Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 3ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನ ಸಂಖ್ಯೆಗಳು, ಸಂಖ್ಯೆಗಳ ಸಂಯೋಜನೆಗಳು, ಅಕ್ಷರಗಳು ಮತ್ತು ಚಿಹ್ನೆಗಳಿಂದ ಅರ್ಥವನ್ನು ಸೆಳೆಯುವ ಪುರಾತನ ಅಧ್ಯಯನವಾಗಿದೆ. ಈ ಕಲೆಯು ಬ್ರಹ್ಮಾಂಡದ ಆಧಾರವಾಗಿರುವ ಮಾದರಿಗಳನ್ನು ಸ್ಪರ್ಶಿಸಲು ಮತ್ತು ನಾವು ಯಾರೆಂಬುದರ ಬಗ್ಗೆ ಹೊಸ ಸತ್ಯಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3 (ಶುಕ್ರವಾರ) ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಶ್ರಮ ಹಾಕಿದ ನಂತರವೂ ಅಂದುಕೊಂಡಂತೆಯೇ ಎಲ್ಲ ಸಂದರ್ಭಗಳಲ್ಲಿಯೂ ಫಲಿತಾಂಶ ಬರಬಹುದು ಎಂದುಕೊಳ್ಳಲು ಸಾಧ್ಯವಿಲ್ಲ. ಕೆಲವು ಜವಾಬ್ದಾರಿಗಳನ್ನು ಅತ್ಯಂತ ವಿಶ್ವಾಸದಿಂದ ತೆಗೆದುಕೊಂಡರೂ ನಿಮ್ಮ ನಿರ್ಧಾರ, ತೀರ್ಮಾನಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಏರ್ಪಡುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವ ಇದ್ದರೆ ಆ ಬಗ್ಗೆ ಕೆಲವರು ಭಿನ್ನ ಧ್ವನಿಯನ್ನು ಎತ್ತುವ ಸಾಧ್ಯತೆ ಇದೆ. ಸ್ತ್ರೀಯರ ವಿಚಾರದಲ್ಲಿ ತಮಾಷೆಯಾದರೂ ಹಗುರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಬೇಡಿ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಏನಾದರೂ ಪೋಸ್ಟ್ ಮಾಡುತ್ತಿದ್ದೀರಿ ಅಂತಾದಲ್ಲಿ ಪರಿಣಾಮಗಳನ್ನು ಸರಿಯಾಗಿ ಆಲೋಚನೆ ಮಾಡುವುದು ಮುಖ್ಯ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅಥವಾ ಈ ದಿನ ಹಿಂತಿರುಗಿಸುವುದಾಗಿ ಹೇಳಿದ್ದಲ್ಲಿ ಅದು ಬಾರದೇ ಇರುವ, ಅಂದರೆ ಈ ದಿನ ನಿಮ್ಮ ಕೈ ಸೇರದಿರುವ ಸಾಧ್ಯತೆಗಳು ಹೆಚ್ಚಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಬಹು ಪ್ರಮಾಣದಲ್ಲಿ ನಂಬಿಕೆ ನಿಮಗೆ ಇದ್ದರೂ ಕೆಲವು ಬಾಹ್ಯ ಕಾರಣಗಳಿಂದಾಗಿ ಈ ದಿನ ನಿಮಗೆ ಯಾವುದೇ ವಿಚಾರದಲ್ಲಿ ಅಥವಾ ಕೆಲಸದಲ್ಲಿ ಪೂರ್ಣ ವಿಶ್ವಾಸ ಮೂಡದಿದ್ದರೆ ಅದನ್ನು ಮಾಡದಿರುವುದು ಕ್ಷೇಮ. ಏಕೆಂದರೆ ನಿಮ್ಮದಲ್ಲದ ತಪ್ಪಿಗೆ ದಂಡ ಕಟ್ಟುವಂಥ ಸನ್ನಿವೇಶ ಎದುರಾಗಲಿದೆ. ಎಂಥ ಅನಿವಾರ್ಯ ಸ್ಥಿತಿಯೇ ಇದ್ದರೂ ಇತರರ ವಾಹನಗಳು ಅಥವಾ ವಸ್ರುಗಳನ್ನು ಬಳಸುವುದಕ್ಕೆ ಹೋಗಬೇಡಿ. ಅವರಾಗಿಯೇ ನಿಮ್ಮನ್ನು ಕೇಳಿಕೊಂಡರೂ ಈ ದಿನ ಬಳಸದಿರುವುದು ಉತ್ತಮ ಎನಿಸಿಕೊಳ್ಳುತ್ತದೆ. ಯಾರು ರಾಜಕೀಯ ಕ್ಷೇತ್ರದಲ್ಲಿ ಇದ್ದಾರೋ ಅಂಥವರಿಗೆ ನಿರೀಕ್ಷೆ ಕೂಡ ಮಾಡಿರದಂಥ ಅವಕಾಶವೊಂದು ದೊರೆಯವ ಸಾಧ್ಯತೆಗಳಿವೆ. ಇದನ್ನು ನೀವು ನಂಬುವುದಕ್ಕೆ ಸಹ ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿದರೆ ಒಳ್ಳೆಯದು. ಕೋರ್ಟ್- ಕಚೇರಿ ವ್ಯಾಜ್ಯಗಳಲ್ಲಿ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಕೆಲವರು ಸಹಾಯ ಮಾಡುವುದಾಗಿ ಹೇಳಲಿದ್ದಾರೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಣ್ಣ- ಪುಟ್ಟದಾದರೂ ಮನೆ ಮಟ್ಟಿಗೆ ಕಾರ್ಯಕ್ರಮ ಆಯೋಜಿಸುವಂಥ ಸಾಧ್ಯತೆ ಇದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿ ಸ್ವಲ್ಪ ಆತಂಕಕ್ಕೆ ಕಾರಣ ಆಗಬಹುದು. ನಿಮ್ಮೆಲ್ಲ ಪ್ರಯತ್ನವನ್ನು ಮಾಡಿದ ನಂತರದಲ್ಲಿಯೂ ಒಬ್ಬರೇ ವ್ಯಕ್ತಿ, ಒಂದೇ ವಿಷಯ, ಒಂದು ವಸ್ತು ನಿಮ್ಮನ್ನು ಈ ದಿನ ಬಹುವಾಗಿ ಕಾಡಬಹುದು. ಅದರಲ್ಲೂ ಕೊನೆ ಕ್ಷಣದಲ್ಲಿ ನಿರ್ಧಾರಗಳಲ್ಲಿ ಬಹಳ ಏರುಪೇರು ಮಾಡಲಿದ್ದೀರಿ. ಒಂದು ವೇಳೆ ಆಸ್ತಿ ಅಥವಾ ವಾಹನ ಮಾರಾಟಕ್ಕೆ ಇಟ್ಟಿದ್ದಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನು ಇದೊಂದು ದಿನದ ಮಟ್ಟಿಗೆ ಮಾಡಬೇಡಿ. ನಿಮ್ಮ ಬಳಿ ಇರುವ ಹಣಕ್ಕೆ ತಕ್ಕಂತೆ ಪ್ರಾಜೆಕ್ಟ್ ವೊಂದು ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಉದಾಹರಣೆಗೆ, ಇಷ್ಟೇ ಮೊತ್ತಕ್ಕೆ ಅಪಾರ್ಟ್ ಮೆಂಟ್ ಅಥವಾ ಸೈಟು ಅಥವಾ ವಾಹನ ಹೀಗೆ ನಿಮಗೆ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ಮಾತಿನ ಶಿಫಾರಸಿನ ಮೂಲಕ ಇತರರಿಗೆ ಕೆಲಸ ಮಾಡಿಕೊಡಲಿದ್ದೀರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನ ಮುಟ್ಟುವಂತೆ ಎಲ್ಲ ವಿಚಾರಗಳನ್ನು ಇತರರಿಗೆ ದಾಟಿಸುವುದಕ್ಕೆ ಸಫಲರಾಗಲಿದ್ದೀರಿ. ಮುಂದಾಲೋಚನೆಯಿಂದ ಲೆಕ್ಕ ಹಾಕಿಕೊಂಡು ಇಟ್ಟ ಹೆಜ್ಜೆಗಳು ಫಲ ನೀಡಲಿವೆ. ಯಾರು ಬದ್ಧತೆಯಿಂದ ನಿಮ್ಮ ಸಲಹೆ- ಸೂಚನೆಯನ್ನು ಅನುಸರಿಸಿದವರಿಗೆ ದೊಡ್ಡ ಲಾಭವಾಗುವ ಸಾಧ್ಯತೆಗಳಿವೆ. ಇತರರು ತಮ್ಮಿಂದ ಪೂರ್ತಿ ಮಾಡಲು ಸಾಧ್ಯವಿಲ್ಲ ಎಂದು ಅರ್ಧಕ್ಕೇ ನಿಲ್ಲಿಸಿದ ಕೆಲಸವೊಂದನ್ನು ಪೂರ್ತಿ ಮಾಡಬೇಕಾದ ಜವಾಬ್ದಾರಿ ನಿಮಗೆ ಬರಲಿದೆ. ಒಲ್ಲದ ಮನಸ್ಸಿನಿಂದಲೇ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ನಂತರದಲ್ಲಿ ಇದರಲ್ಲಿ ದೊಡ್ಡ ಯಶಸ್ಸು ಸಿಗುವ ಎಲ್ಲ ಸಾಧ್ಯತೆಗಳಿವೆ. ಯಾರು ಉದ್ಯೋಗಕ್ಕೆ ಸಂಬಂಧಿಸಿದಂಥ ಪರೀಕ್ಷೆಗಳನ್ನು ಬರೆದಿರುತ್ತಾರೋ ಅಂಥವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ಮುಖಾಂತರ ರೆಫರೆನ್ಸ್ ಗಳು ಬರಬಹುದು. ಇದು ನಿಮ್ಮ ಮನಸ್ಸಿಗೆ ಒಪ್ಪುವ ಸಾಧ‌್ಯತೆಗಳು ಸಹ ಹೆಚ್ಚಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಪ್ರೀತಿ- ಪ್ರೇಮದಲ್ಲಿ ಅಂದುಕೊಳ್ಳದ ಕೆಲಸ ಬೆಳವಣಿಗೆಗಳು ನಡೆಯಲಿವೆ. ಈ ಹಿಂದೆ ಆಗಿದ್ದ ಕೆಲವು ಘಟನೆಗಳಿಂದಾಗಿ ಯಾರದೋ ಮಾತು, ಟೀಕೆ, ಆಕ್ಷೇಪಗಳಿಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಯಾರೇ ನಿಮ್ಮ ಕೆಲಸದ ಬಗ್ಗೆ ಆಕ್ಷೇಪ ಹೇಳಿದರೂ ಅದನ್ನು ತೋರಿಸುವಂತೆ ನಯವಾಗಿಯೇ ಕೇಳಿ. ಹಾಗೂ ಅವರು ನಿಜವಾಗಿಯೂ ತಪ್ಪುಗಳನ್ನು ತೋರಿಸಿದ್ದೇ ಆದಲ್ಲಿ ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ. ಆದರೆ ಯಾವುದೇ ಕಾರಣಕ್ಕೂ ಸಿಟ್ಟಿನಿಂದ ಕೂಗಾಟ- ಕಿರುಚಾಟ ಮಾಡಬೇಡಿ. ಹೀಗೆ ಮಾಡಿದಲ್ಲಿ ನಿಮ್ಮ ವರ್ಚಸ್ಸು ಶಾಶ್ವತವಾಗಿ ಪೆಟ್ಟು ತಿನ್ನುವ ಅಪಾಯಗಳಿವೆ. ವಿದೇಶಗಳಲ್ಲಿ ಉದ್ಯೋಗಲ್ಲೆ ಪ್ರಯತ್ನ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶಗಳು ಇರುತ್ತವೆ. ನೀವಾಗಿಯೇ ಆಡಿದ ಮಾತುಗಳು ಸಮಸ್ಯೆಗಳಾಗಿ ತಲೆ ಎತ್ತುವ ಸಾಧ್ಯತೆಗಳಿವೆ. ನಿಮ್ಮ ಪರವಾಗಿ ಯಾರಾದರೂ ಮಾತನಾಡುವಾಗ ನೀವು ಸುಮ್ಮನಿದ್ದು ಬಿಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ತಂದೆ- ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಪರಿಣತ- ತಜ್ಞ ವೈದ್ಯರ ನೆರವು ನಿಮ್ಮ ಪಾಲಿಗೆ ದೊರೆಯಲಿದೆ. ಆತಂಕಗಳು ದೂರವಾಗುವುದಕ್ಕೆ ಹಿರಿಯರು ಸಹಕಾರ ನೀಡಲಿದ್ದಾರೆ. ನಿಮ್ಮ ಅದೃಷ್ಟವು ಈ ದಿನ ಅಚ್ಚರಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ ಕೆಲಸಕ್ಕೆ ಮೆಚ್ಚುಗೆ ಎಂಬಂತೆ ಅದೇ ಕೆಲಸಕ್ಕೆ ಸಂಬಂಧಿಸಿದವರು ಹುಡುಕಿಕೊಂಡು ಬಂದು, ನಿಮಗೆ ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ಜತೆಗೆ ಕೆಲಸ ಮಾಡುವವರು ನಿಮ್ಮ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ನಿಮ್ಮಲ್ಲಿ ಯಾರು ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಸಲುವಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಮನೆ ದೇವರನ್ನು ಮನಸ್ಸಲ್ಲಿ ಸ್ಮರಿಸಿಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬಜೆಟ್ ನಲ್ಲಿಯೇ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ನಿಮ್ಮಲ್ಲಿ ಇರಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ಕೆಲಬು ವಸ್ತುಗಳನ್ನು ಕೊಳ್ಳಬೇಕು ಎಂಬ ತೀರ್ಮಾನ ಮಾಡಲಿದ್ದೀರಿ. ಹೊಸ ವಾಹನ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರು ಅಚ್ಚರಿಯ ರೀತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಯೇ ಮಾಡಿಬಿಡುವ ಅವಕಾಶಗಳು ಸಹ ಹೆಚ್ಚಿವೆ. ಈ ದಿನ ನಿಮ್ಮ ಸಾಮಾಜಿಕ ಸ್ಥಾನ- ಮಾನಗಳು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಮನೆಯಿಂದ ದೂರ ಇದ್ದು, ವ್ಯಾಸಂಗ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಇದರಿಂದ ನಿಮಗೆ ಅನುಕೂಲವೇ ಆಗಲಿದೆ. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥವನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಯಾವ ವಿಚಾರದ ಬಗ್ಗೆ ನಿಮಗೆ ಪೂರ್ಣ ಮಾಹಿತಿ ಇಲ್ಲವೋ ಅಂಥದ್ದರ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮಕ್ಕಳ ಆರೋಗ್ಯ, ಶಿಕ್ಷಣ, ವ್ಯಾಪಾರ- ವ್ಯವಹಾರಗಳಿಗೆ ಬೇಕಾದ ಅನುಕೂಲ ಮಾಡಿಕೊಡುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ಸಮಾಧಾನದಿಂದ ಕೆಲವು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಈ ದಿನ ನಿಮ್ಮ ಪಾಲಿಗೆ ಹೊಸ ರೀತಿಯಲ್ಲಿ ಇರುತ್ತದೆ. ಇಲ್ಲಿಯ ತನಕ ನೀವು ಮಾಡಿರದ ಕೆಲಸವೊಂದನ್ನು ಆರಂಭಿಸುವ ಅವಕಾಶಗಳು ಕಾಣುತ್ತಿವೆ. ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯದಿಂದ ನಿಮ್ಮ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆಯನ್ನು ನಿರೀಕ್ಷೆ ಮಾಡಬಹುದು. ಪ್ರಯಾಣದಲ್ಲಿ ಶುಭ- ಲಾಭವನ್ನು ಕಾಣಲಿದ್ದೀರಿ. ಯಾವುದೇ ವ್ಯಕ್ತಿ, ವಿಷಯದ ಬಗ್ಗೆ ಪೂರ್ವಗ್ರಹವನ್ನು ಇರಿಸಿಕೊಳ್ಳಬೇಡಿ. ನಿಮಗೆ ಗೊತ್ತಿರುವ ವಿಚಾರವನ್ನು ಹೇಳುವುದಕ್ಕಾಗಲೀ ಮಾತನಾಡುವುದಕ್ಕಾಗಲೀ ಹಿಂಜರಿಕೆ ಮಾಡದಿರುವುದು ಉತ್ತಮ. ಕೆಲ ಸಂದರ್ಭದಲ್ಲಿ ಒತ್ತಡ ಎನಿಸುವಂತೆ ಕೆಲ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆದರೆ ಹಲವು ಬದಲಾವಣೆಗೆ ಈ ದಿನ ನಾಂದಿ ಹಾಡಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸಭ್ಯತೆ ಮೀರಿದ ಕೆಲವು ಪದಗಳನ್ನು ಇತರರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬಳಸುವ ಸಾಧ‌್ಯತೆ ಇದೆ. ಇದರಿಂದ ಜಗಳ- ಕದನಗಳು ಆಗಬಹುದು. ಸಣ್ಣ- ಪುಟ್ಟ ವಿಚಾರಗಳಿಗಾದರೂ ದಂಪತಿ ಮಧ್ಯೆ ಮನಸ್ತಾಪ ಕಾಣಿಸಿಕೊಳ್ಳಬಹುದು. ಇನ್ನು ಪ್ರೇಮಿಗಳ ಮಧ್ಯೆ ಸಹ ಕಮ್ಯುನಿಕೇಷನ್ ಗ್ಯಾಪ್ ಆಗುವುದರಿಂದ ದೊಡ್ಡ ಜಗಳವೇ ಆಗುವ ಸಾಧ್ಯತೆಗಳಿವೆ. ಎಂಥದ್ದೇ ಸನ್ನಿವೇಶ ಎದುರಾದರೂ ತಾಳ್ಮೆ- ಸಂಯಮದಿಂದ ವರ್ತಿಸಿ. ಹಳೇ ಘಟನೆ, ಸನ್ನಿವೇಶಗಳನ್ನು ಈಗ ಎತ್ತಾಡಿ, ಇನ್ನಷ್ಟು ಸಂಬಂಧವನ್ನು ಹಾಳು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರಿಗೆ ಕೆಲವರು ಪಾರ್ಟನರ್ ಷಿಪ್ ಮಾಡುವುದಕ್ಕೆ ಆಹ್ವಾನ ನೀಡುವ ಸಾಧ್ಯತೆಗಳಿವೆ. ಹೆಚ್ಚಿನ ಲಾಭದ ಪ್ರಸ್ತಾವ ಸಹ ಮುಂದಿಡಬಹುದು. ಆದರೆ ಆ ವ್ಯಕ್ತಿಯ ಹಿನ್ನೆಲೆ ಹಾಗೂ ಸದ್ಯದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿದ ನಂತರವೇ ಅಭಿಪ್ರಾಯವನ್ನು ತಿಳಿಸಿ.