ವೈದ್ಯಕೀಯ ಜ್ಞಾನದ ಪರಿಮಿತಿಯೊಳಗೆ ಚಿಕಿತ್ಸೆ ಕೊಡಬಹುದಷ್ಟೇ, ಬದುಕಿಸಿಯೇ ತೀರುತ್ತೇನೆ ಎಂಬ ಛಲ ಉಳಿದಿಲ್ಲ: ವೈದ್ಯರು ತೆರೆದಿಟ್ಟ ವಾಸ್ತವ ಸಂಗತಿ

Corona Second Wave: ಕೊರೊನಾ ಎರಡನೇ ಅಲೆ ಮೊದಲಿಗಿಂತಲೂ ಗಂಭೀರವಾಗಿದೆ. ಆದರೆ, ಜನರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂತಹ ವಿಷಮ ವೇಳೆಯಲ್ಲಿ ಸಂಕಟಗಳನ್ನೆಲ್ಲಾ ಮೈಮೇಲೆ ಹೊತ್ತಿರುವ ವೈದ್ಯರೊಬ್ಬರು ತಮ್ಮ ಮೂಕ ವೇದನೆಯನ್ನು ಬಿಚ್ಚಿಟ್ಟಿದ್ದು ಹೀಗೆ.

ವೈದ್ಯಕೀಯ ಜ್ಞಾನದ ಪರಿಮಿತಿಯೊಳಗೆ ಚಿಕಿತ್ಸೆ ಕೊಡಬಹುದಷ್ಟೇ, ಬದುಕಿಸಿಯೇ ತೀರುತ್ತೇನೆ ಎಂಬ ಛಲ ಉಳಿದಿಲ್ಲ: ವೈದ್ಯರು ತೆರೆದಿಟ್ಟ ವಾಸ್ತವ ಸಂಗತಿ
ಪ್ರಾತಿನಿಧಿಕ ಚಿತ್ರ
Follow us
Skanda
| Updated By: ganapathi bhat

Updated on:Apr 16, 2021 | 3:18 PM

ಒಂದು ವರ್ಷದ ಹಿಂದೆ ಕೊರೊನಾ ಬಗ್ಗೆ ನಮ್ಮಲ್ಲೊಂದು ಭಯವಿತ್ತು. ಟಿವಿ ಪರದೆಯಲ್ಲಿ ಕಾಣೋ ಚಿತ್ರ ವಿಚಿತ್ರ ವಿನ್ಯಾಸದ ವೈರಣುವಿನಿಂದ ಹಿಡಿದು ಗುಂಡಿಗೆ ಎಸೆಯುತ್ತಿದ್ದ ಹೆಣಗಳ ತನಕ ಎಲ್ಲವೂ ನಮ್ಮೆದೆಯನ್ನು ಚುಚ್ಚುತ್ತಿದ್ದವು. ಆಗಿನ್ನೂ ನಾವು ಕಠೋರವಾಗಿರಲಿಲ್ಲ. ನಮ್ಮ ವ್ಯವಸ್ಥೆ ಹಾಸ್ಯಾಸ್ಪದವೂ ಆಗಿರಲಿಲ್ಲ. ಆದರೆ, ಯಾವಾಗ ಲಾಕ್‌ಡೌನ್ ಆಯಿತೋ ಜನರ ಬದುಕು ಸಂಪೂರ್ಣ ತಲೆಕೆಳಗಾಗಿ ಈ ಸಮಾಜದ ದಿಕ್ಕುದೆಸೆಗಳೆಲ್ಲಾ ಬದಲಾಗಿಹೋಯ್ತು. ಹೆಂಗೋ ದುಡಿದು ಬದುಕ್ತೀನಿ ಎಂಬ ಧೈರ್ಯದಲ್ಲಿದ್ದವರೆಲ್ಲರೂ ಹೆಂಗೆ ದುಡಿಯೋದು? ದುಡಿಯೋಕೆ ಏನಿದೆ? ಅನ್ನದ ಮಾರ್ಗ ಯಾವುದು? ಅಂತ ಚಡಪಡಿಸೋ ಹಂತಕ್ಕೆ ಬಂದರು. ಅಲ್ಲಿಂದ ಮನುಷ್ಯನ ನಿಜಗುಣದ ಅನಾವರಣ ಆಗಲಾರಂಭಿಸಿತು. ಹಸಿವಿನಿಂದ ಸಾಯೋ ಬದಲು ಹೊರಗೆ ಬಂದು ದುಡಿದು ತಿನ್ನಬೇಕು, ಕೊರೊನಾದಿಂದ ಸತ್ತರೆ ನಮ್ಮ ಹಣೆಬರಹ ಎಂಬಂತಹ ಮನಸ್ಥಿತಿ ಸಹಜವಾಗಿ ಹುಟ್ಟಿಕೊಂಡಿತು. ಅದಕ್ಕೆ ತಕ್ಕನಾಗಿ ಸರ್ಕಾರ ರೂಪಿಸಿದ ನೀತಿ ನಿಯಮಗಳ ಹೆಸರಲ್ಲಿ ಅಕ್ರಮ ಸಂಪಾದನೆಗೆ ಇಳಿದವರೆಲ್ಲಾ ಅಲ್ಲಲ್ಲಿ ಬೆಳಕಿಗೆ ಬಂದರು. ಪೊಲೀಸರು ಕೊಟ್ಟ ಹೊಡೆತ, ರಾಜಕಾರಣಿಗಳ ತಲೆಬುಡವಿಲ್ಲದ ಹೇಳಿಕೆ, ಆಡಳಿತ-ವಿರೋಧ ಪಕ್ಷದವರ ಕಿತ್ತಾಟ, ಹಸಿವು ಇವೆಲ್ಲಾ ಸೇರಿ ಕೊರೊನಾ ಒಂದು ಪ್ರಹಸನ ಎಂಬಂತಹ ನಿರ್ಧಾರಕ್ಕೆ ಬಹುತೇಕ ಜನ ಬಂದುಬಿಟ್ಟರು.

