ನಿಮ್ಮ ದೇಹಕ್ಕೆ ಎಷ್ಟು ಪ್ಯಾರಾಸಿಟಮಾಲ್ ಸೇಫ್? ಡೋಸ್ ಜಾಸ್ತಿಯಾದರೆ ಏನು ಮಾಡಬೇಕು?
ಭಾರತೀಯರಲ್ಲಿ ಪ್ಯಾರಾಸಿಟಮಾಲ್ ಸೇವಿಸದೇ ಇರುವವರೇ ಕಡಿಮೆ ಎನ್ನಬಹುದು. ಜ್ವರಕ್ಕೆ ಮಾತ್ರವಲ್ಲದೆ ಪೇನ್ ಕಿಲ್ಲರ್ ಆಗಿಯೂ ಉಪಯೋಗಿಸುವ ಈ ಮಾತ್ರೆ ಬಹುತೇಕ ಮನೆಯ ಮೆಡಿಕಲ್ ಕಿಟ್ನಲ್ಲಿ ಸ್ಥಾನ ಪಡೆದಿರುತ್ತದೆ. ಇತ್ತೀಚೆಗೆ ಅಮೆರಿಕ ಮೂಲದ ವೈದ್ಯರೊಬ್ಬರು ಭಾರತೀಯರು ನೋವು ನಿವಾರಕವನ್ನು "ಕ್ಯಾಂಡಿಯಂತೆ" ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಡೋಲೋ-650 ಎಂದೂ ಕರೆಯಲ್ಪಡುವ ಪ್ಯಾರಾಸಿಟಮಾಲ್ ಎಲ್ಲರ ಮನೆಗಳಲ್ಲೂ ಸ್ಥಾನ ಪಡೆದಿದೆ. ಜ್ವರ ಮತ್ತು ದೇಹದ ನೋವುಗಳ ವಿರುದ್ಧ ರಕ್ಷಣೆಗೆ ಇದೇ ಬೆಸ್ಟ್ ಎಂದು ಜನರು ನಂಬಿದ್ದಾರೆ. ಹಾಗಾದರೆ, ಈ ಮಾತ್ರೆ ಎಷ್ಟು ಸೇಫ್?

ಬೆಂಗಳೂರು, ಏಪ್ರಿಲ್ 18: ಬಹುತೇಕ ಜನರು ಪ್ಯಾರಾಸಿಟಮಾಲ್ (Paracetamol) ಅಥವಾ ಡೋಲೋ 650 ಮಾತ್ರೆಯನ್ನು ವೈದ್ಯರೊಂದಿಗೆ ಪ್ರಿಸ್ಕ್ರಿಪ್ಷನ್ ಅಥವಾ ಸಮಾಲೋಚನೆ ಇಲ್ಲದೆ ದಿನನಿತ್ಯದ ತಮ್ಮ ಅನಾರೋಗ್ಯಕ್ಕೆ ಪರಿಹಾರವಾಗಿ ತಾವೇ ತೆಗೆದುಕೊಳ್ಳುತ್ತಾರೆ. ಡಾಕ್ಟರ್ ಹತ್ತಿರ ಹೋದರೂ ಇದೇ ಮಾತ್ರ ಬರೆದುಕೊಡುತ್ತಾರೆ ಎಂಬ ಧೋರಣೆ ಅವರದ್ದು. ಹೆಚ್ಚಿನ ಜನರು ಇದನ್ನು ನಿರುಪದ್ರವವೆಂದು ಪರಿಗಣಿಸಿದರೂ, ಓವರ್ ಡೋಸ್ ಆದರೆ ಇದರಿಂದ ಖಂಡಿತ ಅಪಾಯವಿದೆ. ಕೆಲವರಿಗೆ ಇದು ಅಡ್ಡಪರಿಣಾಮವನ್ನೂ ಬೀರುತ್ತದೆ. ವಿಶೇಷವಾಗಿ ನಿಮ್ಮ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಪದೇ ಪದೇ ಎಚ್ಚರಿಕೆಗಳನ್ನು ನೀಡಿದ್ದಾರೆ. ಇತ್ತೀಚೆಗೆ, ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಆರೋಗ್ಯ ಶಿಕ್ಷಣತಜ್ಞ ಡಾ. ಪಳನಿಯಪ್ಪನ್ ಮಾಣಿಕ್ಕಮ್, “ಭಾರತೀಯರು ಕ್ಯಾಡ್ಬರಿ ಜೆಮ್ಸ್‌ನಂತೆ ಡೋಲೋ 650 ಅನ್ನು ತೆಗೆದುಕೊಳ್ಳುತ್ತಾರೆ” ಎಂದು ಎಕ್ಸ್ ಪೋಸ್ಟ್ನಲ್ಲಿ ಲೇವಡಿ ಮಾಡಿದ್ದರು. ಅವರ ಪೋಸ್ಟ್ ದೇಶಾದ್ಯಂತ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿತ್ತು.
