ಹುಬ್ಬಳ್ಳಿ ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲ ಮೈಸೂರು ವಿವಿಗೆ ಹಸ್ತಾಂತರ; ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಅದು ಹುಬ್ಬಳ್ಳಿಯ ಹೆಮ್ಮೆಯ ಪ್ರತೀಕ. ಪದ್ಮ ವಿಭೂಷಣ ಗಂಗೂಬಾಯಿ ಹಾನಗಲ್ ಹೆಸರಿನಲ್ಲಿ ಸ್ಥಾಪನೆ ಮಾಡಿರುವ ಗುರುಕುಲದಲ್ಲಿ ಗುರು ಶಿಷ್ಯ ಪರಂಪರೆಯ ಉಳಿವಿಗಾಗಿ ಈಗ ಹೋರಾಟ ಅನಿವಾರ್ಯವಾಗಿದೆ. ದೂರದ ಊರು, ರಾಜ್ಯಗಳಿಂದ ಗುರುಕುಲ ಪರಂಪರೆಯಲ್ಲಿ ಕಲಿತು ಭವಿಷ್ಯ ರೂಪಿಸಿಕೊಳ್ಳಲು ಬಂದವರು. ಈಗ ಗುರುಕುಲದ ಉಳಿವಿಗಾಗಿ ಹೋರಾಟ ಮಾಡುವಂತಾಗಿದೆ. ಅಷ್ಟಕ್ಕೂ ಏನಿದು ಹೋರಾಟ ಅಂತೀರಾ? ಇಲ್ಲಿದೆ ವಿವರ.

ಹುಬ್ಬಳ್ಳಿ ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲ ಮೈಸೂರು ವಿವಿಗೆ ಹಸ್ತಾಂತರ; ವಿದ್ಯಾರ್ಥಿಗಳ ಸ್ಥಿತಿ ಅತಂತ್ರ
ಹುಬ್ಬಳ್ಳಿ ಗಂಗೂಬಾಯಿ ಹಾನಗಲ್ ಗುರುಕುಲ ಮೈಸೂರಿಗೆ; ವಿದ್ಯಾರ್ಥಿಗಳು ಅತಂತ್ರ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 14, 2024 | 4:04 PM

ಹುಬ್ಬಳ್ಳಿ, ಆ.14: ಭಾರತದ ಸಂಗೀತ ಕ್ಷೇತ್ರದಲ್ಲಿ ಹಿಂದೂಸ್ತಾನಿ ಸಂಗೀತದ ಮೂಲಕ ಬಹುದೊಡ್ಡ ಕೊಡುಗೆ ನೀಡಿದವರು ಗಂಗೂಬಾಯಿ ಹಾನಗಲ್(Gangubai Hangal). ಏಷ್ಯಾ ಖಂಡದಲ್ಲಿಯೇ ಏಕೈಕ ಗುರು ಪರಂಪರೆಯ ಗುರುಕುಲ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ರಾಜನಗರದಲ್ಲಿರುವ ಗಂಗೂಬಾಯಿ ಹಾನಗಲ್ ಗುರುಕುಲದ ವಿದ್ಯಾರ್ಥಿಗಳ ಸ್ಥಿತಿ ಇದೀಗ ಶೋಚನೀಯ ಸ್ಥಿತಿಗೆ ತಲುಪಿದ್ದು, ಸರ್ಕಾರ ಗಂಗೂಬಾಯಿ ಹಾನಗಲ್ ಗುರಕುಲವನ್ನು ಮೈಸೂರಿಗೆ ಹಸ್ತಾಂತರ ಮಾಡಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.

ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಈ ಗುರುಕುಲದಲ್ಲಿ ಸಂಗೀತಾಭ್ಯಾಸ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಹೀಗೆ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಆದರೆ, ಈಗ ಸರ್ಕಾರದ ಒಂದೇ ಒಂದು ನಿರ್ಧಾರದಿಂದ ವಿದ್ಯಾರ್ಥಿಗಳ ಬದುಕು ಬೀದಿಗೆ ಬರುವಂತಾಗಿದೆ. ಗುರುಕುಲವನ್ನು ಹುಬ್ಬಳ್ಳಿಯಲ್ಲೇ ಉಳಿಸಿ, ಗಂಗೂಬಾಯಿ ಹಾನಗಲ್ ಅವರಿಗೆ ಏಕೆ ಅಗೌರವ ತೋರುತ್ತಿದ್ದೀರಿ’ ಎಂದು ಈಚೆಗಷ್ಟೇ ಮುಗಿದ ಅಧಿವೇಶನದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರದ ಚಳಿ ಬಿಡಿಸಿದ್ದರು. ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಕೂಡ ಧ್ವನಿ ಎತ್ತಿದ್ದರು. ಆದರೆ, ಈಗ ವಿದ್ಯಾರ್ಥಿಗಳನ್ನು ಏಕಾಏಕಿ ಹೊರಹಾಕಲು ಮುಂದಾಗಿದ್ದು, ಇಲ್ಲಿನ ಸಮಸ್ಯೆ ಕುರಿತು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ:Hubballi: ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲಕ್ಕೆ ಆರ್ಥಿಕ‌ ಸಂಕಷ್ಟ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ‌

ಮೈಸೂರಿಗೆ ಹಸ್ತಾಂತರ ಮಾಡಲು ಸರ್ಕಾರ ಕೊಟ್ಟ ಕಾರಣವೇನು?

ಸಂಸ್ಥೆಯ ನಿರ್ವಹಣೆಗೆ ವಾರ್ಷಿಕ 2 ಕೋಟಿಗೂ ಅಧಿಕ ವೆಚ್ಚವಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿದೆ. ಅದನ್ನು ತಪ್ಪಿಸಲು ಪ್ರಸ್ತುತವಿರುವ ಸಂಗೀತದ ಎಲ್ಲಾ ಪ್ರಕಾರಗಳು ಮತ್ತು ಪ್ರದರ್ಶಕ ಕಲೆಗಳ ಪ್ರೋತ್ಸಾಹಕ್ಕಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್​ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಅಸ್ತಿತ್ವದಲ್ಲಿರುವುದರಿಂದ ಅದರೊಟ್ಟಿಗೆ ಡಾ. ಗಂಗೂಬಾಯಿ ಹಾನಗಲ್​ ಗುರುಕುಲ ಟ್ರಸ್ಟ್​ನ ಎಲ್ಲಾ ಕಾರ್ಯಚಟುವಟಿಕೆ, ಇತ್ಯಾದಿಗಳನ್ನು ವಿಲೀನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳೊಂದಿಗೆ ಮಾಹಿತಿ ಪಡೆದುಕೊಂಡ ಶಾಸಕ‌ ಮಹೇಶ್ ಟೆಂಗಿನಕಾಯಿ, ಜಿಲ್ಲಾಧಿಕಾರಿ

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಗುರುಕುಲಕ್ಕೆ ಭೇಟಿ ನೀಡಿ, ಅತಂತ್ರವಾಗಿರುವ ವಿದ್ಯಾರ್ಥಿಗಳೊಂದಿಗೆ  ಟೆಂಗಿನಕಾಯಿ, ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು. ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ‘ಗುರಕುಲ ಪದ್ದತಿಯೇ ಉಳಿಯಬೇಕೆಂದು ಮನವಿ ಮಾಡಿ, ಸಂಗೀತವನ್ನು ಕಲಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಗುರಕುಲ ಉಳಿಸಿ ಎಂದು ಪರಿಪರಿಯಾಗಿ ಕೇಳಿಕೊಂಡರು.