ಇದೀಗ ಕೊರೊನಾ ಎರಡನೇ ಅಲೆ ಆವರಿಸಿದೆ. ಆದರೆ, ಈಗಲೂ ಬಹುತೇಕ ಜನರು ಕೊರೊನಾವನ್ನು ಪ್ರಹಸನದಂತೆಯೇ ಕಾಣುತ್ತಿದ್ದಾರೆ. ಆಡಳಿತ ವ್ಯವಸ್ಥೆ ಹಣ ಮಾಡಿಕೊಳ್ಳಲು ಎಬ್ಬಿಸಿರುವ ಸುಳ್ಳು ಅಲೆ ಎಂಬಂತೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ವಾಸ್ತವವಾಗಿ ಮೊದಲ ಅಲೆಗಿಂತಲೂ ಕೊರೊನಾ ಅತ್ಯಂತ ನಿರ್ದಯವಾಗಿ ಜೀವಗಳನ್ನು ಆಹುತಿ ಪಡೆಯುತ್ತಿದೆಯಾದರೂ ಅದರ ಗಂಭೀರತೆ ಜನರನ್ನು ತಲುಪುತ್ತಿಲ್ಲ. ಈ ಬಗ್ಗೆ ನಿಜವಾಗಿಯೂ ಆತಂಕಕ್ಕೆ ಒಳಗಾಗಿರುವುದು ವೈದ್ಯ ವರ್ಗ. ಕಳೆದ ಬಾರಿ ಪಿಪಿಇ ಕಿಟ್​ ಧರಿಸಿ ತಿಂಗಳುಗಟ್ಟಲೆ ಸೋಂಕಿತರೊಂದಿಗೆ ಇದ್ದು, ಅವರ ಜೀವ ಕಾಪಾಡಲು ಹೆಣಗಾಡಿದ ವೈದ್ಯರು ಕೊಂಚ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಅಲೆ ಬಂದಪ್ಪಳಿಸಿದೆ. ಆದರೆ, ಈ ಬಾರಿ ಅವರ ಶ್ರಮವನ್ನೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ ಕೊರೊನಾ ರೋಗಿಗಳ ಜೀವವನ್ನು ಕಸಿದುಕೊಳ್ಳುತ್ತಿದೆ. ಸದ್ಯ ಸರಣಿ ಸಾವುಗಳಿಗೆ ಮೂಕ ಸಾಕ್ಷಿಯಾಗಿರುವ ವೈದ್ಯರು ರೋಗಿಗಳು ಸಾಯುತ್ತಿರುವುದಕ್ಕೆ ಭಾವುಕರಾಗಬೇಕೋ, ಇಷ್ಟೆಲ್ಲಾ ಸಾವು ನೋವಾಗುತ್ತಿದ್ದರೂ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿಸಿ ಸೋಂಕನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದಕ್ಕೆ ಆಕ್ರೋಶಿತರಾಗಬೇಕೋ ಎಂದು ಅರಿಯದ ಸ್ಥಿತಿಯಲ್ಲಿದ್ದಾರೆ. ಈ ಸಂಕಟಗಳನ್ನೆಲ್ಲಾ ಮೈಮೇಲೆ ಹೊತ್ತಿರುವ ವೈದ್ಯರೊಬ್ಬರು ತಮ್ಮ ಮೂಕ ವೇದನೆಯನ್ನು ಬಿಚ್ಚಿಟ್ಟಿದ್ದು ಹೀಗೆ.

