ದಕ್ಷಿಣ ಭಾರತದಲ್ಲೂ ಹೆಚ್ಚುತ್ತಿದೆ ವಾಯು ಮಾಲಿನ್ಯ: ಮುಂಚೂಣಿಯಲ್ಲಿದೆ ಕರ್ನಾಟಕ, ರಾಜ್ಯದ ಮೇಲೆ ಹೊರ ರಾಜ್ಯಗಳ ಮಾಲಿನ್ಯದ ಎಫೆಕ್ಟ್!
ದಕ್ಷಿಣ ಭಾರತದಲ್ಲೂ ವಾಯು ಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ಆಘಾತಕಾರಿ ವರದಿಯೊಂದು ಬಹಿರಂಗವಾಗಿದ್ದು, ಇದರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ಸಂಸ್ಥೆಯ ಅಧ್ಯಯನದ ವರದಿ ಪ್ರಕಾರ ರಾಜ್ಯದ ಮಾಲಿನ್ಯದ ಶೇ 53ರಷ್ಟು ಹೊರ ರಾಜ್ಯಗಳಿಂದ ಬರುತ್ತಿದೆ. ಗಾಳಿಯ ಗುಣಮಟ್ಟ ಸುಧಾರಣೆಗೆ ದಕ್ಷಿಣ ರಾಜ್ಯಗಳ ನಡುವೆ ಪ್ರಾದೇಶಿಕ ಸಹಕಾರ ಅಗತ್ಯವಾಗಿದೆ ಎಂದು ವರದಿ ಎಚ್ಚರಿಸಿದೆ.

ಮುಖ್ಯಾಂಶಗಳು
- ಹೆಚ್ಚು ವಾಯು ಮಾಲಿನ್ಯ ಇರುವ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕವೂ ಮುಂಚೂಣಿಯಲ್ಲಿ
- ಕರ್ನಾಟಕದ ಮಾಲಿನ್ಯದಲ್ಲಿ ಶೇ 53 ಹೊರರಾಜ್ಯಗಳ ಕೊಡುಗೆ!
- ದಕ್ಷಿಣದ 25 ನಗರಗಳಲ್ಲಿ ಹೆಚ್ಚಿದ PM10 ಪ್ರಮಾಣ
ಬೆಂಗಳೂರು, ಆಗಸ್ಟ್ 20: ದೇಶದಲ್ಲಿ ವಾಯು ಮಾಲಿನ್ಯ (Air Pollution) ಎಂದರೆ ತಕ್ಷಣ ನೆನಪಾಗುವುದು ದೆಹಲಿ ಮತ್ತು ಉತ್ತರ ಭಾರತದ ನಗರಗಳು. ಆದರೆ, ದಕ್ಷಿಣ ಭಾರತದಲ್ಲೂ ವಾಯು ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. ಬೆಂಗಳೂರು ಮೂಲದ ಪ್ರಮುಖ ವೈಜ್ಞಾನಿಕ ಸಂಶೋಧನಾ ಸಂಸ್ಥೆ ‘ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ (CSTEP)’ ಪ್ರಕಟಿಸಿರುವ ನೂತನ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕೇರಳದ ನಂತರ ಅತಿ ಹೆಚ್ಚು ವಾಯು ಮಾಲಿನ್ಯ (Air Quality) ಹೊಂದಿರುವ ರಾಜ್ಯವಾಗಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ 2021-2025ರ ದತ್ತಾಂಶಗಳ ಪ್ರಕಾರ, ‘ರಾಷ್ಟ್ರೀಯ ಶುದ್ಧ ಗಾಳಿ’ ಕಾರ್ಯಕ್ರಮದ (NCAP) ಅಡಿಯಲ್ಲಿ ಗುರುತಿಸಲಾದ 131 ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳಲ್ಲಿ 25 ನಗರಗಳು ದಕ್ಷಿಣ ಭಾರತದಲ್ಲೇ ಇವೆ. ದಕ್ಷಿಣದ ಪ್ರಮುಖ ನಗರಗಳಲ್ಲಿ ‘PM10’ (ಸೂಕ್ಷ್ಮ ಧೂಳಿನ ಕಣ) ಮಟ್ಟವು ನಿಗದಿತ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಕರ್ನಾಟಕದ ವಾಯು ಮಾಲಿನ್ಯಕ್ಕೆ ಹೊರ ರಾಜ್ಯಗಳ ಕೊಡುಗೆ ಶೇ 53!
