World Alzheimer’s Day 2022: ಅಲ್ಝೈಮರ್ ಕಾಯಿಲೆ ಎಂದರೇನು? ಇತಿಹಾಸ, ಲಕ್ಷಣಗಳು, ಚಿಕಿತ್ಸೆ ಏನು? ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ
ಪ್ರತಿವರ್ಷ ಸೆಪ್ಟೆಂಬರ್ 21ರಂದು ವಿಶ್ವ ಅಲ್ಝೈಮರ್ ದಿನ ಎಂದು ಜಾಗೃತಿ ಅರಿವು ಹೆಚ್ಚಾಗಿ ಮೂಡಿಸುವ ಉದ್ದೇಶದಿಂದ ಮೀಸಲಿಡಲಾಗಿದೆ. ಈ ವರ್ಷದ ಧ್ಯೇಯ ವಾಕ್ಯ ಡಿಮೆಂಶಿಯ ಬಗ್ಗೆ ಹಾಗೂ ಅಲ್ಝೈಮರ್ಸ್ ಬಗ್ಗೆ ತಿಳಿದುಕೊಳ್ಳೋಣ. ಡಿಮೆಂಶಿಯ ಅಥವಾ ಮರೆವಿನ ಕಾಯಿಲೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುವ ಸಮಸ್ಯೆ.
ಮರೆವಿನ ಕಾಯಿಲೆ ಎಂಬುದು ಎಲ್ಲಾ ಕಾಯಿಲೆಗಳಿಗಿಂತಲೂ ಘೋರ ಎಂದೇ ಹೇಳಬಹುದು. ತಾವು ಇಷ್ಟಪಡುವ ವ್ಯಕ್ತಿಯೇ ತಮ್ಮನ್ನು ಮರೆತಾಗ ಅವರ ಸಂಗಾತಿಯ ಪರಿಸ್ಥಿತಿ ಹೇಗಿರಬೇಡ, ತಾವು ಯಾರು, ಹೆಸರೇನು?, ತನ್ನ ಕುಟುಂಬದವರು ಯಾರು? ಇವೆಲ್ಲವನ್ನು ಕ್ರಮೇಣವಾಗಿ ಮರೆಯುತ್ತಾ ಬರುತ್ತಾರೆ.
ಪ್ರತಿವರ್ಷ ಸೆಪ್ಟೆಂಬರ್ 21ರಂದು ವಿಶ್ವ ಅಲ್ಝೈಮರ್ ದಿನ ಎಂದು ಜಾಗೃತಿ ಅರಿವು ಹೆಚ್ಚಾಗಿ ಮೂಡಿಸುವ ಉದ್ದೇಶದಿಂದ ಮೀಸಲಿಡಲಾಗಿದೆ. ಈ ವರ್ಷದ ಧ್ಯೇಯ ವಾಕ್ಯ ಡಿಮೆಂಶಿಯ ಬಗ್ಗೆ ಹಾಗೂ ಅಲ್ಝೈಮರ್ಸ್ ಬಗ್ಗೆ ತಿಳಿದುಕೊಳ್ಳೋಣ. ಡಿಮೆಂಶಿಯ ಅಥವಾ ಮರೆವಿನ ಕಾಯಿಲೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುವ ಸಮಸ್ಯೆ.
ಡಿಮೆಂಶಿಯದಲ್ಲಿ ಮಿದುಳಿನ ಕೋಶಗಳು ನಿಧಾನವಾಗಿ ಹಾನಿಗೊಳಗಾಗಿ ಸಾಯಲಾರಂಭಿಸುತ್ತವೆ. ವಿಶ್ವದಲ್ಲಿ ಪ್ರತಿ ಮೂರು ಸೆಕಂಡ್ಗೆ ಒಬ್ಬರಿಗೆ ಡಿಮೆಂಶಿಯ ಕಾಯಿಲೆ ಕಾಣಿಸಿಕೊಳ್ಳಬಹುದು. ಅಲ್ಝೈಮರ್ ಅಂತರಾಷ್ಟ್ರೀಯ ಸಂಸ್ಥೆಯು ತನ್ನ 2021 ನೇ ವರದಿಯಲ್ಲಿ ವಿಶ್ವಾದ್ಯಂತ 55 ಮಿಲಿಯನ್ ಜನರು ಡಿಮೆಂಶಿಯ ಸಮಸ್ಯೆಯಿಂದ ಮತ್ತು ನಮ್ಮ ದೇಶದಲ್ಲಿ 5.3 ಮಿಲಿಯನ್ ಜನರು ಡಿಮೆಂಶಿಯದಿಂದ ಬಳಲುತ್ತಿರಬಹುದೆಂದು ಅಂದಾಜಿಸಿದೆ. ಕರ್ನಾಟಕದಲ್ಲಿ ಅಂದಾಜು ೪ ಲಕ್ಷ ಜನರಲ್ಲಿ ಈ ಸಮಸ್ಯೆಯು ಕಂಡುಬರಬಹುದು.