ಮಾಹಿತಿ: ಡಾ.ಲಕ್ಷ್ಮೀಶ.ಜೆ.ಹೆಗಡೆ ನಿರೂಪಣೆ: ಸ್ಕಂದ ಆಗುಂಬೆ

ನಾನು ಕಳೆದ ಅಕ್ಟೋಬರ್​ನಿಂದಲೂ ಮಹಾರಾಷ್ಟ್ರದ ಪ್ರಮುಖ ಆಸ್ಪತ್ರೆಯೊಂದರಲ್ಲಿ ಗಂಭಿರ ಸ್ಥಿತಿಗೆ ತಲುಪಿದ ಕೊವಿಡ್​ ರೋಗಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ನಮ್ಮದು ಜಿಲ್ಲಾಮಟ್ಟದಲ್ಲಿರುವ ದೊಡ್ಡ ಆಸ್ಪತ್ರೆಯಾದ್ದರಿಂದ ಇಲ್ಲಿಗೆ ಬರುವ ಬಹುತೇಕ ರೋಗಿಗಳು ಗಂಭಿರಾವಸ್ಥೆಯಲ್ಲೇ ಇರುತ್ತಾರೆ. ಹೆಚ್ಚೂಕಡಿಮೆ 500 ಬೆಡ್​ ಸಾಮರ್ಥ್ಯ ಹೊಂದಿದ ನಮ್ಮ ಆಸ್ಪತ್ರೆಯಲ್ಲಿ 50 ಐಸಿಯು ಬೆಡ್​ ಸೌಲಭ್ಯವೂ ಇದೆ. ಇಲ್ಲಿಗೆ ಹೊತ್ತುಗೊತ್ತಿಲ್ಲದೆ ಸೋಂಕಿತರನ್ನು ಕರೆತರಲಾಗುತ್ತದೆ. ಮೊದಲ ಅಲೆ ಇದ್ದಾಗಲೂ ಹೀಗೆ ಗಂಭೀರಾವಸ್ಥೆಗೆ ಹೋದ ಅದೆಷ್ಟೋ ಸೋಂಕಿತರನ್ನು ಇಲ್ಲಿಗೆ ತಂದು ಹಾಕಲಾಗುತ್ತಿತ್ತು ಹಾಗೂ ನಾವು ಅವರನ್ನು ಗುಣಪಡಿಸಿ ಕಳುಹಿಸುತ್ತಿದ್ದೆವು. ಈ ಬಾರಿಯೂ ಅದೇ ತೆರನಾಗಿ ಸೋಂಕಿತರನ್ನು ತಂದು ಹಾಕಲಾಗುತ್ತಿದೆ ವ್ಯತ್ಯಾಸವೆಂದರೆ ಅವರನ್ನು ಗುಣಪಡಿಸಿ ಕಳುಹಿಸಲು ಮಾತ್ರ ನಮಗೆ ಬಹಳ ಕಷ್ಟವಾಗಿದೆ.