CSTEP ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಯಾವುದೇ ನಗರ ಅಥವಾ ರಾಜ್ಯದ ಗಾಳಿಯ ಗುಣಮಟ್ಟವು ಕೇವಲ ಆಯಾ ಸ್ಥಳೀಯ ಮಾಲಿನ್ಯದಿಂದ ಮಾತ್ರ ಹಾಳಾಗುವುದಿಲ್ಲ. ನೆರೆಯ ರಾಜ್ಯಗಳಿಂದ ಬೀಸುವ ಗಾಳಿಯ ಮೂಲಕವೂ ಮಾಲಿನ್ಯ ಹರಿದುಬರುತ್ತದೆ. ಕರ್ನಾಟಕದಲ್ಲಿ ಕಂಡುಬರುವ ಒಟ್ಟು ವಾಯು ಮಾಲಿನ್ಯದಲ್ಲಿ ಸ್ಥಳೀಯ ಮೂಲಗಳ (ವಾಹನ, ಕೈಗಾರಿಕೆ, ಧೂಳು ಇತ್ಯಾದಿ) ಕೊಡುಗೆ ಶೇಕಡಾ 47 ರಷ್ಟಿದ್ದರೆ, ಇನ್ನುಳಿದ ಶೇಕಡಾ 53 ರಷ್ಟು ಮಾಲಿನ್ಯವು ಹೊರ ರಾಜ್ಯಗಳಿಂದ ಹಾಗೂ ನೆರೆಯ ಪ್ರದೇಶಗಳಿಂದ ಗಡಿ ದಾಟಿ ಬರುತ್ತಿದೆ.
ದಕ್ಷಿಣ ಭಾರತದ ಇತರ ರಾಜ್ಯಗಳಾದ ತೆಲಂಗಾಣದಲ್ಲಿ ಸ್ಥಳೀಯ ಮಾಲಿನ್ಯ ಶೇ 38, ಆಂಧ್ರಪ್ರದೇಶದಲ್ಲಿ ಶೇ 44, ತಮಿಳುನಾಡಿನಲ್ಲಿ ಶೇ 61 ಮತ್ತು ಕೇರಳದಲ್ಲಿ ಶೇ 65 ರಷ್ಟಿದೆ.
ಪ್ರಾದೇಶಿಕ ಸಹಕಾರ ತುರ್ತು ಅಗತ್ಯದ ಬಗ್ಗೆಯೂ ಉಲ್ಲೇಖ
ಕೇಂದ್ರ ಸರ್ಕಾರವು NCAP ಹಾಗೂ 15ನೇ ಹಣಕಾಸು ಆಯೋಗದ ಮೂಲಕ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿಲ್ಲ. ಮಾಲಿನ್ಯವು ರಾಜ್ಯದ ಗಡಿಗಳಿಗೆ ಸೀಮಿತವಾಗಿಲ್ಲದಿರುವುದರಿಂದ, ಕೇವಲ ನಗರ ಆಧಾರಿತ ಯೋಜನೆಗಳಿಂದ ವಾಯು ಮಾಲಿನ್ಯ ತಡೆಯಲು ಸಾಧ್ಯವಿಲ್ಲ. ಹೀಗಾಗಿ, ದಕ್ಷಿಣ ಭಾರತದ ಐದೂ ರಾಜ್ಯಗಳು ಒಟ್ಟಾಗಿ ‘ಪ್ರಾದೇಶಿಕ ವಾಯುಪ್ರದೇಶ ನಿರ್ವಹಣೆ (Regional Airshed Management)’ ಮಾದರಿಯಲ್ಲಿ ಜಂಟಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ತುರ್ತು ಅಗತ್ಯವಾಗಿದೆ ಎಂದು CSTEP ವರದಿ ಎಚ್ಚರಿಸಿದೆ.
ಇದನ್ನೂ ಓದಿ: ಮಳೆರಾಯನ ಆರ್ಭಟಕ್ಕೆ ಕಮ್ಮಿಯಾಯ್ತು ವಾಯು ಮಾಲಿನ್ಯ: ಬೆಂಗಳೂರು ಸೇರಿ ಪ್ರಮುಖ ನಗರಗಳ AQI ವರದಿ ಇಲ್ಲಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Thu, 20 August 26




