Celebrity Health Life: ಸುಧಾಮೂರ್ತಿ ಅವರು ತಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಸರಿಸುವ ನಿಯಮಗಳಿವು!

ಸುಧಾಮೂರ್ತಿ ಅತಿದೊಡ್ಡ ಶ್ರಿಮಂತ ವ್ಯಕ್ತಿಯಾದರೂ ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾದವರು. ಸಾಮಾನ್ಯವಾಗಿ ನಾವು ಇವರ ಸಮಾಜಸೇವೆ, ಇವರ ಕೊಡುಗೆಗಳ ಬಗ್ಗೆ ತಿಳಿದುಕೊಂಡಿರುತ್ತೇವೆ. ಆದರೆ ಇವರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಂಡಿರಬಹುದು? ಈ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹಕ್ಕೆ ಅವರು ಪಾಲನೆ ಮಾಡುವ ಆಹಾರ ಕ್ರಮ ಹೇಗಿರಬಹುದು ಎಂಬುದನ್ನು ತಿಳಿದುಕೊಳ್ಳೋಣ.

Celebrity Health Life: ಸುಧಾಮೂರ್ತಿ ಅವರು ತಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಸರಿಸುವ ನಿಯಮಗಳಿವು!
ಸುಧಾ ಮೂರ್ತಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 14, 2024 | 10:57 AM

ಸುಧಾಮೂರ್ತಿ(Sudha Murthy) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಈ ಹೆಸರು ಜಗತ್ಪ್ರಸಿದ್ದ. ಅತಿದೊಡ್ಡ ಶ್ರಿಮಂತರಾದರು ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾದವರು. ಸಾಮಾನ್ಯವಾಗಿ ನಾವು ಇವರ ಸಮಾಜಸೇವೆ, ಇವರ ಕೊಡುಗೆಗಳ ಬಗ್ಗೆ ತಿಳಿದುಕೊಂಡಿರುತ್ತೇವೆ. ಆದರೆ ಇವರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಂಡಿರಬಹುದು? ಈ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹಕ್ಕೆ ಅವರು ಪಾಲನೆ ಮಾಡುವ ಆಹಾರ ಕ್ರಮ ಹೇಗಿರಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇತ್ತೀಚಿಗೆ ಸುಧಾ ಮೂರ್ತಿ ಅವರು ಪತ್ರಕರ್ತೆ, ಲೇಖಕಿಯಾಗಿರುವ ಶೈಲಿ ಚೋಪ್ರಾ ಅವರೊಂದಿಗಿನ ಮಾತುಕತೆಯಲ್ಲಿ, ತಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಅದರ ಜೊತೆಗೆ ಹೆಣ್ಣಿನ ಋತುಬಂಧದ ಪ್ರಯಾಣ ಹೇಗಿರುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಅವರ ಬದುಕಿನಲ್ಲಿ ಎದುರಿಸಿದ ಆರೋಗ್ಯ ಸಮಸ್ಯೆಗಳನ್ನು ಹಂಚಿಕೊಂಡಿದ್ದು ಹಾರ್ಮೋನುಗಳ ಅಸಮತೋಲನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಹಾರ್ಮೋನುಗಳ ಅಸಮತೋಲನವನ್ನು ಹಿಮ್ಮೆಟ್ಟಿಸುವುದು ಹೇಗೆ?

ಸುಧಾ ಮೂರ್ತಿ ಅವರ ತಂದೆ ಸ್ತ್ರೀರೋಗ ತಜ್ಞರಾಗಿದ್ದರು. ಮೊದಲಿನಿಂದಲೂ, ಅಂದರೆ ಅವರು ಪ್ರೌಢಾವಸ್ಥೆಯಲ್ಲಿರುವಾಗ ಅವರ ತಂದೆ ಹಾರ್ಮೋನುಗಳ ಏರಿಳಿತ ಬಗ್ಗೆ ಮತ್ತು ಋತುಚಕ್ರದ ದಿನಗಳ ಬಗ್ಗೆ ಮೊದಲೇ ತಿಳಿಸಿದ್ದರು. ತಂದೆ ಉತ್ತಮ ಸ್ನೇಹಿತನ ರೀತಿ ಇದ್ದ ಕಾರಣ ಅವರಿಗೆ ಯಾವುದೇ ರೀತಿಯ ಕಷ್ಟವಾಗಲಿಲ್ಲ. ಪ್ರತಿಯೊಬ್ಬ ತಂದೆ, ತಾಯಿ ಕೂಡ ಮಕ್ಕಳಿಗೆ ಈ ವಿಷಯಗಳ ಬಗ್ಗೆ ಚರ್ಚಿಸಿ ತಿಳಿಸಿ ಹೇಳಬೇಕು ಎಂದು ಅವರು ಹೇಳುತ್ತಾರೆ. ಏಕೆಂದರೆ ಇದು ಶಾಪ ಅಥವಾ ಅಶುದ್ಧವಲ್ಲ. ಹಾರ್ಮೋನುಗಳ ಅಸಮತೋಲನದಿಂದ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತವೆ ಆಗ ತೂಕ ಹೆಚ್ಚಾಗುತ್ತದೆ, ಕೆಲವೊಮ್ಮೆ ಖಿನ್ನತೆಗೆ ಒಳಗಾಗಬಹುದು, ಇನ್ನು ಕೆಲವೊಮ್ಮೆ ಸಾಮಾನ್ಯವಾಗಿ ವರ್ತಿಸಬಹುದು ಹಾಗಾಗಿ ಇದು ಸಾಮಾನ್ಯ. ಆಗ ಅದನ್ನು ಹಿಮ್ಮೆಟ್ಟಿಸಲು ನಿಮ್ಮನ್ನು ನೀವು ಖುಷಿಯಾಗಿ ಇಟ್ಟುಕೊಳ್ಳಲು ಹೊಸ ಹೊಸ ಕೆಲಸ ಮಾಡುವುದು, ಓದುವುದು, ವ್ಯಾಯಾಮ ಮಾಡುವುದು ಅಥವಾ ಚಲನಚಿತ್ರವನ್ನು ನೋಡುವುದು ಮುಂತಾದ ಆಸಕ್ತಿಯಿರುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಹೇಳುತ್ತಾರೆ.