ಕೊರೊನಾ ಮೊದಲ ಅಲೆಯಲ್ಲಿ ಸೋಂಕಿತರನ್ನು ಕೆಲ ಗುಣಲಕ್ಷಣಗಳ ಮೂಲಕ ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಾಗಿ ಹಿರಿಯರೇ ಆಸ್ಪತ್ರೆಗೆ ದಾಖಲಾಗುತ್ತಿದ್ದರಾದ್ದರಿಂದ ಅವರಿಗೆ ಇರುವ ಬೇರೆ ಬೇರೆ ಸಮಸ್ಯೆಗಳನ್ನು ಅವಲೋಕಿಸಿ ಪರಿಸ್ಥಿತಿಯ ಗಂಭೀರತೆಯನ್ನು ಅವಲೋಕಿಸಲಾಗುತ್ತಿತ್ತು. ಆದರೆ, ಈಗ ಅಂದರೆ ಎರಡನೇ ಅಲೆಯಲ್ಲಿ ಗುಣಲಕ್ಷಣಗಳನ್ನು ನೋಡಿ ಸೋಂಕಿತರನ್ನು ಪತ್ತೆಹಚ್ಚುವುದು ಅಸಾಧ್ಯ ಎಂಬಂತಾಗಿದೆ. ಇತ್ತೀಚೆಗಷ್ಟೇ ಒಬ್ಬರಿಗೆ ಬೇಧಿ ಕಾಣಿಸಿಕೊಂಡು ತೀರಾ ಆಯಾಸಕ್ಕೆ ಒಳಗಾಗಿದ್ದರು. ಬೇಧಿಯ ಹೊರತಾಗಿ ಬೇರೆ ಲಕ್ಷಣಗಳಿಲ್ಲದ ಕಾರಣ ಅವರಿಗೆ ಬೇರೆ ಸಮಸ್ಯೆ ಇದೆ ಎಂದೇ ಭಾವಿಸಲಾಗಿತ್ತು. ಆದರೆ, ಪರಿಸ್ಥಿತಿ ಏಕೋ ಗಂಭೀರ ಎಂದೆನಿಸಿ ಕೊರೊನಾ ಟೆಸ್ಟ್ ಮಾಡಿಸಿದರೆ ಪಾಸಿಟಿವ್! ಇನ್ನೊಂದು ಪ್ರಕರಣದಲ್ಲಿ ಸರಿಸುಮಾರು 30, 40 ವರ್ಷದ ಪ್ರಾಯದವರೊಬ್ಬರು ಬಳಲಿ ಆಸ್ಪತ್ರೆಗೆ ಬಂದಿದ್ದರು. ಅನುಮಾನದಿಂದ ಅವರಿಗೆ RT-PCR ಟೆಸ್ಟ್​ ಮಾಡಿಸಲಾಯ್ತು. ಆದರೆ, ದುರದೃಷ್ಟವಶಾತ್​ ವರದಿಯಲ್ಲಿ ಪಾಸಿಟಿವ್ ಎಂದು ಬರುವ ಮೊದಲೇ ಕೊರೊನಾ ಅವರ ಜೀವವನ್ನು ಬಲಿಪಡೆದಾಗಿತ್ತು.