ಸೂಕ್ತ ಸಮಯದಲ್ಲಿ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಮತ್ತು ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸುವುದರಿಂದ ಕಾಯಿಲೆಯ ಹಲವಾರು ಪರಿಣಾಮಗಳನ್ನು ಕಡಿಮೆ ಮಾಡಬಹುದು. ಈ ಸಮಸ್ಯೆ ಬಂದರೆ ಕೇವಲ ವ್ಯಕ್ತಿಗಷ್ಟೇ ತೊಂದರೆಯಲ್ಲ ಇಡೀ ಕುಟುಂಬವೇ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಡಿಮೆಂಶಿಯ ಕಾಯಿಲೆಯಲ್ಲಿ ಹಲವಾರು ವಿಧಗಳಿದ್ದರೂ ಅಲ್ಝೈಮರ್ ಕಾಯಿಲೆ ತುಂಬಾ ಸಾಮಾನ್ಯವಾಗಿ ಕಂಡುಬರುವಂತಹುದು. ಮಹಿಳೆಯರಲ್ಲಿ ಮತ್ತು ಹಿರಿಯ ವಯಸ್ಕರಲ್ಲಿ ಹೆಚ್ಚಾಗಿ ಕಾಣಬಹುದು. ವ್ಯಾಸ್ಕುಲಾರ್ ಡಿಮೆಂಶಿಯ, ಫ್ರಾಂಟೋ ಟೆಂಪೋರಲ್, ಲಿವಿ ಬಾಡಿ ಮತ್ತು ಪಾರ್ಕಿನ್ಸನ್ಸ ಡಿಮೆಂಶಿಯ ಕೆಲವು ವಿಧಗಳು.
ಪ್ರೋಟೀನ್ ಗಳ ಹಾಗೂ ಜೀವಕೋಶಗಳ ಪ್ರೋಗ್ರಾಮಿಂಗ್ ಸರಿ ಇಲ್ಲದೆ ಜೀವಕೋಶಗಳು ಹರಡಿ, ವಿಸ್ತರಣೆಗೊಂಡರೆ ಅದು ಕ್ಯಾನ್ಸರ್ ಆಗುತ್ತದೆ. ಅದೇ ರೀತಿ ಪ್ರೋಟೀನ್ ಗಳ ಪ್ರೋಗ್ರಾಮಿಂಗ್ ಸರಿ ಇಲ್ಲದೆ ಜೀವಕೋಶಗಳು ಸತ್ತು ಹೋದರೆ ಅದು ಅಲ್ಝೈಮರ್ ಕಾಯಿಲೆಯಾಗುತ್ತದೆ.
ಅಲ್ಝೈಮರ್ ಕಾಯಿಲೆಯ ಬಗ್ಗೆ
1906 ರಲ್ಲಿ ಆಲೋಯಿಸ್ ಅಲ್ಝೈಮರ್ ಎಂಬ ಮಾನಸಿಕ ವೈದ್ಯರು ಮೊದಲ ಬಾರಿಗೆ ಈ ಸ್ಥಿತಿಯ ಲಕ್ಷಣಗಳನ್ನು ವಿವರಿಸಿದರು. ಮಿದುಳಿನ ಕೋಶಗಳಲ್ಲಿ ಪ್ಲಾಕ್ ಮತ್ತು ಪ್ರೋಟೀನ್‌ಗಳ ಗೋಜಲುಗಳ ನೀಕ್ಷೇಪ ಉಂಟಾಗುತ್ತದೆ. ಪ್ರೋಟಿನ್ ಗಳ ಅಸಹಜತೆಯಿಂದ ಒಟ್ಟಿಗೆ ಸೇರಿಕೊಂಡು ಪ್ಲಾಕ್ ಗಳಾಗಿ ಜೀವಕೋಶಗಳ ನಡುವೆ ಠೇವಣಿಯಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಜೀವಕೋಶಗಳು ಸಾಯುತ್ತವೆ ಮತ್ತು ನರಗಳ ನಡುವಿನ ಸಂಪರ್ಕಗಳು ಮುರಿಯುತ್ತದೆ. ಮಿದುಳಿನ ಕುಗ್ಗುವಿಕೆಗೆ ಇದು ಕಾರಣವಾಗುತ್ತದೆ. ಜಾಗತಿಕವಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದರೂ, ದುರದೃಷ್ಟವಶಾತ್ ಯಶಸ್ವಿ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಈ ಕಾಯಿಲೆಯಲ್ಲಿ ಸ್ಮರಣೆ, ಆಲೋಚನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳನ್ನು ನೋಡಬಹುದು.