ಮಹಿಳೆಯರ ಸಮಸ್ಯೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಿ

ಋತುಬಂಧದ ಸಮಯದಲ್ಲಿ ಅವರಿಗಾದ ಒಂದು ಅನುಭವವನ್ನು ಅವರು ಹಂಚಿಕೊಂಡಿದ್ದು “ಒಂದು ದಿನ ನನ್ನ ಇಬ್ಬರು ಮಕ್ಕಳು ಹೊರಗೆ ಹೋಗಿದ್ದರು. ನಾನು ಇದ್ದಕ್ಕಿದ್ದಂತೆ ಅವರನ್ನು ನೆನಪಿಸಿಕೊಂಡು ಅಳಲು ಆರಂಭಿಸಿದೆ. ಬಳಿಕ ನನಗೆ ಆಶ್ಚರ್ಯವೆನಿಸಿತು. ಏಕೆಂದರೆ ಅವರು ಯುಎಸ್​​​ನಲ್ಲಿ ಅಧ್ಯಯನ ಮಾಡಲು ಹೊರಟಾಗಲೂ ನಾನು ಅತ್ತಿರಲಿಲ್ಲ, ಆದರೆ ಈಗ ಯಾಕೆ ಅಳುತ್ತಿದ್ದೇನೆ? ಎಂದು ಯೋಚಿಸಿದೆ. ಆಗ ನನಗೆ ಅರ್ಥವಾಯಿತು ಇದು ನನ್ನ ಹಾರ್ಮೋನುಗಳ ಸಮಸ್ಯೆ. ಆ ಸಮಯದಲ್ಲಿ ನನ್ನ ತಂದೆ ಹೇಳುತ್ತಿದ್ದ ಮಾತುಗಳು ನನಗೆ ನೆನಪಾದವು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ತಮ್ಮ ಪತಿಯ ಬಳಿ ಹೇಳಿದ್ದರಂತೆ, “ಕಾರಣವಿಲ್ಲದೆ ನಾನು ಅಸಮಾಧಾನಗೊಂಡರೆ, ಅದನ್ನು ಹಾರ್ಮೋನ್ ಏರಿಳಿತ ಎಂದು ಭಾವಿಸಿ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಅದರ ಬದಲು ನನ್ನನ್ನು ಅರ್ಥ ಮಾಡಿಕೊಳ್ಳಿ ಎಂದು. ಅವರು ಹೇಳುವ ಪ್ರಕಾರ ಮಹಿಳೆಯರ ಈ ಸಮಸ್ಯೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.

ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಸಲಹೆಗಳು

ಸುಧಾ ಮೂರ್ತಿ ಅವರು ಮಹಿಳೆಯರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಅದಕ್ಕೆ ಆದ್ಯತೆ ನೀಡಲು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಲು ಸಲಹೆ ನೀಡುತ್ತಾರೆ. ಅವರ ಪ್ರಕಾರ “ತಾಯಿ ಮಗುವಿಗೆ ಹಾಲುಣಿಸುವ ಮೊದಲು, ಆಕೆ ಏನನ್ನಾದರೂ ಸೇವನೆ ಮಾಡಬೇಕು. ಮೊದಲು ಆಕೆ ಗಟ್ಟಿಯಾಗಬೇಕು. ಮಗುವಿಗೆ ಹಾಲುಣಿಸಿದ ನಂತರ ಸೇವನೆ ಮಾಡಿದರೆ ಆಕೆಗೆ ಆಯಾಸವಾಗುತ್ತದೆ. ಮಹಿಳೆಯರು ಯಾವಾಗಲೂ ತಮ್ಮ ಗಂಡ, ಮಕ್ಕಳು ಎನ್ನುತ್ತಾ ತಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಮನೆಯವರು ಎಲ್ಲರೂ ಊಟ ಮಾಡಿದ ಬಳಿಕ ಕೊನೆಯಲ್ಲಿ ಅವರು ಊಟ ಮಾಡುತ್ತಾರೆ. ಈ ರೀತಿ ಮಾಡಬಾರದು ಮಹಿಳೆಯರು ತಮ್ಮ ಆರೋಗ್ಯಕ್ಕೆ ಮೊದಲು ಆದ್ಯತೆ ನೀಡಬೇಕು ಏಕೆಂದರೆ ಮಹಿಳೆಯ ಆರೋಗ್ಯ ಚೆನ್ನಾಗಿದ್ದರೆ, ಇಡೀ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ. ಅದಲ್ಲದೆ ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವಿಸಬೇಕು, ವ್ಯಾಯಾಮ ಮಾಡಬೇಕು ಮತ್ತು ಸಿಹಿ ಅಥವಾ ಎಣ್ಣೆಯುಕ್ತ ಆಹಾರವನ್ನು ನಿಯಂತ್ರಿಸಬೇಕು. ಜೊತೆಗೆ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು” ಎಂದು ಅವರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:56 am, Wed, 14 August 24