Mental Health: ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಪಿಸಿಓಎಸ್ ಬಗ್ಗೆ ಇಲ್ಲಿದೆ ಮಾಹಿತಿ
ಇಂದು ಮಹಿಳೆಯರಲ್ಲಿ ಹೆಚ್ಚಾಗಿ ಪಿಸಿಓಎಸ್ ಮತ್ತು ಮಾನಸಿಕ ಖಿನ್ನತೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಇಂದಿನ ಬದಲಾದ ಜೀವನಶೈಲಿಯಿಂದಾಗಿ ಕೆಲಸದ ಒತ್ತಡ, ಆಹಾರ ಕ್ರಮ, ಅಧಿಕ ಜನದಟ್ಟನೆ, ಧೂಳು ಮಾಲಿನ್ಯಗಳಿಂದಾಗಿ ಮಾನಸಿಕವಾಗಿ ದುರ್ಬಲವಾಗುತ್ತಾ ಹೋಗುತ್ತೀರಿ. ಇದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇಂದು ಮಹಿಳೆಯರಲ್ಲಿ ಹೆಚ್ಚಾಗಿ ಪಿಸಿಓಎಸ್ ಮತ್ತು ಮಾನಸಿಕ ಖಿನ್ನತೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಏನಿದು ಪಿಸಿಓಎಸ್(PCOS)?
ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಸ್ತ್ರೀರೋಗಗಳಲ್ಲಿ ಒಂದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್. ಇದು ಬೊಜ್ಜು, ಇನ್ಸುಲಿನ್ ಪ್ರತಿರೋಧ, ಚರ್ಮದ ಅಸ್ವಸ್ಥತೆಗಳು ಮತ್ತು ಬಂಜೆತನ, ಮುಟ್ಟಿನ ಸಮಸ್ಯೆ, ಸೇರಿದಂತೆ ಹಲವಾರು ರೋಗಲಕ್ಷಣಗಳಿಗೆ ಕಾರಣವಾಗಬಹುದು. ಪಿಸಿಓಎಸ್ ಪೀಡಿತ ಮಹಿಳೆಯರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂಡ್ ಸಮಸ್ಯೆಗಳಂತಹ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದರಿಂದ ಅದು ಪ್ರಾಣ ಹಾನಿಗೊಳಗಾಗುವ ಸಾಧ್ಯತೆಗಳು ಕೂಡ ಹೆಚ್ಚಿದೆ.
ಪಿಸಿಓಎಸ್ ಒಳಗಾದ ಮಹಿಳೆಯರಲ್ಲಿ ಮಾನಸಿಕ ಆರೋಗ್ಯವು ಹದಗೆಡುತ್ತದೆ. ಇದರಿಂದಾಗಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಇದಕ್ಕೆ ಕಾರಣಗಳು ಇಲ್ಲಿವೆ.
1. ಒತ್ತಡ:
ಆತಂಕ ಮತ್ತು ಖಿನ್ನತೆಯು ಒತ್ತಡದಿಂದ ಉಂಟಾಗಬಹುದು. ಕಿರಿಯ ವಯಸ್ಸಿನಲ್ಲಿಯೇ ಪಿಸಿಓಎಸ್ ಹೊಂದಿರುವ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಿಶೇಷವಾಗಿ ಅತಿಯಾದ ದೇಹ ಮತ್ತು ಮುಖದ ಕೂದಲು, ತೂಕ ಹೆಚ್ಚಾಗುವುದು ಮುಂತಾದ ಸ್ಥಿತಿಯು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿಸುತ್ತದೆ.
2. ಹಾರ್ಮೋನ್ ಬದಲಾವಣೆಗಳು:
ಅನೇಕ ಪಿಸಿಓಎಸ್ ರೋಗಿಗಳಲ್ಲಿ, ಆಂಡ್ರೋಜೆನ್ಗಳ ಮಟ್ಟಗಳು, ಟೆಸ್ಟೋಸ್ಟೆರಾನ್ ಒಳಗೊಂಡಿರುವ ಹಾರ್ಮೋನ್ ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆಂಡ್ರೊಜೆನ್ ಹಾರ್ಮೋನ್ ಹೊಂದಿರುವ ರೋಗಿಗಳಲ್ಲಿ ದುಃಖ ಮತ್ತು ಆತಂಕದ ಅಪಾಯವು ಹೆಚ್ಚಾಗಿ ಕಂಡುಬರುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.
