Dengue Hemorrhagic Fever: ಡೆಂಗ್ಯೂ ಹೆಮರಾಜಿಕ್ ಫೀವರ್ ಎಂದರೇನು? ಇದರ 8 ಅಪಾಯಕಾರಿ ಲಕ್ಷಣಗಳಿವು
ಡೆಂಗ್ಯೂ ಹೆಮರಾಜಿಕ್ ಫೀವರ್ (DHS) ಡೆಂಗ್ಯೂ ವೈರಸ್ ಸೋಂಕಿನ ತೀವ್ರ ಮತ್ತು ಮಾರಣಾಂತಿಕ ರೂಪವಾಗಿದೆ. ಹೀಗಾಗಿ, ಡೆಂಗ್ಯೂದ ಈ ಹೊಸ ರೂಪಾಂತರಿ ವೈರಸ್ ಬಗ್ಗೆ ಎಚ್ಚರ ವಹಿಸಲು ವೈದ್ಯಕೀಯ ತಜ್ಞರು ಸೂಚಿಸಿದ್ದಾರೆ. ಡೆಂಗ್ಯೂ ಹೆಮರಾಜಿಕ್ ಜ್ವರದ 8 ಅಪಾಯಕಾರಿ ಲಕ್ಷಣಗಳು ಇಲ್ಲಿವೆ.
ನವದೆಹಲಿ: ಭಾರತದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಕೇರಳ, ಮುಂಬೈ, ದೆಹಲಿ, ರಾಜಸ್ಥಾನ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಜ್ವರದಿಂದ ಜನರು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಡೆಂಗ್ಯೂ ಹೆಮರಾಜಿಕ್ ಫೀವರ್ (DHS) ಬಗ್ಗೆ ತಜ್ಞರು ತಲೆಕೆಡಿಸಿಕೊಂಡಿದ್ದಾರೆ. ಇದು ಡೆಂಗ್ಯೂ ವೈರಸ್ ಸೋಂಕಿನ ತೀವ್ರ ಮತ್ತು ಮಾರಣಾಂತಿಕ ರೂಪವಾಗಿದೆ. ಹೀಗಾಗಿ, ಡೆಂಗ್ಯೂದ ಈ ಹೊಸ ರೂಪಾಂತರಿ ವೈರಸ್ ಬಗ್ಗೆ ಎಚ್ಚರ ವಹಿಸಲು ವೈದ್ಯಕೀಯ ತಜ್ಞರು ಸೂಚಿಸಿದ್ದಾರೆ.
ಡೆಂಗ್ಯೂ ಹೆಮರಾಜಿಕ್ ಫೀವರ್ ಬಂದರೆ ರಕ್ತಸ್ರಾವ, ಪ್ಲೇಟ್‌ಲೆಟ್ ಕೌಂಟ್ನಲ್ಲಿ ಕುಸಿತ ಮತ್ತು ಪ್ಲಾಸ್ಮಾ ಸೋರಿಕೆ ಉಂಟಾಗುತ್ತದೆ. ತುರ್ತಾಗಿ ಚಿಕಿತ್ಸೆ ನೀಡದಿದ್ದರೆ ಇದರಿಂದ ಅಂಗ ವೈಫಲ್ಯ ಉಂಟಾಗಬಹುದು. ಡೆಂಗ್ಯೂ ಹೆಮರಾಜಿಕ್ ಫೀವರ್ (DHF) ಡೆಂಗ್ಯೂ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಇದು ಪ್ರಾಥಮಿಕವಾಗಿ ಸೋಂಕಿತ ಹೆಣ್ಣು ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ದೇಹಕ್ಕೆ ಪ್ರವೇಶಿಸಿದ ನಂತರ 4ರಿಂದ 10 ದಿನಗಳ ಅವಧಿಯವರೆಗೆ ದೇಹದಲ್ಲಿ ಜೀವಂತವಾಗಿರುತ್ತದೆ. ಈ ಸಮಯದಲ್ಲಿ ಈ ಮಾರಕ ವೈರಸ್ ದುಪ್ಪಟ್ಟಾಗಿ ದೇಹದಾದ್ಯಂತ ಹರಡಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: Dengue: ಡೆಂಗ್ಯೂ ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಲೇಬಾರದು?
