
ಬೆಂಗಳೂರು, (ಫೆಬ್ರವರಿ 01): ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದ ಹಿರಿಯ ಶಾಸಕರಿಗೆ ಸಚಿವ ಸ್ಥಾನಮಾನದ ಕೆಲ ಹುದ್ದೆಗಳನ್ನು ನೀಡಲಾಗಿತ್ತು. ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು, ಇದರ ಜತೆಗೆ ಶಾಸಕ ಬಿಆರ್ ಪಾಟೀಲ್ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಏಕಾಏಕಿ ಬಿಆರ್ ಪಾಟೀಲ್ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.
ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದಾರೆ. ಆದ್ರೆ, ಬಿಆರ್ ಪಾಟೀಲ್ ಅವರ ದಿಧೀರ್ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಏಕಾಏಕಿ ರಾಜೀನಾಮೆ ಏಕೆ ನೀಡಿದ್ದಾರೆ ಎನ್ನುವ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಮಗೆ ಯಾವುದೇ ಸ್ಥಾನಮಾನವಿಲ್ಲ ಎಂದು ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ಆರ್‌ವಿ ದೇಶಪಾಂಡೆ, ಬಸವರಾಜ್ ರಾಯರೆಡ್ಡಿ ಹಾಗೂ ಬಿಆರ್ ಪಾಟೀಲ್ ಸಹ ಬೇಸರಗೊಂಡಿದ್ದರು. ಹೀಗಾಗಿ ಬಂಡಾಯ ಎದ್ದಿದ್ದ ಶಾಸಕರಿಗೆ ವಿಶೇಷ ಹುದ್ದೆಗಳ ಸ್ಥಾನ ಮಾನ ನೀಡಲಾಗಿತ್ತು. ಬಸವರಾಜ ರಾಯರೆಡ್ಡಿ ಅವರಿಗೆ ಸಿಎಂ ಆರ್ಥಿಕ ಹುದ್ದೆ, ಬಿಆರ್ ಪಾಟೀಲ್ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೇ ಆರ್‌ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು, ಆದ್ರೆ, ಇದೀಗ ಬಿಆರ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಆಳಂದ ಕಾಂಗ್ರೆಸ್ ಶಾಸಕ ಮತ್ತೆ ಸ್ವಪಕ್ಷ ಮತ್ತು ಸರ್ಕಾರ ಆಡಳಿತ ವಿರುದ್ಧ ಸಿಡಿದೆದ್ದಿದ್ದರು. ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಶಾಸಕ ಬಿ.ಆರ್. ಪಾಟೀಲ್ ಅವರು ಬಹಿರಂಗವಾಗಿಯೇ ಸಚಿವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಸಿಡಿದೆದ್ದಿದ್ದರು. ಅಲ್ಲದೇ ಈ ಸಂಬಂಧ ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.
ಬಿ.ಆರ್.ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಳೆಯ ಸ್ನೇಹಿತ ಹಾಗೂ ಪರಮಾಪ್ತರಲ್ಲಿ ಒಬ್ಬರು. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಪ್ರಿಯಾಂಕ ಖರ್ಗೆ ಹಾಗೂ ಶರಣಪ್ರಕಾಶ್ ಪಾಟೀಲ್ ಕಲಬುರಗಿ ಜಿಲ್ಲೆಯಿಂದ ಅಡ್ಡಲಾಗಿದ್ದರು. ಹೀಗಾಗಿ ಬಿ.ಆರ್.ಪಾಟೀಲ್ ಹಲವು ಬಾರಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು. ಇದೇ ರೀತಿ ಕಾಂಗ್ರೆಸ್‌ನಲ್ಲಿ ಬಸವರಾಜರಾಯ ರೆಡ್ಡಿ ಕೂಡ ಹಲವು ಬಾರಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿದ್ದರು. ಇದೀಗ ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮತ್ತೆ ಸುದ್ದಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Sat, 1 February 25