ನಿಮಗೀಗ ನಮ್ಮನ್ನು ಕಂಡರೆ ನಿರ್ಭಾವುಕರು ಎಂದೆನಿಸಬಹುದು. ನಾನು ಕೆಲಸ ಮಾಡುತ್ತಿರುವಲ್ಲಿ ಇದುವರೆಗೆ ಐಸಿಯುಗೆ ಸೇರಿದ ಪೈಕಿ ಬದುಕಿ ಉಳಿದವರ ಸಂಖ್ಯೆ ತೀರಾ ಕಡಿಮೆ. ನಾನೇ ಸ್ವತಃ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಿದ ಹತ್ತಾರು ಮಂದಿಯಲ್ಲಿ ಗುಣಮುಖರಾಗಿ ಮನೆಗೆ ತೆರಳಿದವರು ಕೇವಲ ಐದರಿಂದ ಆರು. ಅದರ ಹೊರತಾಗಿ ನಮಗೀಗ ಬರೀ ಸಾವಿನ ಪಟ್ಟಿ ಬರೆಯುವ ಕೆಲಸ ಆಗಿದೆ. ಇವೆಲ್ಲವನ್ನೂ ನಿಮಗೆ ಹೆದರಿಸುವುದಕ್ಕಾಗಲೀ ಅಥವಾ ನಾವೇನೋ ಭಾರೀ ಶ್ರಮಪಡುತ್ತಿದ್ದೇವೆ ಎಂದು ನಿರೂಪಿಸುವುದಕ್ಕಾಗಲೀ ಹೇಳುತ್ತಿಲ್ಲ. ಬದಲಾಗಿ, ಇದೆಲ್ಲವೂ ವಾಸ್ತವಿಕ ಸಂಗತಿಗಳು. ನೀವು ನಂಬಲೇಬೇಕಾದ ಕಟು ಸತ್ಯಗಳು. ಕೊರೊನಾ ಹೆಸರಲ್ಲಿ ವೈದ್ಯರು ದುಡ್ಡು ಮಾಡಿದರು ಎಂಬ ದೊಡ್ಡ ಆರೋಪವೇ ನಮ್ಮ ವೈದ್ಯಕೀಯ ಲೋಕದ ಮೇಲಿದೆ. ಕೊರೊನಾ ಒಂದು ಮಾಫಿಯಾ ಎಂಬ ಕೂಗಿದೆ. ನೀವು ಕೊರಳಪಟ್ಟಿ ಹಿಡಿದು ಯಾರೂ ದುಡ್ಡು ಮಾಡಿಲ್ಲವಾ ಎಂದು ಕೇಳಿದರೆ ಖಡಾಖಂಡಿತವಾಗಿ ಇಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ಸತ್ಯವಾಗಿಯೂ ನಾವಿಲ್ಲ. ಆಸ್ಪತ್ರೆ ಕಟ್ಟಿಸಿ ಆರಾಮಾಗಿ ಕುಳಿತವರು, ಇದಕ್ಕಾಗಿಯೇ ಕಾಯುತ್ತಿದ್ದ ಕೆಲವರು ದುಡ್ಡು ಮಾಡಿರಬಹದು. ಇದನ್ನೇ ದುರುಪಯೋಗಪಡಿಸಿಕೊಂಡಿರಬಹುದು ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರೂ ಅದನ್ನೇ ಮಾಡಿದ್ದಾರೆ ಎಂಬ ಪೂರ್ವಗ್ರಹಕ್ಕೆ ದಯವಿಟ್ಟು ಒಳಗಾಗಬೇಡಿ. ನಮಗಿಲ್ಲಿ ಬೆಳಗ್ಗೆ ಎದ್ದರೆ ಬ್ರೆಡ್, ಬನ್ ಹೊರತಾಗಿ ಬೇರೆ ಬಿಸಿಬಿಸಿ ತಿಂಡಿ ತಿನ್ನಲು ಅರೆಕ್ಷಣವೂ ಸಮಯ ಇಲ್ಲ. ನಮ್ಮ ಬಾಯಿರುಚಿ, ಅಗತ್ಯ ಇದೆಲ್ಲವನ್ನೂ ಮರೆತಾಗಿದೆ. ಎದ್ದು ಆಸ್ಪತ್ರೆಗೆ ಒಂದು ಸುತ್ತು ಬರುವುದಕ್ಕೆ ಎರಡರಿಂದ ಮೂರು ತಾಸು ಹಿಡಿಯುತ್ತದೆ. ಮರಳಿ ರೂಮಿಗೆ ಬಂದು ಒಂದು ಸ್ನಾನ ಮಾಡಿ ಡಬ್ಬಾವಾಲದವರಿಗೆ ಹೇಳಿ ತರಿಸಿಟ್ಟ ಊಟವನ್ನು ಇನ್ನೇನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಐಸಿಯು ಕಡೆಯಿಂದ ಒಂದು ಕರೆ ಬಂದರೂ ಅಲ್ಲಿಗೆ ನಮ್ಮ ಊಟ ಮುಗಿದಂತೆ.