ಮೊದಲು ಕಂಡುಬರುವ ಸಮಸ್ಯೆ ಎಂದರೆ ಅಲ್ಪಾವಧಿಯ ಘಟನೆಗಳಿಗೆ ಮರೆವು. ತಮ್ಮಹಳೆಯ ಭಾಲ್ಯದ ನೆನಪುಗಳು ಇದ್ದರೂ ಅಲ್ಪಾವಧಿ ಸ್ಮರಣೆಯಲ್ಲಿ ಸಮಸ್ಯೆ ಕಾಣಬಹುದು. ಉದಾ: ಪ್ರಶ್ನೆಗಳ ಪುನರಾವರ್ತನೆಯಾಗಬಹುದು, ಆಹಾರ ಔಷಧಿಗಳನ್ನು ಮತ್ತೆ ಮತ್ತೆ ಕೇಳುವುದು. ಬಾಗಿಲು ಲಾಕ್ ಮಾಡಲು ಮರೆಯುವುದು. ಕೀ, ವಸ್ತುಗಳನ್ನು ಕಳೆದುಕೊಳ್ಳವುದು. ಅವರು ಮೊದಲು ಯಾವ ಆಹಾರವನ್ನು ಸೇವಿಸಿದರು ಅಥವಾ ಕಳೆದ ಕೆಲವು ದಿನಗಳಲ್ಲಿ ಅವರು ಯಾರನ್ನು ಭೇಟಿ ಮಾಡಿದರು ಎಂಬುದನ್ನು ಮರೆತು ಬಿಡುತ್ತಾರೆ. ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ಅವರ ಮುಂದೆ ಸರಿಯಾಗಿ ಊಟ ಕೊಡುವುದಿಲ್ಲ ಎಂದು ದೂರು ನೀಡುವುದು ಉಂಟು.
ಆರಂಭದಲ್ಲಿ ಪರಿಚಯವಿಲ್ಲದ ಪರಿಸರದಲ್ಲಿ ಮತ್ತು ನಂತರ ಪರಿಚಿತ ಪರಿಸರದಲ್ಲಿ ದಾರಿ ತಪ್ಪಬಹುದು. ದಾರಿ ತಪ್ಪಿ ಕಾಣೆಯಾಗುವ ಸಂಭವಗಳು ಹೆಚ್ಚಾಗುತ್ತದೆ. ಕ್ರಮೇಣ ವಸ್ತುಗಳ, ಜನರ ಹೆಸರುಗಳನ್ನು ನೆನಪಿನಲ್ಲಿ ಇಡುವುದಕ್ಕೆ ತೊಂದರೆಯಾಗಬಹುದು. ಹಣಕಾಸಿನ ಲೆಕ್ಕಾಚಾರದಲ್ಲಿ ಏರುಪೇರಾಗಬಹುದು
ತಾರ್ಕಿಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವುದು, ಸಾಮಾಜಿಕ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ಎಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಹಣಕಾಸಿನ ವಹಿವಾಟುಗಳು, ಶಾಪಿಂಗ್ ಅಡುಗೆ ಕ್ರಮೇಣವಾಗಿ ಶೌಚ, ಸ್ನಾನ, ಉಡುಗೆ ತೊಡುಗೆ ಹಲ್ಲುಜ್ಜುವುದು ಮುಂತಾದ ಸಾಮಾನ್ಯ ಚಟುವಟಿಕೆಗಳಿಗೂ ತೊಂದರೆ. ಮತ್ತು ಅವಲಂಬನೆಗೆ ಕಾರಣವಾಗುತ್ತದೆ ಅಥವಾ ಸಹಾಯ ಪಡೆಯುವುದಕ್ಕೆ ಪ್ರತಿರೋಧವಿರಬಹುದು.
ದಿನಕಳೆದಂತೆ ಖಿನ್ನತೆಯು ಉಂಟಾಗಬಹುದು. ಚಡಪಡಿಕೆ, ಭ್ರಮೆಗಳು, ಸುಳ್ಳು ನಂಬಿಕೆಗಳು, ಅಲೆದಾಡುವಿಕೆ ಆಕ್ರಮಣಶೀಲತೆ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದು ಕುಟುಂಬ ಸದಸ್ಯರ ಮೇಲೆ ವಿಶೇಷವಾಗಿ ಸಂಗಾತಿಯ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತದೆ.
ರೋಗಲಕ್ಷಣಗಳ ಕಂಡು ಬಂದ ಸಂದರ್ಭದಲ್ಲಿ ಸ್ಪೆಷಲಿಸ್ಟ್ ಜೆರಿಯಾಟ್ರಿಕ್ ಸೈಕಿಯಾಟ್ರಿಸ್ಟ್ , ಜೆರಿಯಾಟ್ರಿಕ್ ಪಿಜಿಷಿಯನ್ ಅಥವಾ ನ್ಯೂರೋಲಜಿಸ್ಟ್ ಬಳಿ ಹೋಗಿ ಆದಷ್ಟು ಬೇಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಹಜವಾಗಿ ಮನೆಮಂದಿಗೆ ಈ ಕಾಯಿಲೆಯ ಮೊದಲಿನ ಲಕ್ಷಣಗಳು ತಿಳಿಯುತ್ತವೆ. ತಜ್ಞ ವೈದ್ಯರು ಮನೆಮಂದಿಯ ಬಳಿ ಏನಾಗಿದೆಯೆಂದು ವಿವರವಾಗಿ ತಿಳಿದು ನಂತರ ಬೇಕಾದ ಮೆಮೊರಿ ಟೆಸ್ಟ್ ಗಳನ್ನು ಬಳಸುತ್ತಾರೆ. ನಂತರ ಬೇಕಾದ ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಮೆದುಳಿನ ಸ್ಕ್ಯಾನ್ ಗಳನ್ನು ಕೂಡ ಮಾಡಿ ಇನ್ನಿತರ ವಾಸಿಯಾಗಬಹುದು ಕಾಯಿಲೆಗಳು ಇರಬಹುದೆಂದು ನೋಡುತ್ತಾರೆ.
ವಾಸಿಯಾಗಬಹುದು ಅಂತ ಯಾವುದೇ ಕಾಯಿಲೆಗಳು ಕಾಣದಿದ್ದ ಪಕ್ಷದಲ್ಲಿ ಹಾಗೂ ಕೆಲವು ಸ್ಕ್ಯಾನಿಂಗ್ ಸೂಕ್ಷ್ಮ ವಲಯಗಳನ್ನು ಗಮನಿಸಿ ಇರುವ ಮಾಹಿತಿ ಜೊತೆಗೆ ಮೆಮೊರಿ ಟೆಸ್ಟ್ ನ ಮೂಲಕ ಅಲ್ಜೈಮರ್ಸ್ ಕಾಯಿಲೆ ಇರಬಹುದೆಂದು ಖಾತ್ರಿ ಮಾಡಿಕೊಳ್ಳುತ್ತಾರೆ. ಅಲ್ಜೈಮರ್ಸ್ ಕಾಯಿಲೆಯ ಇರುವ ಸಾಧ್ಯತೆ ಹೆಚ್ಚಿದೆ ಎಂದಾಗ ಅದರ ಬಗ್ಗೆ ಮನೆಮಂದಿಗೆ ತಿಳಿಸಿಕೊಡುತ್ತಾರೆ.
