ಕ್ಷಯರೋಗ (Tuberculosis) ಅಥವಾ ಟಿಬಿ(TB) ಎನ್ನುವುದು ಶ್ವಾಸಕೋಶದ (lungs) ಮೇಲೆ ಪರಿಣಾಮ ಬೀರುವ ಮಾರಣಾಂತಿಕ ಸಾಂಕ್ರಾಮಿಕ (epidemic) ರೋಗವಾಗಿದೆ. ಗಾಳಿಯಲ್ಲಿ ಹರಡುವ ರೋಗವಿದಾಗಿರುವುದರಿಂದ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಶ್ವಾಸಕೋಶ ಮಾತ್ರವಲ್ಲದೆ ಇದು ನಿಧಾನವಾಗಿ ಮೆದುಳು, ಬೆನ್ನುಹುರಿ ಮತ್ತು ದೇಹದ ಇತರ ಭಾಗಗಳಿಗೂ ಹರಡಬಹುದು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಈ ರೋಗವನ್ನು ಗುಣಪಡಿಸಬಹುದು. ಹೀಗಾಗಿ ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವನ್ನು (World Tuberculosis Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ಡಾ. ರಾಬರ್ಟ್ ಕೋಚ್ ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವಾದ ಮೈಕೋಬ್ಯಾಕ್ಟೀರಿಯಂ ಬ್ಯಾಕ್ಟೀರಿಯಾವನ್ನು ಕಂಡು ಹಿಡಿದರು. ಡಾ. ರಾಬರ್ಟ್ ಕೋಚ್ ಅವರ ಟಿಬಿ ಬ್ಯಾಕ್ಟೀರಿಯಾದ ಈ ಆವಿಷ್ಕಾರವು ವೈದ್ಯಕೀಯ ವಿಜ್ಞಾನದಲ್ಲಿ ಒಂದು ಪ್ರಮುಖ ಹೆಜ್ಜೆಯಾಯಿತು. ಈ ನಿಟ್ಟಿನಲ್ಲಿ ಇವರ ಈ ಆವಿಷ್ಕಾರವನ್ನು ನೆನಪಿಸುವ ಸಲುವಾಗಿ 1982 ರಲ್ಲಿ ಮಾರ್ಚ್ 24 ರಂದು ವಿಶ್ವ ಆರೋಗ್ಯ ಸಂಸ್ಥೆಯು ಮೊದಲ ಬಾರಿಗೆ ಕ್ಷಯ ರೋಗ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆ ಇರುವವರು ಯಾವ ಉಪ್ಪನ್ನು ತಿನ್ನಬೇಕು?
ವಿಶ್ವದೆಲ್ಲೆಡೆ ಅನೇಕ ಜನರು ಟಿಬಿ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಕ್ಷಯರೋಗದ ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈ ರೋಗದ ಬಗ್ಗೆ ವಿಶ್ವದೆಲ್ಲೆಡೆ ಹಲವಾರು ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕ್ಷಯರೋಗ ಮಾನವ ಹಾಗೂ ಪ್ರಾಣಿಗಳನ್ನು ಬಾಧಿಸುವ ಮಾರಕ ರೋಗ. ಈ ರೋಗ ʼಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ʼ ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ. ಕ್ಷಯರೋಗವು ಹೆಚ್ಚಾಗಿ ಶ್ವಾಸಕೋಶದ ಮೇಲೆ ದೀರ್ಘ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಸಾಂಕ್ರಾಮಿಕವಾಗಿ ಹರಡುವ ಈ ರೋಗವು ಮೆದುಳು, ಬೆನ್ನು ಹುರಿ, ಕಿಬ್ಬೊಟ್ಟೆ, ಮೂತ್ರಪಿಂಡ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಕೂಡಾ ಇದು ಪರಿಣಾಮ ಬೀರುತ್ತದೆ. ಇದನ್ನು ಎಕ್ಟ್ರಾಪಲ್ಮನರಿ ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲಾಗುತ್ತದೆ.
ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಕ್ಷಯರೋಗದ ವ್ಯಕ್ತಿ ಕೆಮ್ಮಿದಾಗ, ಉಗುಳಿದಾಗ ಹಾಗೂ ಸೀನಿದಾಗ ಬ್ಯಾಕ್ಟೀರಿಯಾಗಳು ಗಾಳಿಯ ಮೂಲಕ ಇನ್ನೊಬ್ಬ ವ್ಯಕ್ತಿಯ ದೇಹವನ್ನು ಸೇರಿ ರೋಗ ಮತ್ತೊಬ್ಬರಿಗೂ ಹರಡಲು ಕಾರಣವಾಗಬಹುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ ವ್ಯಕ್ತಿಗಳಿಗೆ ಕ್ಷಯ ರೋಗವು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ದೀರ್ಘ ಕಾಲದ ಕೆಮ್ಮು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಹಸಿವಾಗದೆ ಇರುವುದು, ಚಳಿ, ಜ್ವರ, ರಾತ್ರಿ ಬೆವರುವುದು, ಎದೆ ನೋವು, ಉಸಿರಾಟದ ತೊಂದರೆ, ಇದ್ದಕ್ಕಿದ್ದಂತೆ ತೂಕ ಕಡಿಮೆ ಆಗುವುದು ಇವೆಲ್ಲವೂ ಕ್ಷಯ ರೋಗದ ಲಕ್ಷಣಗಳಾಗಿವೆ.
ಕ್ಷಯರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗೂ ಶ್ವಾಸಕೋಶಕ್ಕೆ ಹಾನಿಯನ್ನು ಉಂಟು ಮಾಡಬಹುದು.
• ಇದಕ್ಕಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ವೈದ್ಯರು, ಪೌಷ್ಠಿಕ ತಜ್ಞರ ಸಲಹೆ ಪಡೆದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಿ.
• ಉತ್ತಮ ಹಾಗೂ ಸ್ವಚ್ಛ ಪರಿಸರದಲ್ಲಿ ವಾಕಿಂಗ್, ಜಾಗಿಂಗ್, ಯೋಗ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಮಾಡಿ
• ಮಕ್ಕಳಿಗೆ ಬಾಲ್ಯದಲ್ಲಿಯೇ ಬಿಸಿಜಿ ಇಂಜೆಕ್ಷನ್ ನೀಡುವುದು ಅತ್ಯಗತ್ಯ. ಇದರಿಂದ ಯಾವುದೇ ವಿಧದ ಟಿಬಿಯಿಂದ ದೂರವಿರಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Mon, 24 March 25