ಫೋನ್ ಕರೆಗಳಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು: ಅಧ್ಯಯನ
ವಾರದಲ್ಲಿ 30 ನಿಮಿಷಗಳಿಗಿಂತ ಹೆಚ್ಚಿನ ಕಾಲ ಫೋನ್ ಕರೆಗಳಲ್ಲಿ ಮಾತನಾಡುವುದು ಅಧಿಕ ರಕ್ತದೊತ್ತಡದ ಅಪಾಯವನ್ನು ಶೇಕಡಾ 12% ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ನೀವೆಲ್ಲರೂ ಸ್ನೇಹಿತರು, ಪ್ರೀತಿಪಾತ್ರರು ಮತ್ತು ಕುಟುಂಬದವರೊಂದಿಗೆ ಫೋನ್ ಕರೆಗಳಲ್ಲಿ ಮಾತನಾಡುವ ಮೂಲಕ ಹೆಚ್ಚು ಹೊತ್ತು ಫೋನ್ ನಲ್ಲಿ ಸಮಯ ಕಳೆಯುತ್ತೀರಿ. ಆದರೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಫೋನ್ ಕರೆಗಳಲ್ಲಿ ಆದಷ್ಟು ಕಡಿಮೆ ಸಮಯ ಮಾತನಾಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ ಯುರೋಪಿಯನ್ ಹಾರ್ಟ್ ಜರ್ನಲ್-ಡಿಜಿಟಲ್ ಹೆಲ್ತ್ ನಲ್ಲಿ ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯು ವಾರಕ್ಕೆ 30 ನಿಮಿಷಗಳು ಮತ್ತು ಅದಕ್ಕಿಂತ ಹೆಚ್ಚು ಕಾಲ ಮೊಬೈಲ್ ಫೋನ್ ಕರೆಗಳಲ್ಲಿ ಮಾತನಾಡುವುದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಂಡಿದೆ.
‘ಜನರು ಮೊಬೈಲ್ ನಲ್ಲಿ ಮಾತನಾಡುವ ನಿಮಿಷಗಳ ಸಂಖ್ಯೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದೆ, ಅಂದರೆ ಹೆಚ್ಚು ನಿಮಿಷಗಳ ಕಾಲ ಮಾತನಾಡಿದಾಗ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆ ಇದೆ’ ಎಂದು ಚೀನಾದ ಗುವಾಂಗ್ಝೌ ನಲ್ಲಿರುವ ದಕ್ಷಿಣ ವೈದ್ಯಕೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕ್ಸಿಯಾನ್ ಹುಯಿ ಕಿನ್ ಹೇಳಿದ್ದಾರೆ. ಪ್ರಪಂಚದಾದ್ಯಂತ 30 ರಿಂದ 79 ವರ್ಷ ವಯಸ್ಸಿನ ಸುಮಾರು 1.3 ಬಿಲಿಯನ್ ಜನರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಇದು ಜಾಗತಿಕವಾಗಿ ಅಕಾಲಿಕ ಮರಣಕ್ಕೂ ಪ್ರಮುಖ ಕಾರಣವಾಗಿದೆ. ಮೊಬೈಲ್ ಪೋನ್ ಕಡಿಮೆ ಮಟ್ಟದ ರೇಡಿಯೊಫ್ರೀಕ್ವೆನ್ಸಿ ಶಕ್ತಿಯನ್ನು ಹೊರಸೂಸುತ್ತವೆ, ಇದು ಮನುಷ್ಯನ ರಕ್ತದೊತ್ತಡದ ಏರಿಕೆಯೊಂದಿಗೆ ಸಂಬಂಧವನ್ನು ಹೊಂದಿದೆ. ಎಂದು ಸಂಶೋದಕರು ಹೇಳಿದ್ದಾರೆ.
