ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೋದಿಗೆ ಡಿಕೆಶಿ ಮತ್ತೊಂದು ಪತ್ರ

ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರು ಸಿಡಿದೆದ್ದಿದ್ದಾರೆ. ನಾಳೆ ಬೆಳಗ್ಗೆ 11ಗಂಟೆಗೆ ಹೆದ್ದಾರಿ ಬಂದ್‌ಗೆ ನಿರ್ಧರಿಸಿದ್ದಾರೆ. ಈ ಮಧ್ಯೆ ಕಬ್ಬು ಬೆಳೆಗಾರರ ಬೇಡಿಕೆ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಪತ್ರ ಬರೆದಿದ್ದಾರೆ. ಲಕ್ಷಾಂತರ ರೈತರ ಹಿತಾಸಕ್ತಿಗಾಗಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೋದಿಗೆ ಡಿಕೆಶಿ ಮತ್ತೊಂದು ಪತ್ರ
ಪ್ರಧಾನಿ ಮೋದಿಗೆ ಸಿಎಂ ಪತ್ರ
Edited By:

Updated on: Oct 30, 2026 | 9:59 PM

ಮುಖ್ಯಾಂಶಗಳು

  • ಕಬ್ಬು ಬೆಳೆಗಾರರ ಬೇಡಿಕೆ ವಿಚಾರ
  • ಪ್ರಧಾನಿ ಮೋದಿ ಮತ್ತು ಪ್ರಲ್ಹಾದ್​ ಜೋಶಿಗೆ ಸಿಎಂ ಪತ್ರ
  • ಮಧ್ಯಪ್ರವೇಶಿಸಿ ತುರ್ತು ನಿರ್ಧಾರ ಕೈಗೊಳ್ಳುವಂತೆ ಮನವಿ

ಬೆಂಗಳೂರು, ಅಕ್ಟೋಬರ್​​ 30: ಪ್ರತೀ ಟನ್‌ ಕಬ್ಬಿಗೆ 5500 ರೂ ದರ ನಿಗದೇ ಮಾಡಲೇಬೇಕು ಅಂತಾ ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೀಡಿದ್ದ ಗಡುವು ಇಂದು ರಾತ್ರಿ ಮುಗಿಯಲಿದ್ದು, ‘ನಮ್ಮ ಮೇಲೆ ಗುಂಡು ಹಾರಿಸಿದ್ರು ಹೆದ್ದಾರಿ ಬಂದ್ ಮಾಡುತ್ತೇವೆ’ ಎಂದು ಇದೀಗ ರೈತರು ಮತ್ತೆ ಸಿಡಿಸಿದೆದ್ದಿದ್ದಾರೆ. ಹೀಗಿರುವಾಗ ಸಿಎಂ ಡಿಕೆ ಶಿವಕುಮಾರ್,​ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಪತ್ರ ಬರೆದಿದ್ದು, ಕೂಡಲೇ ಮಧ್ಯಪ್ರವೇಶಿಸಿ, ತುರ್ತು ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಏನಿದೆ?

  • ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಿಸಿ: 2019 ಫೆಬ್ರವರಿ 14ರಿಂದ ಸಕ್ಕರೆ ಎಫ್‌ಆರ್‌ಪಿ ಪ್ರತಿ ಟನ್‌ಗೆ 2,750 ರಿಂದ 3,650 ರೂ. ಏರಿಕೆಯಾಗಿದ್ದರೂ, ಸಕ್ಕರೆ MSP ದರ ಪ್ರತಿ ಕೆಜಿಗೆ ರೂ. 31ರಷ್ಟೇ ಇದೆ. ಸಕ್ಕರೆಯು ಪ್ರಸ್ತುತ ಪ್ರತಿ ಕೆಜಿಗೆ ಸುಮಾರು 45 ರೂ,ರಂತೆ ಮಾರಾಟವಾಗುತ್ತಿರುವುದರಿಂದ ಈಗ MSPಯನ್ನು ಪರಿಷ್ಕರಣೆ ಮಾಡಿದರೆ ಗ್ರಾಹಕರ ಮೇಲೆ ಹೊರೆ ಹೆಚ್ಚಿಸುವುದಿಲ್ಲ. ಬದಲಿಗೆ ಅದು ರೈತರ ಪಾವತಿಗಳಿಗೆ ಭದ್ರತೆ ಒದಗಿಸುತ್ತದೆ.