ಇದನ್ನೂ ಓದಿ:ಸ್ಮಾರಕವಾದ ಹತ್ತೇ ವರ್ಷದಲ್ಲಿ ಭೂತ ಬಂಗಲೆ ಆದ ಡಾ ಗಂಗೂಬಾಯಿ ಹಾನಗಲ್​ ಮನೆ: ಅಭಿವೃದ್ಧಿಗಾಗಿ ಕಾಯುತ್ತಿರುವ ಜನರು

ಗುರಕುಲ ಉಳಿಸಲು ನಾವು ಪ್ರಯತ್ನ ಮಾಡ್ತೀವಿ-ಟೆಂಗಿನಕಾಯಿ

ಇನ್ನು ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ‌ ಮಹೇಶ್ ಟೆಂಗಿನಕಾಯಿ, ‘ಗುರಕುಲದ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆ ನಡೆಯುತ್ತಿದೆ. ಇದು ದೇಶದ ಪ್ರತಿಷ್ಠಿತ ಗುರಕುಲವಾಗಿದ್ದು, ಉತ್ತಮವಾಗಿ ನಡೆಯಬೇಕು. 36 ವಿದ್ಯಾರ್ಥಿಗಳಿಗೆ ಗುರುಕುಲದಲ್ಲಿ ಅವಕಾಶ ಇದ್ದು, ದೇಶದ ನಾನಾ ಭಾಗದಿಂದ ಬಂದು ಇಲ್ಲಿ ಕಲಿಬೇಕು. ಈಗಾಗಲೇ ಎರಡು ಬ್ಯಾಚ್ ವಿದ್ಯಾರ್ಥಿಗಳು ಇಲ್ಲಿ ಕಲಿತು ಹೋಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು 19 ಜನ‌ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಸರ್ಕಾರ ಇದನ್ನು ಉಳಿಸಿ ಬೆಳಸಬೇಕು ಎಂದರು.

ವಿದ್ಯಾರ್ಥಿಗಳನ್ನು ಹೊರಗೆ ಹಾಕೋಕೆ ಕೊಡಲ್ಲ

‘ನಾನು ಈಗಾಗಲೆ ಸಂಬಂಧಪಟ್ಟ ಸಚಿವರ ಜೊತೆ ಮಾತಾಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ವಿದ್ಯಾರ್ಥಿಗಳನ್ನು ಹೊರಗೆ ಹಾಕೋಕೆ ಕೊಡಲ್ಲ. ವಿದ್ಯಾರ್ಥಿಗಳನ್ನು ಯಾರೂ ಟಚ್ ಮಾಡಬಾರದು, ಅವರಿಗೆ ಊಟದ ವ್ಯವಸ್ಥೆ ಸರಿ ಮಾಡುತ್ತೇವೆ. ಲಾಭ ನಷ್ಟದ ಅವಶ್ಯಕತೆ ಇಲ್ಲ. ಪರಂಪರೆ ಮುಂದುವರೆಯಬೇಕಾಗಿದೆ. ಗುರಕುಲ ಉಳಿಸಲು ನಾವು ಪ್ರಯತ್ನ ಮಾಡ್ತೀವಿ. ನಾನು ಶಿವರಾಜ್ ತಂಗಡಗಿ ಅವರ ಜೊತೆ ಮಾತಾಡಿದ್ದೇನೆ. ಈಗಲೂ ವಿಶ್ವಾಸ ಇದೆ. ಸರಿ ಆಗುತ್ತದೆ. ಅವಶ್ಯಕತೆ ಇದ್ರೆ ಗುರಕುಲವನ್ಮ ಕನ್ನಡ ಸಂಸ್ಕೃತಿ‌ ಇಲಾಖೆಗೆ ಕೊಡಿ, ಮೈಸೂರ ವಿವಿ ಮುಳಗೋ ಹಡಗು, ಯಾಕೆ‌ ಅಲ್ಲಿ ಸೇರಿಸುತ್ತಿದ್ದಾರೆ ಎನ್ನವುದು ಗೊತ್ತಾಗುತ್ತಿಲ್ಲ ಎಂದರು.

ಒಟ್ಟಿನಲ್ಲಿ ದಾರ್ಶನಿಕರ ಹಾಗೂ ಸಾಧಕರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ವಿರುದ್ಧ ನಿಜಕ್ಕೂ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಗುರುಪರಂಪರೆಯ ಗುರುಕುಲದ ಉಳಿವಿನಿ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Wed, 14 August 24