Gas Vs Heart Attack: ಗ್ಯಾಸ್ಟ್ರಿಕ್ ಅಥವಾ ಹೃದಯಾಘಾತ; ಎದೆನೋವನ್ನು ಗುರುತಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನರು ಎಲ್ಲದಕ್ಕೂ ಭಯ ಪಡುವಂತಾಗಿದೆ. ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೂ ಎಲ್ಲಿ ಹೃದಯಾಘಾತ ಆಗುತ್ತದೆಯೋ ಏನೋ ಎಂದು ಹೆದರುತ್ತಾರೆ. ಕೆಲವೊಮ್ಮೆ ಈ ರೀತಿಯಾಗುವುದು ಗ್ಯಾಸ್ಟ್ರಿಕ್ ನಿಂದಲೂ ಆಗಿರಬಹುದು. ಆದರೆ ಇದನ್ನು ನೀವು ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಹಾಗಾಗಿ ಗ್ಯಾಸ್ಟ್ರಿಕ್ ನಿಂದ ಬರುವ ಎದೆ ನೋವಿಗೂ, ಹೃದಯಾಘಾತಕ್ಕೂ ಇರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿ.

ಎದೆಯಲ್ಲಿ ಹಠಾತ್ ನೋವು ಕಾಣಿಸಿಕೊಂಡ್ರೆ ಸಾಕು ಕೆಲವರು ನಮಗೇನೋ ಆಗೇ ಹೋಯಿತು ಎಂದು ಭಾವಿಸುತ್ತಾರೆ. ತನಗೆ ಹೃದಯಾಘಾತ (Heart Attack) ಆಗಬಹುದೇನೋ ಎಂದು ಭಯ ಬೀಳುತ್ತಾರೆ. ಆದರೆ ಎಲ್ಲಾ ಎದೆಯ ನೋವುಗಳು ಹೃದಯಕ್ಕೆ ಸಂಬಂಧಿಸಿರುವುದಿಲ್ಲ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಗ್ಯಾಸ್ಟ್ರಿಕ್ ನಿಂದಲೂ ಬರಬಹುದು. ಹೀಗಾಗಿ ಗ್ಯಾಸ್ಟ್ರಿಕ್ (Gastric) ನಿಂದ ಉಂಟಾಗಬಹುದಾದ ಸಮಸ್ಯೆಗಳು ಮತ್ತು ನಿಜವಾಗಿಯೂ ಹೃದಯದ ಸಮಸ್ಯೆ (Heart problem) ಉಂಟಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳ ನಡುವಿನ ವ್ಯತ್ಯಾಸ ತಿಳಿಸುಕೊಳ್ಳುವುದು ಅತ್ಯವಶ್ಯ.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರರಲ್ಲಿ ಸಾಮಾನ್ಯವಾಗಿ ಹೃದಯದ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವು ಯಾವುದೆಂದರೆ;
- ಹೊಟ್ಟೆ ಉಬ್ಬುವುದು, ಹೊಟ್ಟೆ ಸೀಳುವಂತೆ ಒತ್ತಡ ಅನುಭವ
- ಹೊಟ್ಟೆಯಲ್ಲಿ ಗಾಳಿ ಚಲಿಸುವ ಸಂವೇದನೆ
- ಎದೆಯಲ್ಲಿ ಚುಚ್ಚುವ ಅನುಭವ ಅಥವಾ ಸಣ್ಣ ನೋವು
- ಉಬ್ಬಸ ಅಥವಾ ಅಸ್ವಸ್ಥತೆ
- ಉಸಿರಾಟದ ತೊಂದರೆ, ಬಿಗಿತ
ಸಾಮಾನ್ಯವಾಗಿ ಈ ಎಲ್ಲ ಲಕ್ಷಣಗಳು ಗ್ಯಾಸ್ಟ್ರಿಕ್ ಸಮಸ್ಯೆಯಿಂದಲೇ ಹೆಚ್ಚಾಗಿ ದೇಹದಲ್ಲಿ ಕಂಡು ಬರುತ್ತವೆ. ದೇಹದಿಂದ ಗ್ಯಾಸ್ ಹೊರ ಬಂದ ನಂತರ ಇವುಗಳು ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತವೆ. ಆದ್ರೆ ಹೃದಯ ಸಂಬಂಧಿ ತೊಂದರೆಗಳಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳಲ್ಲಿ ಕೆಲವು ಇವುಗಳಿಗೆ ಸಾಮ್ಯತೆ ಇದ್ದರೂ ತುಸು ಭಿನ್ನವಾಗಿರಲಿವೆ.
- ಎದೆಯ ಮಧ್ಯದಲ್ಲಿ ತೀವ್ರ ನೋವು, ಭುಜ, ತೋಳುಗಳು, ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ನೋವು ಹರಡುವುದು
- ಎದೆಯಲ್ಲಿ ಒತ್ತಡದಂತಹ ನೋವು
- ಉಸಿರಾಟದ ತೊಂದರೆ
- ಅತಿಯಾದ ಬೆವರುವುದು, ವಾಕರಿಕೆ ಅಥವಾ ತಲೆನೋವು
- ತಲೆತಿರುಗುವುದು, ಬೆಳಕು ಕಾಣಿಸುವುದು ಮತ್ತು ಮಸುಕಾದ ದೃಷ್ಟಿ
ಈ ಲಕ್ಷಣಗಳು ಕಂಡುಬಂದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ತುರ್ತಾಗಿ ವೈದ್ಯರನ್ನ ಸಂಪರ್ಕಿಸುವ ಅವಶ್ಯಕತೆ ಇದ್ದು, ಅಜಾಗರೂಕತೆ ಮಾಡಿದರೆ ಪ್ರಾಣಕ್ಕೂ ಕಂಟಕ ಬರುವ ಸಾಧ್ಯತೆಗಳು ಹೆಚ್ಚಾಗಿ ಇರಲಿವೆ.
ಇದನ್ನೂ ಓದಿ: ಕೇವಲ 5 ಸೆಕೆಂಡುಗಳ ಕಾಲ ಹೀಗೆ ಮಾಡಿದ್ರೆ ಗ್ಯಾಸ್ ಸಮಸ್ಯೆಯಿಂದ ಮುಕ್ತಿ
ನೀವು ಯಾವಾಗ ಜಾಗರೂಕರಾಗಿರಬೇಕು?
ಹಠಾತ್ ಎದೆಯಲ್ಲಿ ಅಸಹಜ ನೋವನ್ನು ಅನುಭವಿಸಿದರೆ, ಅದನ್ನು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ತಳ್ಳಿಹಾಕಬೇಡಿ; ಮೊದಲು ಅದರ ತೀವ್ರತೆಯನ್ನು ನಿರ್ಣಯಿಸಿ. ನೋವು ನಿರಂತರವಾಗಿದೆಯೇ? ಬೇರೆ ಬೇರೆ ಭಾಗಕ್ಕೆ ಹರಡುತ್ತಿದೆಯೇ? ನಿಮಗೆ ವಾಕರಿಕೆ, ಬೆವರುವ ಅನುಭವ ಇದೆಯೇ? ಎಂದು ಪರೀಕ್ಷಿಸಿಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




