ಆಯುಷ್ಮಾನ್ ಭಾರತ್ ಯೋಜನೆ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ಪರಿಷ್ಕರಣೆಗೆ ಮುಂದಾದ ಸರ್ಕಾರ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ಪ್ಯಾಕೇಜ್ ದರ ಪರಿಷ್ಕರಣೆ ಹಾಗೂ ಖಾಸಗಿ ಆಸ್ಪತ್ರೆಗಳ ಸಂಖ್ಯೆಯನ್ನು 600ಕ್ಕೂ ಹೆಚ್ಚು ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ದರ ಪರಿಷ್ಕರಣೆ ಹಾಗೂ ಖಾಸಗಿ ಆಸ್ಪತ್ರೆಗಳ ಸಂಖ್ಯೆ ವಿಸ್ತರಣೆಯಿಂದ ಬಡ ರೋಗಿಗಳಿಗೆ ಚಿಕಿತ್ಸೆ ಸುಲಭವಾಗುವ ನಿರೀಕ್ಷೆ ಮೂಡಿದೆ.

ಬೆಂಗಳೂರು, ಜುಲೈ 23: ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (Ayushman Bharat-Arogya Karnataka)’ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಹಲವು ವರ್ಷಗಳಿಂದ ಚಿಕಿತ್ಸಾ ಪ್ಯಾಕೇಜ್ ದರ ಪರಿಷ್ಕರಣೆ ಆಗದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು (Private Hospitals) ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಇದರಿಂದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರ ಈಗ ಚಿಕಿತ್ಸಾ ದರ ಪರಿಷ್ಕರಣೆ ಹಾಗೂ ಯೋಜನೆಯ ವಿಸ್ತರಣೆಗೆ ಸಿದ್ಧತೆ ನಡೆಸಿದೆ.
ಇನ್ನಷ್ಟು ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಣೆಯಾಗಲಿದೆ ಯೋಜನೆ
ಆರೋಗ್ಯ ಇಲಾಖೆಯ ಪ್ರಕಾರ, ಯೋಜನೆಯಡಿ ಈಗಾಗಲೇ 1,650 ಬಗೆಯ ಚಿಕಿತ್ಸೆಗಳು ಲಭ್ಯವಿದ್ದು, 171 ತುರ್ತು ಚಿಕಿತ್ಸಾ ಸೇವೆಗಳನ್ನು ಸೇರಿಸಲಾಗಿದೆ. ಇದರ ಜೊತೆಗೆ 200ಕ್ಕೂ ಹೆಚ್ಚು ಚಿಕಿತ್ಸಾ ಪ್ಯಾಕೇಜ್‌ಗಳ ದರವನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಸುಮಾರು 370 ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಸಂಖ್ಯೆಯನ್ನು 600ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳು
ಕಳೆದ ಹಲವು ವರ್ಷಗಳಿಂದ ಪ್ಯಾಕೇಜ್ ದರ ಪರಿಷ್ಕರಣೆ ಆಗದ ಕಾರಣ, ಅನೇಕ ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದವು. ಕೆಲವು ಕಡೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ ಆರೋಪಗಳು ಕೇಳಿಬಂದಿದ್ದರೆ, ಇನ್ನೂ ಕೆಲವು ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದವು ಎಂಬ ದೂರುಗಳೂ ಬಂದಿದ್ದವು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಗೆ ಸಮಸ್ಯೆಗಳೇನು?
ಯೋಜನೆಯಡಿ ಒಂದು ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆ ಸೌಲಭ್ಯವಿದ್ದರೂ, ಒಂದೇ ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸದಸ್ಯರಿಗೆ ಒಂದೇ ಸಮಯದಲ್ಲಿ ದುಬಾರಿ ಚಿಕಿತ್ಸೆ ಅಗತ್ಯವಾದರೆ ಈ ಮಿತಿಯೇ ಸಮಸ್ಯೆಯಾಗುತ್ತಿದೆ. ಅಲ್ಲದೆ, ಕೆಲವು ವಿಶೇಷ ಶಸ್ತ್ರಚಿಕಿತ್ಸೆಗಳು ಇನ್ನೂ ಯೋಜನೆಯ ವ್ಯಾಪ್ತಿಗೆ ಬಂದಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ದೊರಕುವಂತೆ ಮಾಡಲು ಆರೋಗ್ಯ ಇಲಾಖೆ ಚಿಕಿತ್ಸಾ ದರ ಪರಿಷ್ಕರಣೆ ಹಾಗೂ ಯೋಜನೆ ವಿಸ್ತರಣೆಗೆ ಮುಂದಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಕೂಡ ಪ್ರತಿಕ್ರಿಯಿಸಿದ್ದು, ದರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್
ಒಟ್ಟಾರೆಯಾಗಿ, ಬಡ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಕಾಲಾನುಗುಣವಾಗಿ ಬಲಪಡಿಸುವ ಅಗತ್ಯ ಬಹುಕಾಲದಿಂದ ಕೇಳಿಬರುತ್ತಿತ್ತು. ಇದೀಗ ಸರ್ಕಾರ ಚಿಕಿತ್ಸಾ ದರ ಪರಿಷ್ಕರಣೆಗೆ ಮುಂದಾಗಿದೆ. ಇದು ರೋಗಿಗಳಿಗೆ ಎಷ್ಟು ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




