Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 14ರ ಬುಧವಾರ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 14ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆ. ನಿಮ್ಮ ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ಇಷ್ಟು ಸಮಯ ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರುತ್ತೀರಿ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಮತ್ತಿತರ ಶುಲ್ಕಗಳ ಕಡೆಗೆ ಲಕ್ಷ್ಯ ನೀಡಿ.
ಜನ್ಮಸಂಖ್ಯೆ 2
ಈ ದಿನ ನೀವೆಷ್ಟು ಧರ್ಮಿಷ್ಠರು, ಸತ್ಯವಂತರಾರುತ್ತೀರೋ ಅಷ್ಟು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಹಳೆಯ ಕಾಯಿಲೆಗಳು ಉಲ್ಬಣ ಆಗಬಹುದು. ಯಾವುದೇ ಕಾರಣಕ್ಕೆ ಮನೆ ಮದ್ದು, ಸ್ವಯಂ ವೈದ್ಯ ಮಾಡಕೂಡದು. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಇನ್ನು ಮಾತನಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು.
ಜನ್ಮಸಂಖ್ಯೆ 3
ಆಹಾರ- ಪಥ್ಯದ ಕಡೆಗೆ ನಿಗಾ ನೀಡಿ. ಸೂಕ್ತ ಆಹಾರ- ಅಗತ್ಯ ಪ್ರಮಾಣದ ನೀರು ಸೇವನೆ ಮಾಡಿ. ನೀವಾಗಿಯೇ ಬಲಿಷ್ಠರ ಜತೆಗೆ ವೈರತ್ವ ಮಾಡಿಕೊಳ್ಳಬೇಡಿ. ಆದಾಯ- ವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ. ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ.
ಜನ್ಮಸಂಖ್ಯೆ 4
ನಿಮ್ಮ ಪಾಲಿನ ಕೆಲಸವನ್ನು ಅಥವಾ ಉದ್ಯೋಗ ಸ್ಥಳದಲ್ಲಿನ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ. ಕಷ್ಟವೋ ಸುಖವೋ ನೀವೇ ಮಾಡಿ. ಆಗದಿದ್ದಲ್ಲಿ ನಿಮ್ಮ ಮೇಲಧಿಕಾರಿಗೇ ಮನವಿ ಮಾಡಿ, ನಿಮ್ಮಿಂದ ಇದು ಸಾಧ್ಯವಿಲ್ಲ ಎಂಬುದನ್ನು ತಿಳಿಸಿ. ಆದರೆ ನೀವಾಗಿಯೇ ತೀರ್ಮಾನ ಮಾಡಬೇಡಿ. ಆಲಸ್ಯವೋ ತಿರಸ್ಕಾರವೋ ನಿಮಗೆ ಉರುಳಾಗಬಹುದು.
ಜನ್ಮಸಂಖ್ಯೆ 5
ಕ್ರೆಡಿಟ್ ಕಾರ್ಡ್ ಮತ್ತು ಇಎಂಐಗಳನ್ನು ಕಟ್ಟಬೇಕಾದ ಸರಿಯಾದ ದಿನಾಂಕಕ್ಕೆ ಕಟ್ಟಿಬಿಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿ, ಸಮಸ್ಯೆಗಳನ್ನು ಎದುರಿಸುವಂಥ ಯೋಗ ನಿಮಗೆ ಇದೆ. ಆದ್ದರಿಂದ ಈ ಕಡೆಗೆ ಗಮನ ವಹಿಸಿ, ಪಾವತಿ ಸರಿಯಾದ ಸಮಯಕ್ಕೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 6
ಭೂಮಿ, ಷೇರು, ಮ್ಯೂಚುವಲ್ ಫಂಡ್‌ಗಳ ಮೂಲಕ ಆದಾಯ ತರುತ್ತದೆ. ಮೇಲಧಿಕಾರಿಗಳ ಜತೆಗೆ ಮಾತುಕತೆ ವೇಳೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಜತೆಗೆ ವ್ಯವಹಾರದಲ್ಲಿ ಕಾಗದ- ಪತ್ರಗಳನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿ. ಖರ್ಚನ್ನು ಹೆಚ್ಚು ಮಾಡಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆ.
ಜನ್ಮಸಂಖ್ಯೆ 7
ಆದಾಯದ ಮೂಲ ಹೆಚ್ಚಾಗಲಿದೆ. ಇರುವ ಕೆಲಸದಲ್ಲಿ ಅಥವಾ ಕೆಲಸ ಬದಲಾವಣೆಯೊಂದಿಗೆ ಸಂಬಳದಲ್ಲಿ ಹೆಚ್ಚಳ, ಪ್ರಮೋಷನ್, ಹೊಸ ವ್ಯಾಪಾರದ ಆಲೋಚನೆಗಳು ಬರಲಿವೆ. ಹೊಸ ವ್ಯಾಪಾರ ಶುರು ಮಾಡಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ಸಿಗಲಿದೆ. ಹಣಕಾಸಿನ ನೆರವು ನೀಡುವುದಕ್ಕೆ, ಸಾಲದ ರೂಪದಲ್ಲೇ ಆದರೂ ಅದನ್ನು ನೀಡುವುದಕ್ಕೆ ಜನ ದೊರೆಯುತ್ತಾರೆ.
ಜನ್ಮಸಂಖ್ಯೆ 8
ದೂರದ ಪ್ರದೇಶಗಳಿಗೆ ತೆರಳುವ ಯೋಗ, ಅದರಿಂದ ಲಾಭ ಆಗುವ ಯೋಗಗಳಿವೆ. ವ್ಯಾಜ್ಯ, ತಂಟೆ- ತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆ. ನಿಮಗೊಂದು ವರ್ಚಸ್ಸು ಇದ್ದು, ಇತರರು ನಿಮ್ಮ ಮಾತನ್ನು ಪಾಲಿಸುತ್ತಾರೆ. ಕಾರು- ಬೈಕ್‌ಗಳು ಖರೀದಿಸಬೇಕು ಎಂದಿರುವವರಿಗೆ ವಾಹನ ಖರೀದಿ ಯೋಗ ಇದೆ.
ಜನ್ಮಸಂಖ್ಯೆ 9
ಕೆಲಸ ಮಾಡುವುದಕ್ಕೆ ಮನಸ್ಸಿದ್ದರೂ ಸನ್ನಿವೇಶಗಳು ಅನುಕೂಲಕರವಾಗಿ ಇಲ್ಲ, ಕೆಲಸ ಮಾಡುವುದಕ್ಕೆ ಹಿಂಸೆ ಆಗುತ್ತಿದೆ ಎಂದು ಉದ್ಯೋಗ ಬಿಡುವುದಕ್ಕೆ ಹೋಗಬೇಡಿ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು, ಅದನ್ನು ಹೇಗೆ ನಿಮಗೆ ಸಾಧಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಆಲೋಚಿಸಿ.
ಲೇಖನ- ಎನ್.ಕೆ.ಸ್ವಾತಿ