ಇದನ್ನೂ ಓದಿ: ಎಲ್ಲಾ ರೋಗಗಳಿಗೆ ಮೂಲವೇ ಕೊಲೆಸ್ಟ್ರಾಲ್! ಮೊದಲು ಈ ಪದಾರ್ಥಗಳ ತಿನ್ನುವುದನ್ನು ಬಂದ್ ಮಾಡಿ, ಇಲ್ಲದಿದ್ದರೆ ಕಷ್ಟ ಕಷ್ಟ!
ಯುಕೆ ಬಯೋಬ್ಯಾಂಕ್ ನ ಡೆಟಾವನ್ನು ಬಳಸಿಕೊಂಡು ಫೋನ್ ಕರೆಗಳ ಮೂಲಕ ಮಾತನಾಡುವುದು ಮತ್ತು ಹೊಸ ಆರಂಭದ ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವನ್ನು ಪರೀಕ್ಷಿಸಲು, ಅಧಿಕ ರಕ್ತದೊತ್ತಡ ಇಲ್ಲದ 37 ರಿಂದ 73 ವಯಸ್ಸಿನ ಒಟ್ಟು 212,046 ಜನರನ್ನು ಈ ಅಧ್ಯನಕ್ಕೆ ಒಳಪಡಿಸಿದರು ಮತ್ತು ಪ್ರಶ್ನಾವಳಿಯ ಮೂಲಕ ಅವರ ಮೊಬೈಲ್ ಫೋನ್ ಬಳಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಸತತ 12 ವರ್ಷಗಳ ಅಧ್ಯಯನದಲ್ಲಿ, ಸಂಶೋಧಕರು ವಾರಕ್ಕೆ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮೊಬೈಲ್ ನಲ್ಲಿ ಮಾತನಾಡುವ ಜನರು, ಪೋನ್ ಕರೆಗಳಲ್ಲಿ ಕಡಿಮೆ ಸಮಯವನ್ನು ಕಳೆಯುವವರಿಗಿಂತ ಅಧಿಕ ರಕ್ತದೊತ್ತಡವನ್ನು ಶೇಕಡಾ 12% ರಷ್ಟು ಅಭಿವೃದ್ಧಿ ಪಡಿಸುವ ಸಾಧ್ಯತೆಯನ್ನು ಹೊಂದಿದ್ದಾರೆ ಎಂದು ಕಂಡುಕೊಂಡಿದ್ದಾರೆ.
ಸಂಶೋಧನೆಯನ್ನು ಹೆಚ್ಚು ವಿವರವಾಗಿ ನೋಡಿದಾಗ, ಪ್ರತಿ ವಾರ ಫೋನ್ ನಲ್ಲಿ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಕಳೆಯುವ ಜನರು ಐದು ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಫೋನ್ ಕರೆಗಳನ್ನು ಮಾಡುವ ಅಥವಾ ಸ್ವೀಕರಿಸುವ ಜನರಿಗೆ ಹೋಲಿಸಿದರೆ ಶೇಕಡಾ 25 ರಷ್ಟು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಿದ್ದಾರೆ ಎಂದು ಅವರು ಕಂಡುಕೊಂಡಿದ್ದಾರೆ. ‘ವಾರದಲ್ಲಿ ಅರ್ಧ ಗಂಟೆಗಳಿಗಿಂತ ಕಡಿಮೆ ಮಾತನಾಡುವುದರಿಂದ ಅದು ರಕ್ತದೊತ್ತಡದ ಅಪಾಯದ ಮೇಲೆ ಪರಿಣಾಮ ಬೀರುವುದಿಲ್ಲ. ಫಲಿತಾಂಶವನ್ನು ಪುನರಾವರ್ತಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ಅಲ್ಲಿಯವರೆಗೆ ಹೃದಯದ ಆರೋಗ್ಯವನ್ನು ಕಾಪಾಡಲು ಮೊಬೈಲ್ ಫೋನ್ ಕರೆಗಳನ್ನು ಆದಷ್ಟು ಕಡಿಮೆಗೊಳಿಸುವುದು ಒಳ್ಳೆಯದು’ ಸಂಶೋಧಕರು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;