TV9 Kannada Health Sweet Choices: Evaluating Jaggery and Refined Sugar for Children
ಬೆಲ್ಲ vs ಸಕ್ಕರೆ; ಇವೆರಡರಲ್ಲಿ ಮಕ್ಕಳ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ವಿವರಿಸಿದ್ದಾರೆ ಡಾ. ರವಿ ಮಲಿಕ್
ಚಿಕ್ಕ ಮಕ್ಕಳಿಗೆ ಬೆಲ್ಲ ಮತ್ತು ಸಕ್ಕರೆಯಂತಹ ಪದಾರ್ಥಗಳನ್ನು ನೀಡಬೇಕೋ, ಬೇಡವೋ ಎಂಬ ಗೊಂದಲ ಹಲವು ಪೋಷಕರನ್ನು ಕಾಡುತ್ತದೆ. ಇನ್ನು ಕೆಲವರಂತೂ ಇದಾವುದರ ಬಗ್ಗೆಯೂ ಯೋಚಿಸದೆಯೇ ಹೆಚ್ಚಿನ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ನೀಡುತ್ತಾರೆ. ನೀವು ಕೂಡ ನಿಮ್ಮ ಮಗುವಿಗೆ ಬೆಲ್ಲ ಅಥವಾ ಸಕ್ಕರೆ ನೀಡುವುದು ಸರಿಯೇ ಎಂದು ಎಂದಾದರೂ ಯೋಚಿಸಿದ್ದೀರಾ? ಈ ರೀತಿಯ ಗೊಂದಲಕ್ಕೆ ಡಾ. ರವಿ ಮಲಿಕ್ ಅವರು ಉತ್ತರ ನೀಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪೋಷಕರ ಜವಾಬ್ದಾರಿ. ಯಾವ ರೀತಿಯ ಆಹಾರ ನೀಡಬೇಕು, ಯಾವುದು ಒಳ್ಳೆಯದು, ಹೀಗೆ ನೂರಾರು ಗೊಂದಲದ ನಡುವೆಯೂ ಒಳ್ಳೆಯ ಆಹಾರ ಪದ್ದತಿಗಳ ಪರಿಚಯ ಮಾಡಿಸುವುದು ಪಾಲನೆ, ಪೋಷಣೆ ಮಾಡುವವರ ಕರ್ತವ್ಯವಾಗಿರುತ್ತದೆ. ಅದರಲ್ಲಿಯೂ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಬೆಲ್ಲ ಕೊಡಬೇಕೋ ಅಥವಾ ಸಕ್ಕರೆಯೋ! ಎನ್ನುವಂತಹ ಅನುಮಾನವಿರುತ್ತದೆ. ಇನ್ನು ಕೆಲವರಂತೂ ಇದಾವುದರ ಬಗ್ಗೆಯೂ ಯೋಚಿಸದೆಯೇ ಹೆಚ್ಚಿನ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ನೀಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಹಾಗಾದರೆ ಚಿಕ್ಕ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ಯಾವುದನ್ನು ನೀಡಬೇಕು, ಇವೆರಡರಲ್ಲಿ ಯಾವುದು ಒಳ್ಳೆಯದು, ಎಷ್ಟು ವರ್ಷದ ನಂತರ ಸಿಹಿ ಪದಾರ್ಥಗಳ ಸೇವನೆಯನ್ನು ಮಾಡಿಸಬೇಕು ಎಂಬ ಗೊಂದಲಕ್ಕೆ ಡಾ. ರವಿ ಮಲಿಕ್ (Dr. Ravi Malik) ಎನ್ನುವವರು ಉತ್ತರ ನೀಡಿದ್ದಾರೆ. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಡಾ ರವಿ ಮಲಿಕ್ ಹೇಳುವ ಪ್ರಕಾರ, ಎರಡು ವರ್ಷದೊಳಗಿನ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ನೀಡಬಾರದು ಎಂದಿದ್ದಾರೆ. ಅದರ ನಂತರ ಅಂದರೆ ಮಕ್ಕಳಿಗೆ ಎರಡು ವರ್ಷ ಆದ ಮೇಲೆ ಬೆಲ್ಲ ನೀಡಬಹುದು, ಆದರೆ ಅದರ ಪ್ರಮಾಣ ಕಡಿಮೆ ಇರಬೇಕು. ಸಕ್ಕರೆಗೆ ಹೋಲಿಸಿದರೆ, ಬೆಲ್ಲ ಮಕ್ಕಳಿಗೆ ನೀಡಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀಡಬೇಕಾಗುತ್ತದೆ. ಸಿಹಿ ಅಂಶದ ಜೊತೆಗೆ, ಬೆಲ್ಲದಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ಸಹ ಇರುತ್ತವೆ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬೆಲ್ಲ ಸೇವನೆಯಿಂದಾಗುವ ಪರಿಣಾಮಗಳು:
ಬೆಲ್ಲದಲ್ಲಿ ಬಹಳಷ್ಟು ಸಿಹಿ ಅಂಶವಿದ್ದು, ಇದು ಮಕ್ಕಳಿಗೆ ಹಠಾತ್ ಚೈತನ್ಯ ನೀಡಲು ಸಹಾಯ ಮಾಡುತ್ತದೆ. ಆದರೆ ನಂತರ, ಅವರಿಗೆ ದಣಿದ ಅಥವಾ ಸುಸ್ತಾದ ಅನುಭವವಾಗುತ್ತದೆ.
ಬೆಲ್ಲದಲ್ಲಿ ಸಕ್ಕರೆಯಂತೆಯೇ ಸಿಹಿ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳು ಹಲ್ಲುಜ್ಜದೆ ಇವುಗಳನ್ನು ಅಥವಾ ಇವುಗಳಿಂದ ತಯಾರಾದ ಸಿಹಿತಿಂಡಿಗಳನ್ನು ತಿಂದರೆ, ಅದು ಅವರ ಹಲ್ಲುಗಳ ಮೇಲೆ ಕಲೆಗಳನ್ನು ಉಂಟುಮಾಡಬಹುದು ಮತ್ತು ಹಲ್ಲುಕುಳಿಗಳ ಅಪಾಯವನ್ನು ಹೆಚ್ಚಿಸಬಹುದು.
ಹೆಚ್ಚು ಬೆಲ್ಲ ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗಬಹುದು, ಇದು ಗ್ಯಾಸ್, ಮಲಬದ್ಧತೆ ಅಥವಾ ಹೊಟ್ಟೆ ನೋವಿಗೂ ಕಾರಣವಾಗಬಹುದು.
ಮಕ್ಕಳು ಹೆಚ್ಚೆಚ್ಚು ಬೆಲ್ಲ ಸೇವಿಸಿದರೆ, ಅದು ಕಾಲಾನಂತರದಲ್ಲಿ ಅವರ ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲೋರಿ ಅಂಶವಿದ್ದು, ಇದು ಮಕ್ಕಳ ತೂಕ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚು ಸಕ್ಕರೆ ತಿನ್ನುವುದರಿಂದ ಮಕ್ಕಳಲ್ಲಿ ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಸಕ್ಕರೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಶಕ್ತಿಯಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು, ಮಕ್ಕಳನ್ನು ಕೆರಳಿಸಬಹುದು ಅಥವಾ ದಣಿದಂತೆ ಮಾಡಬಹುದು.
ಸಕ್ಕರೆ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಹಲ್ಲು ಕೊಳೆತ ಮತ್ತು ಹಲ್ಲು ಕುಳಿಗಳಿಗೆ ಕಾರಣವಾಗುತ್ತದೆ.
ಹೆಚ್ಚು ಸಕ್ಕರೆ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದು ರಕ್ತದಲ್ಲಿ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಹೆಚ್ಚಿಸುತ್ತದೆ.
ಮಕ್ಕಳಲ್ಲಿ ಹೆಚ್ಚಿನ ಸಕ್ಕರೆ ಸೇವನೆಯು ಮನಸ್ಥಿತಿ ಬದಲಾವಣೆಗಳು, ಹೈಪರ್ಆಕ್ಟಿವಿಟಿ ಮತ್ತು ಕೇಂದ್ರೀಕರಿಸುವುದಕ್ಕೆ ತೊಂದರೆಯಾಗಬಹುದು.
ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.