ಈ ಕಾಯಿಲೆಗೆ ಈ ಹೊತ್ತಿನಲ್ಲಿಯಾವುದೇ ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಇರುವುದಿಲ್ಲ. ಕಾಗ್ನಿಟಿವ್ ಎನ್ಹನ್ಸರ್ಸ್ ಎಂಬ ಮಾತ್ರೆಗಳಿಂದ ಹೆಚ್ಚಿರುವ ಕಾಯಿಲೆಯ ವೇಗವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡುತ್ತದೆ. ಮೊದಲನೇ ಹಂತದಲ್ಲಿಯೇ ಕಾಗ್ನಿಟಿವ್ ಸ್ತಿಮುಲೇಶನ್ ತೆರಪಿ ಎಂಬ ಚಿಕಿತ್ಸೆಯನ್ನು ನೀಡಿದರೆ ಒಳ್ಳೆಯದು ಆದರೆ ಇದರ ತರಬೇತಿಯನ್ನು ಬಹಳ ಮಂದಿಗೆ ನೀಡಬೇಕಿದೆ.
ರೋಗಿಯ ಆರೈಕೆ ಅತ್ಯಗತ್ಯ
ಡಿಮೆಂಶಿಯ ಸಮಸ್ಯೆ ಹೊಂದಿರುವ ಹಿರಿಯರಿಗೆ ರೋಗವು ಉಲ್ಬಣಗೊಳುತ್ತಿದ್ದಂತೆ ಮನೆಯಲ್ಲಿ ಬೆಂಬಲ ಬೇಕಾಗುತ್ತದೆ. ಡಿಮೆಂಶಿಯ ಸಮಸ್ಯೆಯಿರುವ ವ್ಯಕ್ತಿಯು ತನ್ನ ಜಗತ್ತನ್ನು ಹೇಗೆ ಗ್ರಹಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ಆರೈಕೆದಾರರು ಸಹಾಯ ಮಾಡಬಹುದು. ಯಾವುದೇ ತೊಂದರೆಗಳ ಬಗ್ಗೆ ಮಾತನಾಡಲು ಮತ್ತು ಅವರ ಸ್ವಂತ ದೈನಂದಿನ ಆರೈಕೆಯಲ್ಲಿ ಪಾಲ್ಗೊಳ್ಳಲು ವ್ಯಕ್ತಿಗೆ ಅವಕಾಶ ನೀಡಿ.
ಡಿಮೆಂಶಿಯ ಸಮಸ್ಯೆಯಿರುವವರ ಆರೋಗ್ಯ ರಕ್ಷಣೆಯ ಬಗ್ಗೆ ವೈದ್ಯರೊಂದಿಗೆ ಕಾಯಿಲೆ ಬಗ್ಗೆ ಮಾಹಿತಿ ಪಡೆದು ಹೇಗೆ ಆರೈಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು.
ಡಿಮೆಂಶಿಯ ಸಮಸ್ಯೆಯಿರುವವರು ಶಾಂತವಾಗಿ ಮತ್ತು ಸ್ಮರಣೆಯ ತೊಂದರೆಯಿರುವುದರಿಂದ ಸಹಾಯ ಬೇಕಾಗುತ್ತದೆ. ನಡವಳಿಕೆ ಮತ್ತು ನಿದ್ರೆಯ ಸಮಸ್ಯೆಗಳನ್ನು ನಿರ್ವಹಿಸಿ.
- ಹಿರಿಯರು ಸಂತೋಷದಿಂದ ಮಾಡುವಂತಹ ಮತ್ತು ಅವರನ್ನು ಪ್ರೇರೇಪಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
- ಡಿಮೆಂಶಿಯ ಸಮಸ್ಯೆ ಹೊಂದಿರುವ ಜನರಲ್ಲಿ ಗೊಂದಲವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು
- ಪರಿಚಿತ ಜನರು ಮತ್ತು ವಸ್ತುಗಳು ಅವರ ಸುತ್ತ ಮುತ್ತ ಇರುವಂತೆ ನೋಡಿಕೊಳ್ಳಿ.
- ಕುಟುಂಬದ ಫೋಟೋಗಳು / ಆಲ್ಬಮ್ ಗಳು ಉಪಯುಕ್ತ.
- ರಾತ್ರಿಯಲ್ಲಿ ದೀಪಗಳು ಉರಿಯುತ್ತಿರಲಿ
- ಜ್ಞಾಪನೆಗಳು, ಟಿಪ್ಪಣಿಗಳು, ದಿನನಿತ್ಯದ ಕಾರ್ಯಗಳ ಪಟ್ಟಿಗಳು ಮತ್ತು ದೈನಂದಿನ ಚಟುವಟಿಕೆಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ಬಳಸಿ.
