ಪ್ರತಿದಿನ ನೀವು ಮಾಡುವ ಈ 4 ತಪ್ಪುಗಳು ರಾತ್ರಿಯ ನಿದ್ರೆಗೆ ಭಂಗ ತರುತ್ತೆ
ನಿದ್ರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದೆ. ಉತ್ತಮ ನಿದ್ರೆ ದಿನಪೂರ್ತಿ ನಾವು ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ. ಅದೇ ರಾತ್ರಿ ನಿದ್ರೆ ಚೆನ್ನಾಗಿ ಬರದಿದ್ದರೆ ದಿನವಿಡೀ ಆಲಸ್ಯ ಮತ್ತು ಆಯಾಸದ ಅನುಭವವಾಗುತ್ತದೆ. ಈ ರೀತಿಯ ಅಭ್ಯಾಸ ದೀರ್ಘಕಾಲದ ವರೆಗೆ ಮುಂದುವರಿದರೆ, ವಿವಿಧ ರೀತಿಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾದರೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರದಿರುವುದಕ್ಕೆ ಕಾರಣವೇನು? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

ರಾತ್ರಿ (night) ಸಮಯದಲ್ಲಿ ಒಳ್ಳೆ ನಿದ್ರೆ (sleep) ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಉತ್ತಮ ನಿದ್ರೆ ದಿನಪೂರ್ತಿ ನಾವು ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದೆಯೇ ನಿದ್ರಾಹೀನತೆ (Insomnia) ಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ನಿದ್ರೆ ಬರಲು ಸಮಯ ತೆಗೆದುಕೊಂಡರೆ, ಇನ್ನು ಕೆಲವರು ಪದೇ ಪದೇ ಎಚ್ಚರಗೊಳ್ಳುತ್ತಾರೆ. ಅದಲ್ಲದೆ ನಿದ್ರೆಯ ಸಮಯದಲ್ಲಿ ಚಡಪಡಿಕೆ ಕೂಡ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಈ ರೀತಿಯ ಕಾರಣಗಳಿಂದಾಗಿ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇವೆಲ್ಲವೂ ನಮ್ಮ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾದರೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರದಿರುವುದಕ್ಕೆ ಕಾರಣವೇನು? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ನಮ್ಮ ದೇಹಕ್ಕೆ ಉತ್ತಮ ಆಹಾರ, ವ್ಯಾಯಾಮದ ಜೊತೆಗೆ ಒಳ್ಳೆಯ ನಿದ್ರೆ ಚೆನ್ನಾಗಿ ಆಗುವುದು ಕೂಡ ಬಹಳ ಮುಖ್ಯವಾಗುತ್ತದೆ. ನಿದ್ರೆ ಸರಿಯಾಗಿ ಆದಾಗ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ. ಅಲ್ಲದೆ ನಮ್ಮ ಮೆದುಳು ಸರಿಯಾಗಿ ಕೆಲಸ ಮಾಡುವುದಕ್ಕೂ ಕೂಡ ನಿದ್ರೆ ಅವಶ್ಯಕವಾಗಿರುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ, ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಈ ರೀತಿಯ ಅಭ್ಯಾಸ ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳಲ್ಲಿ ಹೃದ್ರೋಗ, ಬೊಜ್ಜು, ಮಧುಮೇಹ, ಮೂತ್ರಪಿಂಡ ಕಾಯಿಲೆ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಜೊತೆಗೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಆಲ್ಝೈಮರ್, ಬುದ್ಧಿಮಾಂದ್ಯತೆ, ಆತಂಕ ಮತ್ತು ಖಿನ್ನತೆಯಂತಹ ಗಂಭೀರ ಸಮಸ್ಯೆಗಳು ಸೇರಿವೆ. ಇವೆಲ್ಲವನ್ನೂ ತಪ್ಪಿಸಬೇಕು ಎಂದರೆ, ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದು ಅತ್ಯಗತ್ಯ.