ನಾವು ಎಷ್ಟೇ ಆಸೆಗಣ್ಣಿನಿಂದ ಓಡಿದರೂ ಪವಾಡ ಜರುಗುವುದಿಲ್ಲ ನಿಮಗೊಂದು ವಿಷಯ ಗೊತ್ತಿರಲಿ ಕೊರೊನಾ ಮೊದಲ ಅಲೆ ವೇಳೆಗೆ ಊರಿಗೆಲ್ಲಾ ಬುದ್ದಿವಾದ ಹೇಳಿ ಪಿಪಿಇ ಕಿಟ್​ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದ ನಮಗೆ ಈಗ ಪಿಪಿಇ ಕಿಟ್ ಧರಿಸುವಷ್ಟೂ ಸಮಯವಿಲ್ಲ. ನನಗೆ ಕರೆ ಬಂದ ನಂತರ ಪಿಪಿಇ ಕಿಟ್​ ಧರಿಸುತ್ತಾ ಕುಳಿತರೆ ಅಲ್ಲಿ ಐಸಿಯುವಿನಲ್ಲಿ ಹೆಣಗಾಡುವ ರೋಗಿಯ ಜೀವವನ್ನು ನಾವೇ ಕೈಯ್ಯಾರೆ ತೆಗೆದಂತಾಗುತ್ತದೆ. ಅದಕ್ಕೂ ಮೇಲಾಗಿ ಆತನ ಜೀವವನ್ನು ನಾವು ಪಣಕ್ಕಿಟ್ಟು ನಾವು ಪಿಪಿಇ ಕಿಟ್​ ಧರಿಸಿಯೇ ಹೋಗುತ್ತೇವೆ ಎಂಬ ಹಟಕ್ಕೆ ಬಿದ್ದರೂ ಇಲ್ಲಿ ನಮಗೆ ಕೊಡುವ ಪಿಪಿಇ ಕಿಟ್​ ಸೋಂಕಿನಿಂದ ನಮ್ಮನ್ನು ಕಾಪಾಡಬಲ್ಲವು ಎಂಬ ಯಾವ ಭರವಸೆಯ ಲವಲೇಶವೂ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ರೋಗಿಯ ಜೀವವನ್ನು ಕಾಪಾಡಲು ಉಸಿರು ಬಿಗಿಹಿಡಿದು ಓಡುತ್ತೇವೆ.

ಆದರೆ, ನಾವು ಎಷ್ಟೇ ಆಸೆಗಣ್ಣಿನಿಂದ ಓಡಿ ಹೋದರೂ ಅಲ್ಲಿ ಪವಾಡವೇನೂ ಜರುಗುವುದಿಲ್ಲ. ಪ್ರತಿ ರೋಗಿಯನ್ನು ನೋಡಿದಾಗಲೂ ಇವರನ್ನಾದರೂ ಉಳಿಸಿಕೊಳ್ಳೋಣ ಎಂಬ ಬಯಕೆಯೊಂದಿಗೇ ನಾವು ಚಿಕಿತ್ಸೆ ಶುರುಮಾಡುತ್ತೇವೆ. ಆದರೆ, ಎಷ್ಟೋ ಬಾರಿ ಚಿಕಿತ್ಸೆ ಆರಂಭಿಸುವ ಮುನ್ನವೇ ರೋಗಿಯ ಪರಿಸ್ಥಿತಿಯನ್ನು ನೋಡಿ ಇವರು ಇನ್ನು ಇಷ್ಟು ನಿಮಿಷಗಳ ಕಾಲ ಬದುಕಬಹುದು ಎಂದು ನಿಖರವಾಗಿ ಅಂದಾಜಿಸುವಷ್ಟರ ಮಟ್ಟಿಗೆ ಪಳಗಿಬಿಟ್ಟಿದ್ದೇವೆ. ವಿಪರ್ಯಾಸವೆಂದರೆ 100ರಲ್ಲಿ 70 ಬಾರಿಯಾದರೂ ನಮ್ಮ ಅಂದಾಜು ಸರಿಯಾಗಿರುತ್ತದೆ ಹಾಗೂ ಆ ರೋಗಿಯನ್ನು ಮೃತಪಟ್ಟವರ ಪಟ್ಟಿಗೆ ನಿರ್ಭಾವುಕರಾಗಿ ಸೇರಿಸಿ ಹೆಣವನ್ನು ಹೊರದೂಡುತ್ತೇವೆ. ಇಲ್ಲಿನ ಮಹಾರಾಷ್ಟ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಸೋಂಕಿಗೆ ಒಳಗಾಗಿ 17 ದಿನದ ಒಳಗಾಗಿ ರೋಗಿ ಮೃತಪಟ್ಟರೆ ಅದನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ. ಈ ಬಾರಿ ಹೀಗೆ ಸಾಯುವವರ ವಯಸ್ಸು ಬಹುತೇಕ 35ರಿಂದ 40ರ ಒಳಗೇ ಇರುವ ಕಾರಣ ಆ ನತದೃಷ್ಟ ಕುಟುಂಬಸ್ಥರನ್ನು ನೆನೆಸಿಕೊಂಡಾಗೊಮ್ಮೆ ಏನೋ ಖಾಲಿತನ ಆವರಿಸಿಕೊಂಡುಬಿಡುತ್ತದೆ.

