ಅಯೋಧ್ಯೆ ರಾಮಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನಿರಾಕರಿಸಿದ ಅಮೆರಿಕ
ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಿಸಿದೆ. ನಿಬಂಧನೆಗಳನ್ನು ಪೂರ್ತಿಗೊಳಿಸದ ಹಿನ್ನೆಲೆಯಲ್ಲಿ ವೀಸಾ ನಿರಾಕರಣೆ ಮಾಡಲಾಗಿದೆ. ಆದರೆ ವೀಸಾ ನಿರಾಕರಣೆಗೆ ಅಮೆರಿಕ ಯಾವುದೇ ನಿಖರ ಕಾರಣವನ್ನು ತಿಳಿಸಿಲ್ಲ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಅಮೆರಿಕಾಕೆ ತೆರಳಬೇಕಿತ್ತು.
ಮೈಸೂರು, ಆಗಸ್ಟ್ 14: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್‌ಗೆ (Arun Yogiraj) ಅಮೆರಿಕ ವೀಸಾ (visa) ನಿರಾಕರಿಸಿದೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸಕ್ಕೆ ಅರುಣ್ ಯೋಗಿರಾಜ್ ಅಮೆರಿಕಾಗೆ ಹೋಗಬೇಕಿತ್ತು. ಅದಕ್ಕಾಗಿ ಅವರು ಜೂನ್ನಲ್ಲಿ ವೀಸಾಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ನಿಬಂಧನೆಗಳನ್ನು ಪೂರ್ತಿಗೊಳಿಸದ ಹಿನ್ನೆಲೆಯಲ್ಲಿ ಇದೀಗ ವೀಸಾ ನಿರಾಕರಣೆ ಮಾಡಲಾಗಿದೆ.
ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡುವ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಅರುಣ್ ಯೋಗಿರಾಜ್ ಅವರ ಪ್ರತಿಭೆ ಮತ್ತು ಕೊಡುಗೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿತ್ತು.
ಇದನ್ನೂ ಓದಿ: ಶಿಲ್ಪಿ ಅರುಣ್ ಯೋಗಿರಾಜ್‌ಗೆ ಗೌರವ ಡಾಕ್ಟರೇಟ್; ಇಲ್ಲಿವೆ ಫೋಟೋಸ್
ಅಮೆರಿಕದ ಕನ್ನಡ ಕೂಟಗಳ ಸಂಘ, ವಿಶ್ವ ಕನ್ನಡ ಸಮ್ಮೇಳನ-2024 ಕಾರ್ಯಕ್ರಮವನ್ನು ವರ್ಜೀನಿಯಾದ ರಿಚ್ಮಂಡ್ನಲ್ಲಿ ಆಯೋಜಿಸಲಾಗಿತ್ತು. ಇದೇ ಕಾರ್ಮಕ್ರಮಕ್ಕೆ ಯೋಗಿರಾಜ್ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ. ಸದ್ಯ ವೀಸಾ ಅರ್ಜಿಯನ್ನು ತಿರಸ್ಕರಿಸಿರುವ ಅಮೆರಿಕ ರಾಯಭಾರ ಕಚೇರಿ ಇದುವರೆಗೆ ಯಾವುದೇ ಕಾರಣವನ್ನು ನೀಡಿಲ್ಲ.
ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು
ವೀಸಾ ನಿರಾಕರಣೆ ಬಗ್ಗೆ ಮೈಸೂರಿನಲ್ಲಿ ಟಿವಿ9ಗೆ ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಕ್ರಿಯಿಸಿದ್ದು, ಅಮೆರಿಕ ಕಾರ್ಯಕ್ರಮಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸಿದ್ದೆ. ವೀಸಾ ಯಾವ್ಯಾವ ದಾಖಲೆ ಕೇಳಿದ್ದರು, ಎಲ್ಲವನ್ನೂ ಕೊಟ್ಟಿದ್ದೆ. ವೀಸಾ ನಿರಾಕರಣೆ ಆಗಿದ್ದಕ್ಕೆ ಯಾವುದೇ ನಿರಾಸೆ ಆಗಿಲ್ಲ. ವೀಸಾಗೆ ಅವಕಾಶ ಸಿಕ್ಕಿದ್ದರೆ ಕನ್ನಡಿಗರ ಭೇಟಿಯಾಗಬಹುದಿತ್ತು. ಕುಟುಂಬದ ಜತೆ ಸಮಯ ಕಳೆಯಬಹುದು ಎಂದು ನಿರ್ಧರಿಸಿದ್ದೆ. ಮುಂದಿನ ವರ್ಷ ಅವಕಾಶ ಸಿಕ್ಕರೆ ಹೋಗುತ್ತೇನೆ. ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಲ್ಲ ಎಂದು ಹೇಳಿದ್ದಾರೆ.
ಶಿಲ್ಪಿ ಅರುಣ್ ಯೋಗಿರಾಜ್ ಅವರು ಜನವರಿ 22ರಂದು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಅವರು ಹೆಸರಾಂತ ಶಿಲ್ಪಿಗಳ ವಂಶಕ್ಕೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ: ಏಕಾಶಿಲಾ ಹನುಮ.. ಅದೂ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದೇ ಕೆತ್ತನೆ, ಇಲ್ಲಿದೆ ನೋಡಿ
ಎಂಬಿಎ ಪದವೀಧರರಾಗಿರುವ ಅರುಣ್ ಕಾರ್ಪೋರೇಟ್ ನೌಕರಿಯನ್ನು ತೊರೆದು ಬಳಿಕ ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡರು. 2008 ರಿಂದ ಈವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಪ್ರತಿಮೆಗಳನ್ನು ಕತ್ತನೆ ಮಾಡಿದ್ದಾರೆ. ಈ ಮೊದಲು ಕೇದರನಾಥ ದೇಗುಲಕ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಅರುಣ್ ಕೆತ್ತನೆ ಮಾಡಿದ್ದರು.
ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಇವರೇ ಕೆತ್ತನೆ ಮಾಡಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಬಳಿಕ ಅವರು ಭಾರತದಾದ್ಯಂತ ಸಾಕಷ್ಟು ಮನ್ನಣೆ ಪಡೆದುಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Wed, 14 August 24