DHF ಸಾಮಾನ್ಯವಾಗಿ ದ್ವಿತೀಯ ಡೆಂಗ್ಯೂ ಸೋಂಕಿಗೆ ಸಂಬಂಧಿಸಿದೆ. ಇದರರ್ಥ ಡೆಂಗ್ಯೂ ವೈರಸ್‌ನ ಒಂದು ಸೆರೋಟೈಪ್ (ಸಬ್ಟೈಪ್)ಗೆ ಈ ಹಿಂದೆ ಸೋಂಕಿಗೆ ಒಳಗಾದ ವ್ಯಕ್ತಿಯು ವಿಭಿನ್ನ ಸಿರೊಟೈಪ್‌ನಿಂದ ಸೋಂಕಿಗೆ ಒಳಗಾಗಿದ್ದರೆ ಡಿಹೆಚ್‌ಎಫ್ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯವಿದೆ.
ಡೆಂಗ್ಯೂ ಹೆಮರಾಜಿಕ್ ಜ್ವರದ (DHF) 8 ಅಪಾಯಕಾರಿ ಲಕ್ಷಣಗಳು ಇಲ್ಲಿವೆ:
1. ಈ ಸೋಂಕು ಸಾಮಾನ್ಯವಾಗಿ ದಿಢೀರ್ ಜ್ವರದಿಂದ ಪ್ರಾರಂಭವಾಗುತ್ತದೆ. ಆಗಾಗ 104Fಗೂ ಹೆಚ್ಚಿನ ತಾಪಮಾನವನ್ನು ತಲುಪುತ್ತದೆ.
2. ತೀವ್ರವಾದ ತಲೆನೋವು ಸಂಭವಿಸಲು ಪ್ರಾರಂಭಿಸುತ್ತದೆ. ಆಗಾಗ ಕಣ್ಣುಗಳನ್ನು ಬಿಡಲಾರದಷ್ಟು ತಲೆ ಭಾರವಾಗಿ, ಸಿಡಿಯಲಾರಂಭಿಸುತ್ತದೆ.
3. ತೀವ್ರವಾದ ಕೀಲು ನೋವು ಮತ್ತು ಸ್ನಾಯು ನೋವು ಉಂಟಾಗುತ್ತದೆ. ಇದನ್ನು ಕೆಲವೊಮ್ಮೆ ಬ್ರೇಕ್‌ಬೋನ್ ಜ್ವರ ಎಂದು ಕರೆಯಲಾಗುತ್ತದೆ.
4. ಮೂಗಿನ ರಕ್ತಸ್ರಾವ: ಮೂಗಿನಿಂದ ಇದ್ದಕ್ಕಿದ್ದಂತೆ ರಕ್ತಸ್ರಾವವಾಗುತ್ತದೆ.
5. ವಸಡುಗಳಿಂದ ರಕ್ತಸ್ರಾವ ಆಗುತ್ತದೆ.
ಇದನ್ನೂ ಓದಿ: ಅಡುಗೆ ಮಾಡುವ ಸರಿಯಾದ ವಿಧಾನ ಯಾವುದು?; ಈ ತಪ್ಪು ಮಾಡಬೇಡಿ
6. ಜಠರಗರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಇದು ಕಪ್ಪು ಬಣ್ಣದ ಮಲ ವಿಸರ್ಜನೆ ಮತ್ತು ರಕ್ತ ವಾಂತಿಗೆ ಕಾರಣವಾಗಬಹುದು.
7. ವಿಪರೀತ ಹೊಟ್ಟೆ ನೋವು ಮತ್ತು ವಾಂತಿ ಶುರುವಾಗುತ್ತದೆ.
8. ಚಡಪಡಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ.