾಡಬಹುದು? ಇಲ್ಲಿವೆ ಕೆಲವು ಟಿಪ್ಸ್​ಗಳು.

1. ಈ ಸಮಸ್ಯೆ ನಿಮ್ಮೊಬ್ಬರಿಗೇ ಬಂದಿರುವುದಲ್ಲ
ಈಗ ನೀವು ಎದುರಿಸುತ್ತಿರುವ ಸಮಸ್ಯೆ ಒಬ್ಬರಿಗೇ ಬಂದಿರುವುದಲ್ಲ. ಈ ಕಾಲಘಟ್ಟದ ಎಲ್ಲರಿಗೂ ಬಂದಿದೆ ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಿ. ಈ ಸಂಗತಿಯನ್ನು ಒಪ್ಪಿಕೊಳ್ಳಿ. ಹಲವರು ಈಗಿನ ಪರಿಸ್ಥಿತಿಯನ್ನು ತಮಗೆ ಮಾತ್ರ ಆಗಿರುವ ಅನಾಹುತ ಎಂಬಂತೆ ಚಿಂತೆಗೆ ಈಡಾಗುತ್ತಾರೆ. ಇದರಿಂದ ಮನಸಿಗೆ ಮತ್ತಷ್ಟು ಘಾತವಾಗುತ್ತದೆ. ಆದ್ದರಿಂದ ವಾಸ್ತವವನ್ನು ಒಪ್ಪಿಕೊಳ್ಳಿ. ಮಾನಸಿಕವಾಗಿ ಅದರೊಂದಿಗೆ ಮುನ್ನಡೆಯಿರಿ.

2. ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಅಗತ್ಯ ಇಲ್ಲ
ನೀವು ವರ್ಕ್ ಫ್ರಮ್ ಹೋಮ್ ಮಾಡುತ್ತಿರಬಹುದು. ಆದರೆ ಆ ಕಾರಣಕ್ಕೆ ಯಾವಾಗಲೋ ನಿದ್ದೆ ಮಾಡುವುದು, ಮತ್ಯಾವಾಗಲೋ ಊಟ ಮಾಡುವುದು ಇಂಥದ್ದನ್ನೆಲ್ಲ ಮಾಡಬೇಡಿ. ಕೊರೊನಾ ಅದರ ಪಾಡಿಗಿದ್ದರೂ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಆಗದಂತೆ ನೋಡಿಕೊಳ್ಳಿ.

3. ನಿಮ್ಮ ಸಂತೋಷಕ್ಕಾಗಿ ಸಮಯ ಮೀಸಲಿಡಿ
ಈ ಮುಂಚಿಗಿಂತ ವರ್ಕ್ ಫ್ರಮ್ ಹೋಮ್ ಆದ ಮೇಲೆ ಕೆಲಸ ವಿಪರೀತ ಆಯಿತು ಅನ್ನೋರು ಜಾಸ್ತಿ. ಆದ್ದರಿಂದ ಉತ್ತಮ ಪುಸ್ತಕ ಓದುವುದು, ಸಂಗೀತ ಕೇಳುವುದು, ಕುಟುಂಬದ ಜತೆಗೆ ಸಮಯ ಕೇಳುವುದು ಆಗುತ್ತಿಲ್ಲ ಎಂದು ದೂರುತ್ತಾರೆ. ಈ ಕಾರಣಕ್ಕೆ ಕೂಡ ಒತ್ತಡವು ಹೆಚ್ಚಾಗುತ್ತದೆ. ಬಿಡುವಿನ ಸಮಯದಲ್ಲಿ ಉತ್ತಮ ಪುಸ್ತಕ ಓದಿ, ಸಿನಿಮಾ ನೋಡಿ, ನಾಟಕಗಳನ್ನು ನೋಡಿ (ಇವೆಲ್ಲವನ್ನೂ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಮೊಬೈಲ್​ಫೋನ್​ನಲ್ಲೇ ಮಾಡಬಹುದು).

4. ಸಾಧ್ಯವಾದಲ್ಲಿ ಪ್ರಕೃತಿ ಮಧ್ಯೆ ಸಮಯ ಕಳೆಯಿರಿ
ಸೂರ್ಯನ ಬೆಳಕು, ಉತ್ತಮ ಗಾಳಿಯಿಂದ ದೇಹ ಚಟುವಟಿಕೆಯಿಂದ ಇರುತ್ತದೆ. ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಅಂಥ ವಾತಾವರಣದಲ್ಲಿ ಸುತ್ತಾಡಿ. ಆದರೆ ಗುಂಪುಗೂಡದಂತೆ ನೋಡಿಕೊಳ್ಳಿ. ನಿಮಗೆ ಜನರು ಎದುರಾದಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ನಿಮ್ಮ ಪ್ರದೇಶದಲ್ಲಿ ಜಾರಿಯಲ್ಲಿ ಇರುವ ನಿರ್ಬಂಧಗಳನ್ನು ಪಾಲಿಸಿ.

5. ವ್ಯಾಯಾಮ ಮಾಡುವುದಕ್ಕೆ ದಾರಿ ಕಂಡುಕೊಳ್ಳಿ
ಸೈಕ್ಲಿಂಗ್, ಬೆಟ್ಟ ಏರುವುದು, ವ್ಯಾಯಾಮಗಳನ್ನು ಮಾಡುವುದರಿಂದ ಮಾನಸಿಕ ಆತಂಕಗಳು ದೂರವಾಗುತ್ತವೆ. ಆದರೆ ಮತ್ತೊಮ್ಮೆ ಗಮನಿಸಿ, ನಿಯಮ- ನಿಬಂಧನೆಗಳನ್ನು ಗಮನಿಸಿ. ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಗಮನಿಸಿ, ನಿಮ್ಮ ವ್ಯಾಪ್ತಿಯೊಳಗೆ ಮಾಡಬಹುದಾದ ವ್ಯಾಯಾಮಗಳನ್ನು ಮಾಡಿ.

6. ಸ್ವಂತ ಔಷಧ ಮಾಡಿಕೊಳ್ಳಬೇಡಿ
ವಾಟ್ಸಾಪ್ ಫಾರ್ವಡೆಡ್ ಮೆಸೇಜ್​ಗಳಲ್ಲಿ ಬಂದದ್ದು, ಫೇಸ್​ಬುಕ್ ಸೇರಿದಂತೆ ಯಾವುದಾದರೂ ಸೋಷಿಯಲ್ ಮೀಡಿಯಾಗಳಲ್ಲಿ ಬಂದಿದ್ದು ಎಂದು ಸ್ವಂತವಾಗಿ ನಿಮ್ಮ ಪರಿಹಾರ ಎಂದು ಮಾಡಿಕೊಳ್ಳಬೇಡಿ. ಇನ್ನು ಮದ್ಯಸೇವನೆ ಸೇರಿದಂತೆ ಮೊದಲಾದ ಅಪಾಯಕಾರಿ ಕೆಲಸಗಳಿಗೆ ಕೈ ಹಾಕದಿರಿ.

7. ಮನಸ್ಸು ಶಾಂತವಾಗುವಂಥ ಅಭ್ಯಾಸಗಳನ್ನು ಮಾಡಿ
ದೀರ್ಘವಾದ ಉಸಿರಾಟದ ಅಭ್ಯಾಸ, ಧ್ಯಾನ, ಯೋಗದಂಥ ಅಭ್ಯಾಸಗಳಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಇವುಗಳ ನಿರಂತರ ಅಭ್ಯಾಸದಿಂದ ಅನುಕೂಲವಾಗುತ್ತದೆ.

ಇತರರಿಗೆ ಸಹಾಯ ಮಾಡುವುದರಿಂದ ಆತ್ಮವಿಶ್ವಾಸ ತುಂಬುತ್ತದೆ. ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೆ, ಜಾಗ್ರತೆಯಿಂದ ನಿಮ್ಮಿಂದ ಸಾಧ್ಯವಾಗುವಂಥ ಸಹಾಯವನ್ನು ಇತರರಿಗೆ ಮಾಡಿ. ಆತ್ಮವಿಶ್ವಾಸ ಕಡಿಮೆ ಮಾಡಿಕೊಳ್ಳದಂತೆ, ಅದೇ ಸಂದರ್ಭದಲ್ಲಿ ಈಗಿನ ಪರಿಸ್ಥಿತಿಗೆ ಸೂಕ್ತವಾಗಿ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸಿ.

ಇದನ್ನೂ ಓದಿ: Immunity Booster Foods: ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು 5 ಆಹಾರ ಪದಾರ್ಥಗಳು ಇಲ್ಲಿವೆ

(Here are the 7 tips to reduce Covid pandemic related stress, anxiety, fear, and worry)