ಸರಿಯಾಗಿ ನಿದ್ರೆ ಬರದಿರಲು 4 ಪ್ರಮುಖ ಕಾರಣಗಳು:
ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ದೀಪಕ್ ಕುಮಾರ್ ಸುಮನ್ ಅವರು ಹೇಳುವ ಪ್ರಕಾರ, ರಾತ್ರಿ ಸಮಯದಲ್ಲಿ ಚೆನ್ನಾಗಿ ನಿದ್ರೆ ಬರದಿರುವುದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ ಎಂದು ಹೇಳಿದ್ದು, ಮೊದಲ ಕಾರಣವೆಂದರೆ ಅತಿಯಾಗಿ ಟಿವಿ, ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೋಡುವುದು, ಎರಡನೇಯದು ತಡರಾತ್ರಿಯ ವರೆಗೆ ಮೊಬೈಲ್ ಬಳಸುವುದು ಅಥವಾ ಲ್ಯಾಪ್‌ಟಾಪ್ ಗಳಲ್ಲಿ ಕೆಲಸ ಮಾಡುವುದು ಚೆನ್ನಾಗಿ ನಿದ್ರೆ ಮಾಡುವುದಕ್ಕೆ ಅಡ್ಡಿಯಾಗುತ್ತದೆ. ಮೂರನೇಯದು ಮಲಗುವ ಮೊದಲು ನೀರು ಅಥವಾ ಇನ್ನಿತರ ದ್ರವ ಪದಾರ್ಥಗಳ ಸೇವನೆ ಮಾಡುವುದು ಸಹ ನಿದ್ರೆಗೆ ಅಡ್ಡಿಯಾಗುತ್ತದೆ. ಏಕೆಂದರೆ ಈ ರೀತಿಯ ಅಭ್ಯಾಸಗಳಿಂದ ರಾತ್ರಿ ಸಮಯದಲ್ಲಿ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಈ ರೀತಿಯಾದಾಗ ನಿದ್ರೆ ಚೆನ್ನಾಗಿ ಬರುವುದಿಲ್ಲ. ಜೊತೆಗೆ ರಾತ್ರಿ ಸಮಯದಲ್ಲಿ ಹೆಚ್ಚಿನ ಆಹಾರ ಸೇವನೆ ಕೂಡ ಒಳ್ಳೆಯ ನಿದ್ರೆಗೆ ಅಡ್ಡಿಯಾಗುತ್ತದೆ. ಇನ್ನು ನಾಲ್ಕನೇಯದು ದೇಹದಲ್ಲಿ ವಿಟಮಿನ್ ಡಿ ಕೊರತೆ ಮತ್ತು ಪ್ರತಿನಿತ್ಯವೂ ಒಂದೇ ಸಮಯಕ್ಕೆ ಮಲಗದಿರುವುದು ಸಹ ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ. ಇದಲ್ಲದೆ, ನಿದ್ರಾಹೀನತೆ, ಸ್ಲೀಪ್ ಅಪ್ನಿಯಾ ಮತ್ತು ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್‌ನಂತಹ ನಿದ್ರೆಗೆ ಸಂಬಂಧಿಸಿದ ಪರಿಸ್ಥಿತಿಗಳು ಕೂಡ ನಿದ್ರೆ ಬರದಿರಲು ಗಮನಾರ್ಹ ಕಾರಣಗಳಾಗಿವೆ.
ಇದನ್ನೂ ಓದಿ: ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಆರಂಭಿಕ ಹಂತವಾಗಿರಬಹುದು!
ರಾತ್ರಿಯ ಚೆನ್ನಾಗಿ ನಿದ್ರೆ ಬರಲು ಏನು ಮಾಡಬೇಕು?
ನಿಮಗೆ ನಿದ್ರೆಗೆ ಸಂಬಂಧಿಸಿದ ಯಾವುದೇ ರೀತಿಯ ಅಸ್ವಸ್ಥತೆಗಳಿದಿದ್ದರೆ, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕಾಗುತ್ತದೆ. ಮಲಗುವ ಒಂದು ಗಂಟೆ ಮೊದಲು ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ದೂರವಿಡಬೇಕು. ರಾತ್ರಿ ಸಮಯದಲ್ಲಿ ಹೆಚ್ಚಾಗಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ಮಲಗುವ ಮೊದಲು ನೀರು ಅಥವಾ ದ್ರವ ರೂಪದ ಆಹಾರ ಸೇವನೆ ಮಾಡಬಾರದು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ದಿನನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಸಂಜೆ 4 ಗಂಟೆಯ ನಂತರ ಚಹಾ ಮತ್ತು ಕಾಫಿಗೆ ವಿದಾಯ ಹೇಳಿ. ಈ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