- ಸರಳ ಚಟುವಟಿಕೆಯ ವೇಳಾಪಟ್ಟಿಯನ್ನು ಅನುಸರಿಸಿ
- ಪ್ರಸ್ತುತ ಘಟನೆಗಳ ಬಗ್ಗೆ ಮಾತನಾಡಿ
- ಆರೈಕೆ ಮಾಡುವವರೂ ಕೂಡ ಅವರೊಂದಿಗೆ ನಿಯಮಿತ ನಡಿಗೆಯನ್ನು ತೆಗೆದುಕೊಳ್ಳುವುದು ಮತ್ತು ಸಂವಹನ ಕೌಶಲ್ಯಗಳನ್ನು ಸುಧಾರಿಸುವುದು ಆವಶ್ಯಕ.
- ಶಾಂತಗೊಳಿಸುವ ಸಂಗೀತವು ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ, ಆತಂಕ ಕಡಿಮೆಯಾಗುತ್ತದೆ ಮತ್ತು ನಿದ್ರೆ ಹಾಗೂ ನಡವಳಿಕೆಯನ್ನು ಸುಧಾರಿಸುತ್ತದೆ
- ಡಿಮೆಂಶಿಯ ಸಮಸ್ಯೆಯಿರುವವರು ತಮ್ಮ ಕಣ್ಣು ಮತ್ತು ಕಿವಿಗಳನ್ನು ಪರೀಕ್ಷಿಸಬೇಕು. ಸಮಸ್ಯೆಗಳು ಕಂಡುಬಂದರೆ ಶ್ರವಣ ಸಾಧನಗಳು,
- ಕನ್ನಡಕ ಅಥವಾ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
- ಮನೆಯಲ್ಲಿ ಅಪಾಯವಿಲ್ಲದ ಹಾಗೆ ಓಡಾಡುವಂತೆ ವಾತಾವರಣ ಕಲ್ಪಿಸಬೇಕು
- ಬೀಳುವಿಕೆಯನ್ನು ತಡೆಯುವುದು, ಸ್ನಾನಗೃಹದ ಸುರಕ್ಷತೆ
- ದೀರ್ಘಾವಧಿಯ ಆರೈಕೆ
- ಡಿಮೆಂಶಿಯ ಸಮಸ್ಯೆ ಯಿರುವ ವ್ಯಕ್ತಿಗೆ ಮನೆಯಲ್ಲಿ ಅಥವಾ ಸಂಸ್ಥೆಯಲ್ಲಿ ಮೇಲ್ವಚಾರಣೆ ಮತ್ತು ಸಹಾಯದ ಅವಶ್ಯಕತೆ ಇರುತ್ತದೆ
- ಹಿರಿಯ ನಾಗರಿಕರ ದಿನ ಆರೈಕೆ ಚೇತನ ಕೇಂದ್ರಗಳು
- ಮನೆಯೊಳಗೆ ಆರೈಕೆ ನೀಡಲು ತರಬೇತಿ ಪಡೆದ ಕೇರ್ ಗಿವರ್ಸ್ ರ ಸಹಾಯ
- ಕೆಲವು ಸಮುದಾಯಗಳಲ್ಲಿ ಡಿಮೆಂಶಿಯ ಸಮಸ್ಯೆ ಸಂಬಂಧಿತ ಬೆಂಬಲ ಗುಂಪುಗಳು ಲಭ್ಯವಿರಬಹುದು. ಕುಟುಂಬ ಸಮಾಲೋಚನೆಯು
- ಕುಟುಂಬದ ಸದಸ್ಯರಿಗೆ ಮನೆಯ ಆರೈಕೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಲೇಖನ ಬರೆದವರು: ಡಾ ಸರಸ್ವತಿ ತೇನಗಿ, ಮನೋವೈದ್ಯರು, ಡಿಮ್ಹಾನ್ಸ್ , ಧಾರವಾಡ ಡಾ ವಿಜಯಕುಮಾರ ಹರಬಿಶೆಟ್ಟರ, ಮನೋವೈದ್ಯರು, ನಿಮ್ಹಾನ್ಸ್, ಬೆಂಗಳೂರು
Published On - 6:30 am, Wed, 21 September 22