3. ಬೊಜ್ಜು:
ಪಿಸಿಓಎಸ್ ಇಲ್ಲದ ಮಹಿಳೆಯರಿಗೆ ಹೋಲಿಸಿದರೆ, ಪಿಸಿಓಎಸ್ ಹೊಂದಿರುವ ಮಹಿಳೆಯರು ಸ್ಥೂಲಕಾಯಕ್ಕೆ ಹೆಚ್ಚು ಒಳಗಾಗುತ್ತಾರೆ. ದೇಹದಲ್ಲಿನ ಅತಿಯಾದ ತೂಕ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಇದರಿಂದಾಗಿ ನೀವು ಮಾನಸಿಕವಾಗಿ ದುರ್ಬಲವಾಗುತ್ತಾ ಹೋಗುತ್ತೀರಿ.
4. ಇನ್ಸುಲಿನ್ ಪ್ರತಿರೋಧ:
ಇನ್ಸುಲಿನ್ ಪ್ರತಿರೋಧವು ದೇಹದಲ್ಲಿ ಕೆಲವು ಹಾರ್ಮೋನುಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ. ಇದು ದೀರ್ಘಕಾಲದ ಒತ್ತಡ ಮತ್ತು ಖಿನ್ನತೆಗೆ ಕಾರಣವಾಗಬಹುದು. ಇನ್ಸುಲಿನ್ ಪ್ರತಿರೋಧಕವು ಜೀವಕೋಶಗಳು ಸರಿಯಾಗಿ ಗ್ಲೂಕೋಸ್ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಕಾರಣವಾಗಬಹುದು.
5. ಉರಿಯೂತ:
ದೇಹದಲ್ಲಿನ ಉರಿಯೂತವು ಪಿಸಿಓಎಸ್ ಗೆ ಸಂಬಂಧಿಸಿದೆ. ನಿಮ್ಮ ದೇಹದಲ್ಲಿನ ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಒತ್ತಡ ಮತ್ತು ಖಿನ್ನತೆಯು ಕಂಡುಬರುತ್ತದೆ.
ಇದನ್ನು ಓದಿ: ಚಳಿಗಾಲದಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದೀರಾ?
ಮಾನಸಿಕ ಅಸ್ವಸ್ಥತೆಗಳನ್ನು ಹೇಗೆ ತಡೆಗಟ್ಟಬಹುದು?
ಪಿಸಿಓಎಸ್ ಹಾಗೂ ಮಾನಸಿಕ ಅಸ್ವಸ್ಥತೆಗಳಿಂದ ನೀವು ಬಳಲುತ್ತಿದ್ದರೆ ನಿಮ್ಮ ಜೀವನಶೈಲಿಯನ್ನು ನೀವೂ ಮೊದಲು ಬದಲಿಸಬೇಕಿದೆ. ಯಾಕೆಂದರೆ ಒತ್ತಡದ ನಿವಾರಣೆಗಾಗಿ ಪ್ರತಿದಿನ ಒಂದಷ್ಟು ಹೊತ್ತು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮನ್ನು ಮಾನಸಿಕವಾಗಿ ಸ್ಥಿರತೆಯನ್ನು ಕಂಡುಕೊಳ್ಳಲು ಸಹಕರಿಸುತ್ತದೆ. ಹಾಗೆಯೇ ಪಿಸಿಓಎಸ್ ಗೆ ಪ್ರಮುಖ ಕಾರಣ ನಿಮ್ಮ ದೇಹದ ಅತಿಯಾದ ತೂಕ. ಇದು ದೇಹದ ಆರೋಗ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಆದ್ದರಿಂದ ಆರೋಗ್ಯಕರ ತೂಕ ಅತ್ಯಂತ ಅಗತ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:00 pm, Tue, 6 December 22