ಪ್ಯಾರೆಸಿಟಮಾಲ್ ನೋವು ನಿವಾರಕ ಮತ್ತು ಜ್ವರ ನಿವಾರಕ ಔಷಧವಾಗಿದ್ದು, ಇದನ್ನು ಸೌಮ್ಯದಿಂದ ಮಧ್ಯಮ ನೋವು ಮತ್ತು ಜ್ವರವನ್ನು ತಾತ್ಕಾಲಿಕವಾಗಿ ನಿವಾರಿಸಲು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಶೀತ ಮತ್ತು ಜ್ವರದ ಔಷಧಿಗಳಲ್ಲಿ ಒಂದು ಘಟಕಾಂಶವಾಗಿ ಸೇರಿಸಲಾಗುತ್ತದೆ. ಇದು ಟೈಲೆನಾಲ್‌ನಂತೆಯೇ ಒಂದು ಔಷಧವಾಗಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತಜ್ಞರ ಪ್ರಕಾರ, 1878ರಲ್ಲಿ ಮೊದಲು ತಯಾರಿಸಿದ ಈ ಔಷಧವು ನಿಮ್ಮ ಮೆದುಳಿನಲ್ಲಿ ರಾಸಾಯನಿಕ ಸಂದೇಶವಾಹಕಗಳನ್ನು ನಿರ್ಬಂಧಿಸುವ ಮೂಲಕ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವ ರಾಸಾಯನಿಕ ಸಂದೇಶವಾಹಕರ ಮೇಲೆ ಪರಿಣಾಮ ಬೀರುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಅನಾರೋಗ್ಯ ಮತ್ತು ಗಾಯವನ್ನು ನಿಭಾಯಿಸಲು ನಿಮ್ಮ ದೇಹವು ಉತ್ಪಾದಿಸುವ ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ.
ಇದನ್ನೂ ಓದಿ: ಪ್ಯಾರಾಸಿಟಮಾಲ್ ಮಾತ್ರೆ ಈ ವಯಸ್ಸಿನವರಿಗೆ ಒಳ್ಳೆಯದಲ್ಲ!
ಎಷ್ಟು ಪ್ಯಾರೆಸಿಟಮಾಲ್ ಸೇವನೆ ಸೇಫ್?:
ತಜ್ಞರ ಪ್ರಕಾರ, ಸರಿಯಾಗಿ ಬಳಸಿದಾಗ ಪ್ಯಾರಾಸಿಟಮಾಲ್ ಅನ್ನು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಪ್ಯಾರೆಸಿಟಮಾಲ್ ಅನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇದು ಸಾಮಾನ್ಯವಾಗಿ 500 ಮಿ.ಗ್ರಾಂ ಮತ್ತು 650 ಮಿ.ಗ್ರಾಂ ಮಾತ್ರೆಗಳು ಮತ್ತು 1000 ಮಿ.ಗ್ರಾಂ ಚುಚ್ಚುಮದ್ದಿನ ರೂಪಗಳಲ್ಲಿ ಲಭ್ಯವಿದೆ. ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ, ವಯಸ್ಕರಿಗೆ ಗರಿಷ್ಠ ಅನುಮತಿಸುವ ಡೋಸ್ ದಿನಕ್ಕೆ 4 ಗ್ರಾಂ (ಅಥವಾ 4000 ಮಿ.ಗ್ರಾಂ). ಇದರರ್ಥ ನಿಮಗೆ 500 ಮಿ.ಗ್ರಾಂ ಮಾತ್ರೆಗಳನ್ನು ಶಿಫಾರಸು ಮಾಡಿದ್ದರೆ, ನೀವು 24 ಗಂಟೆಗಳ ಅವಧಿಯಲ್ಲಿ 8 ಮಾತ್ರೆಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ಡೋಸ್‌ಗಳ ನಡುವೆ ಕನಿಷ್ಠ 4 ಗಂಟೆಗಳ ಅಂತರವಿರಬೇಕು. 10 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ದಿನಕ್ಕೆ 4 ಬಾರಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ನೀಡಬೇಕು.
ಇದನ್ನೂ ಓದಿ: Paracetamol: ದಿನವೂ ಪ್ಯಾರಾಸಿಟಮಾಲ್ ತಿನ್ನುವುದರಿಂದ ಹೃದಯಾಘಾತ, ಬಿಪಿ ಅಪಾಯ ಹೆಚ್ಚು!
ನೀವು ಅಥವಾ ನಿಮ್ಮ ಮಗು ಹೆಚ್ಚು ಪ್ಯಾರಾಸಿಟಮಾಲ್ ಸೇವಿಸಿದರೆ, ನೀವು ಚೆನ್ನಾಗಿದ್ದರೂ ಸಹ ತಕ್ಷಣ ವೈದ್ಯರನ್ನು ಭೇಟಿಯಾಗಿ. ಪ್ಯಾರಾಸಿಟಮಾಲ್ ಗಂಭೀರ ಯಕೃತ್ತಿನ ಹಾನಿಯನ್ನುಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೊದಲ 24 ಗಂಟೆಗಳಲ್ಲಿ ನಿಮಗೆ ಇದರ ಮಿತಿಮೀರಿದ ಸೇವನೆಯ ಯಾವುದೇ ಲಕ್ಷಣಗಳು ಇಲ್ಲದಿರಬಹುದು. ಆದರೆ ನೀವು ಬಿಳಿಚಿಕೊಳ್ಳುವಿಕೆ, ವಾಕರಿಕೆ, ಬೆವರುವುದು, ವಾಂತಿ, ಹಸಿವಿನ ಕೊರತೆ ಮತ್ತು ಹೊಟ್ಟೆ ನೋವನ್ನು ಅನುಭವಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