ಇವತ್ತು ನಮ್ಮ ಆಸ್ಪತ್ರೆಗೆ ನೀವೇನಾದರೂ ಬಂದು ನಿಂತರೆ ವಸ್ತುಸ್ಥಿತಿಯನ್ನು ಚಿತ್ರ ಸಹಿತ ನಿಮಗೆ ಕಟ್ಟಿಕೊಡಬಹುದು. ಬೆಡ್​ ಇಲ್ಲದೇ ನೆಲದ ಮೇಲೆ ಮಲಗಿದ ಸೋಂಕಿತರು, ಆಕ್ಸಿಜನ್​ ಕೊರತೆಯಿಂದಾಗಿ ಕೊನೆ ಕ್ಷಣವನ್ನು ಎಣಿಸುತ್ತಾ ಹೇಗಾದರೂ ಉಸಿರು ಬರಲಿ ಎಂದು ಅಸಹಾಯಕತೆಯಿಂದ ಚಡಪಡಿಸುವವರು ಬೇಡವೆಂದರೂ ನಿಮ್ಮ ಕಣ್ಣಿಗೆ ಬೀಳುತ್ತಾರೆ. ಇದು ಸಿನಿಮಾದವರಾಗಲೀ, ಸುದ್ದಿವಾಹಿನಿಗಳಾಗಲೀ ಹೆಣೆದ ಚಿತ್ರಕತೆಯಲ್ಲ. ಇದು ನಮ್ಮ ಕಣ್ಣೆದುರು ದಿನನಿತ್ಯ ಘಟಿಸುವ ಸಂಗತಿ.

ಸರಿಯಾದ ವೈದ್ಯಕೀಯ ಸೌಲಭ್ಯಗಳೇ ಇಲ್ಲವಾಗಿದೆ ನಮಗೆ ಈ ಕ್ಷಣಕ್ಕೂ ಸರಿಯಾದ ಸೌಲಭ್ಯ ಸಿಕ್ಕರೆ ಇನ್ನೊಂದಷ್ಟು ಜನರನ್ನು ಉಳಿಸಿಕೊಳ್ಳಬಹುದಲ್ಲಾ ಎಂಬ ಉತ್ಸಾಹವಿದೆ. ಅದು ಒಬ್ಬ ವೈದ್ಯನಾಗಿ ನನಗಿರುವ ಸಹಜ ಉತ್ಸಾಹ. ಆದರೆ, ಆ ಭ್ರಮೆಯನ್ನೆಲ್ಲಾ ಬಿಟ್ಟು ಕಣ್ಣೆದುರಿನ ಪರಿಸ್ಥಿತಿ ನೋಡಿದಾಗ ಆಮ್ಲಜನಕದ ಸಿಲಿಂಡರುಗಳ (ಮೆಡಿಕಲ್ ಆಕ್ಸಿಜನ್) ಕೊರತೆ, ವೆಂಟಿಲೇಟರ್​ ಸಮಸ್ಯೆ, ಖಾಲಿಯಾದ ರೆಮೆಡೆಸಿವರ್ ಇಂಜೆಕ್ಷನ್, ತುಂಬಿತುಳುಕಾಡುತ್ತಿರುವ ಬೆಡ್​ಗಳು ಕಣ್ಣಿಗೆ ರಾಚುತ್ತವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದಾಗ ಗಂಭಿರಾವಸ್ಥೆಗೆ ತಲುಪಿ ಘಳಿಗೆ ಎಣಿಸುತ್ತಿರುವ ರೋಗಿಗಳನ್ನು ಕಾಪಾಡಲು ಶ್ರಮ ಹಾಕಬೇಕೋ ಅಥವಾ ಅವರು ಹೇಗೂ ಸಾಯುತ್ತಾರೆ ಎಂಬ ಕಟು ಸತ್ಯವನ್ನು ಒಪ್ಪಿಕೊಂಡು ಸಾಯಲು ಬಿಟ್ಟು ಬೆಡ್​ ಖಾಲಿ ಆಯಿತಲ್ಲಾ ಎಂದು ನಿಟ್ಟುಸಿರು ಬಿಡಬೇಕೋ ಎನ್ನುವುದು ಅರ್ಥವಾಗುತ್ತಿಲ್ಲ.