ಡಿಕೆ ಶಿವಕುಮಾರ್​ ಟ್ವೀಟ್

  • ಕಬ್ಬಿನ ರಸ, ಸಿರಪ್ ಹಾಗೂ ಬಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್ ಉತ್ಪಾದನೆಗೆ ನಿರ್ಬಂಧ ವಿಧಿಸಿರುವ 2026ರ ಅಕ್ಟೋಬರ್ 22ರ ನಿರ್ದೇಶನವನ್ನು ಮರುಪರಿಶೀಲಿಸಬೇಕು. 2026-27ರ ಎಥೆನಾಲ್ ಪೂರೈಕೆ ವರ್ಷಕ್ಕೆ ಸಂಬಂಧಿಸಿದ ಈ ನಿರ್ಬಂಧವನ್ನು 2027ರ ಫೆಬ್ರವರಿಯಲ್ಲಿ ಕಬ್ಬಿನ ಇಳುವರಿ ಅಂದಾಜು ಪ್ರಕಟವಾದ ಬಳಿಕ ಪರಿಶೀಲಿಸಬೇಕು. ಮೊದಲ ಹಂತದಲ್ಲಿ ಬಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು. ಜೊತೆಗೆ, 2022-23ರಿಂದ ಪರಿಷ್ಕರಣೆಯಾಗದ ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್ ಆಧಾರಿತ ಎಥೆನಾಲ್ ಬೆಲೆಯನ್ನೂ ಹೆಚ್ಚಿಸಬೇಕು. 2025-26ರಲ್ಲಿ ಕರ್ನಾಟಕದ ಕಬ್ಬು ಆಧಾರಿತ ಡಿಸ್ಟಿಲರಿಗಳು ಎಥೆನಾಲ್ ಮಾರಾಟದಿಂದ 5,803.7 ಕೋಟಿ ರೂ ಆದಾಯ ಗಳಿಸಿವೆ. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನಗಳೊಳಗೆ ಕಬ್ಬಿನ ಬಿಲ್ ಪಾವತಿಸಲು ನೆರವಾಗಿದೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟ ಮತ್ತೆ ತೀವ್ರ: ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್, ಹತ್ತರಗಿ ಟೋಲ್ ಸ್ಥಗಿತಕ್ಕೆ ನಿರ್ಧಾರ

  • ಎಫ್‌ಆರ್‌ಪಿ ಮೂಲ ರಿಕವರಿಯನ್ನು ಮತ್ತೆ ಶೇಕಡಾ 9.5 ಕ್ಕೆ ಇಳಿಸಿ: ಇದರಿಂದ ಕಡಿಮೆ ರಿಕವರಿ ಇರುವ ಪ್ರದೇಶಗಳ ರೈತರು ಮಣ್ಣು ಮತ್ತು ಹವಾಮಾನದ ಕಾರಣಕ್ಕಾಗಿ ನಷ್ಟ ಅನುಭವಿಸುವುದು ತಪ್ಪುತ್ತದೆ.
  • ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ MSP ನಿಗದಿಪಡಿಸಿ: ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆಯನ್ನು ನಿಗದಿಪಡಿಸುವುದರಿಂದ ಗೃಹಬಳಕೆಯ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದರ ಜೊತೆಗೆ, ಸಗಟು ಖರೀದಿದಾರರು ನ್ಯಾಯಯುತ ಬೆಲೆಯನ್ನು ಪಾವತಿಸುವಂತಾಗುತ್ತದೆ.
  • ಆದಾಯ ಹಂಚಿಕೆ ಸೂತ್ರ ಮರುಪರಿಶೀಲಿಸಿ: ಎಥೆನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯ ಆದಾಯವನ್ನು ಒಳಗೊಂಡಂತೆ ಆದಾಯ ಹಂಚಿಕೆ ಸೂತ್ರವನ್ನು ಮರುಪರಿಶೀಲಿಸಿ. ನೀತಿ ಆಯೋಗದ ಕಾರ್ಯಪಡೆ ಮತ್ತು ಸಿಎಸಿಪಿ ಶಿಫಾರಸು ಮಾಡಿದಂತೆ ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಿ.

ಪ್ರಲ್ಹಾದ್​ ಜೋಶಿಗೂ ಪತ್ರ

ಇನ್ನು ಸಿಎಂ ಡಿಕೆ ಶಿವಕುಮಾರ್​ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೂ ಪತ್ರ ಬರೆದಿದ್ದು, ಕಬ್ಬು ಬೆಳೆಗಾರರ ಕಲ್ಯಾಣ ಮತ್ತು ಅವರ ಜೀವನೋಪಾಯದ ರಕ್ಷಣೆ ನಮ್ಮ ಸರ್ಕಾರ ಪ್ರಮುಖ ಆದ್ಯತೆಯಾಗಿದೆ. ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹಾಗೂ ಎಥೆನಾಲ್​​ ಆದಾಯದಲ್ಲಿ ನ್ಯಾಯಯುತ ಪಾಲು, ಬೇಡಿಕೆ ಹಾಗೂ ಅವರ ಹಿತದೃಷ್ಟಿಯಿಂದ ಸಕಾಲಿಕ ನಿರ್ಧಾರಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us