ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು: ಅಧ್ಯಯನದಿಂದ ಬಹಿರಂಗ

ಧೂಮಪಾನ ಅಪಾಯಕಾರಿ ಎಂಬುದು ತಿಳಿದ ವಿಚಾರ. ನಾವು ಮಾಡದಿದ್ದರೂ ನಮ್ಮ ಸುತ್ತಲಿನವರು ಧೂಮಪಾನ ಮಾಡಿ ಬಿಡುವ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅಷ್ಟು ಮಾತ್ರವಲ್ಲ, ಈಗ ಸಂಶೋಧನೆಯೊಂದು ತಂದೆಯಲ್ಲಿರುವ ಧೂಮಪಾನ ಅಭ್ಯಾಸ ಮಗುವನ್ನು ಅಪಾಯಕಾರಿ ಕಾಯಿಲೆಗೆ ಬಲಿಪಶುವನ್ನಾಗಿ ಮಾಡಬಹುದು ಎಂದಿದೆ. ಹಾಗಾದರೆ ತಂದೆಯಿಂದ ಮಕ್ಕಳಿಗೆ ರೋಗಗಳು ಹೇಗೆ ಬರುತ್ತವೆ? ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು: ಅಧ್ಯಯನದಿಂದ ಬಹಿರಂಗ
Father Smoking Effects On Children
Image Credit source: Getty Images

Updated on: Mar 21, 2026 | 4:19 PM

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಧೂಮಪಾನ ಮಾಡುವವರಿಗೂ, ಅವರ ಸುತ್ತಮುತ್ತ ಇರುವವರಿಗೂ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಇತ್ತೀಚಿನ ಒಂದು ಅಧ್ಯಯನವು ಹೊಸ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಹೌದು, ತಂದೆಯಲ್ಲಿರುವ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವನ್ನು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ತಿಳಿಸಿರುವ ಮಾಹಿತಿ ಅನುಸಾರ, ತಂದೆ ಧೂಮಪಾನ ಮಾಡುವವರಾಗಿದ್ದರೆ ಅವರ ಮಕ್ಕಳಲ್ಲಿ ಟೈಪ್- 2 ಮಧುಮೇಹ, ಲಿವರ್ ಸಮಸ್ಯೆ ಮತ್ತು ಇತರ ಮೆಟಾಬಾಲಿಕ್ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.

ತಂದೆಯಿಂದ ಮಕ್ಕಳಿಗೆ ರೋಗಗಳು ಹೇಗೆ ಬರುತ್ತವೆ?

ಅಧ್ಯಯನದಲ್ಲಿ ತಿಳಿಸಿರುವಂತೆ, ಧೂಮಪಾನ ಮಾಡುವ ಪುರುಷರ ಸ್ಪರ್ಮ್‌ನಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳು ಹುಟ್ಟುವ ಮಗುವಿನ ದೇಹದಲ್ಲಿ ಶುಗರ್ ಮೆಟಾಬಾಲಿಸಮ್ ಮತ್ತು ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಈ ಸಂಶೋಧನೆಯಲ್ಲಿ ಸುಮಾರು 1000 ಧೂಮಪಾನ ಮಾಡುವ ಪುರುಷರ ಮೇಲೆ ಅಧ್ಯಯನ ಮಾಡಲಾಗಿತ್ತು. ಇವರ ಮಕ್ಕಳಲ್ಲಿ ಸುಮಾರು 30% ಮಂದಿಗೆ ಮಧುಮೇಹದ ಲಕ್ಷಣಗಳು ಮತ್ತು ಲಿವರ್ ಸಂಬಂಧಿತ ಸಮಸ್ಯೆಗಳು ಕಂಡುಬಂದವು. ಆದರೆ ವಿಜ್ಞಾನಿಗಳು ಈ ಅಧ್ಯಯನ ಇನ್ನೂ ಸಣ್ಣ ಮಟ್ಟದಲ್ಲಿದ್ದು, ಹೆಚ್ಚಿನ ಪ್ರಮಾಣದ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ

ಮಕ್ಕಳ ಮೆಟಾಬಾಲಿಸಮ್ ಮೇಲೆ ಪರಿಣಾಮ

ಧೂಮಪಾನದ ವೇಳೆ ದೇಹಕ್ಕೆ ಸೇರುವ ನಿಕೋಟಿನ್, ದೇಹದ ಮೆಟಾಬಾಲಿಸಮ್ ಸಂಬಂಧಿತ ಪ್ರಮುಖ ಪ್ರಕ್ರಿಯೆಗಳನ್ನು ಹಾನಿಗೊಳಿಸಬಹುದು. ಇದು ಇನ್ಸುಲಿನ್ ಕಾರ್ಯವಿಧಾನವನ್ನು ಬದಲಾಯಿಸಿ, ಟೈಪ್- 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ಭವಿಷ್ಯದಲ್ಲಿ ಮಕ್ಕಳಿಗೂ ಬರುವ ಸಾಧ್ಯತೆ ಇದೆ. ಅಧ್ಯಯನವು ಮಕ್ಕಳ ಲಿವರ್ ಕಾರ್ಯಕ್ಷಮತೆಯ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದು ಸೂಚಿಸಿದೆ. ಈ ರೀತಿಯ ಸಮಸ್ಯೆಯನ್ನು ತಡೆಯಲು ತಂದೆಯಾಗಲು ಬಯಸುವವರು ಧೂಮಪಾನದಿಂದ ದೂರವಿರಬೇಕು. ಇದು ವ್ಯಕ್ತಿಯ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯದಲ್ಲಿ ಮಕ್ಕಳ ಆರೋಗ್ಯವನ್ನು ಕೂಡ ಸರಿಯಾಗಿರಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us