ಈ ಎಲ್ಲಾ ನಿರಾಶವಾದದ ನಡುವೆ ಸದ್ಯಕ್ಕೆ ಭರವಸೆಯ ಒಂದು ಒಣಕಡ್ಡಿಯಂತೆ ಉಳಿದಿರುವುದು ಕೊರೊನಾ ಲಸಿಕೆ ಎಂದು ಹೇಳಲು ನನಗೆ ಕೊಂಚ ಸಮಾಧಾನವಾಗುತ್ತದೆ. ಏಕೆಂದರೆ ಈವರೆಗೆ ನಾನು ಪರಿಶೀಲಿಸಿ, ಚಿಕಿತ್ಸೆ ನೀಡಿದವರ ಪೈಕಿ ಕೊರೊನಾ ಲಸಿಕೆ ತೆಗೆದುಕೊಂಡವರ ಪ್ರಮಾಣ ಅತ್ಯಂತ ಕಡಿಮೆ ಇತ್ತು ಹಾಗೂ ಇನ್ನಿತರ ಕಡೆಯ ಅಂಕಿ ಅಂಶಗಳನ್ನು ಗಮನಿಸಿದಾಗಲೂ ಲಸಿಕೆ ತೆಗೆದುಕೊಂಡವರು ಮೃತರಾಗಿರುವ ಪ್ರಮಾಣ ತೀರಾ ಕಡಿಮೆಯಿದೆ. ಒಂದುವೇಳೆ ಸೋಂಕಿಗೆ ತುತ್ತಾದರೂ ಅವರನ್ನು ಮರಣ ಶಯ್ಯೆಯಿಂದ ಪಾರುಮಾಡುವಷ್ಟರ ಮಟ್ಟಿಗೆ ಕೊರೊನಾ ಲಸಿಕೆ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಹಾಗಾಗಿ, ಈ ಕ್ಷಣದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ನಾನು ನಿಸ್ಸಂಶಯವಾಗಿ ಲಸಿಕೆಯತ್ತಲೇ ಬೊಟ್ಟು ಮಾಡುತ್ತೇನೆ ಮತ್ತು ಅದರ ಹೊರತಾಗಿ ನನಗೆ ಬೇರೆ ಯಾವ ಆಯ್ಕೆಯೂ ಉಳಿದಿಲ್ಲ.

ಮಾಹಿತಿ: ಡಾ.ಲಕ್ಷ್ಮೀಶ.ಜೆ.ಹೆಗಡೆ ನಿರೂಪಣೆ: ಸ್ಕಂದ ಆಗುಂಬೆ

ಇದನ್ನೂ ಓದಿ: ಕೊರೊನಾ ಸೋಂಕಿತ ಪತ್ನಿಗೆ ಸಿಗಲಿಲ್ಲ ಬೆಡ್; ದಾರುಣವಾಗಿ ಮೃತಪಟ್ಟ ಪತ್ನಿ ನೆನೆದು ಸಾರ್ವಜನಿಕ ಪತ್ರದಲ್ಲಿ ದುಃಖ ತೋಡಿಕೊಂಡ ಮಾಜಿ ಜಿಲ್ಲಾ ನ್ಯಾಯಾಧೀಶ

Published On - 2:49 pm, Fri, 16 April 21