ಬಾಗಲಕೋಟೆ: ಕೋಲ್ಕತ್ತಾದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ(6th International Karate Championship) ಬಾಗಲಕೋಟೆಯ ಇಬ್ಬರು ಸಹೋದರರಿಗೆ ಚಿನ್ನ ಒಲಿದಿದೆ. ಚಾಂಪಿಯನ್ ಶಿಪ್ ನಲ್ಲಿ 9 ದೇಶಗಳ ಸ್ಪರ್ಧಿಗಳು ಭಾಗಿಯಾಗಿದ್ದು ಬಾಗಲಕೋಟೆಯ ಸಾತ್ವಿಕ್ ಶೇಬಣ್ಣವರ, ಪುಟ್ಟರಾಜ್ ಶೇಬಣ್ಣವರ ಚಿನ್ನ ಗೆದ್ದು ಬೀಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮದ ಹೆಚ್.ಎನ್. ಶೇಬಣ್ಣವರ ಅವರ ಪುತ್ರರಾದ ಪುಟ್ಟರಾಜ ಹಾಗೂ ಸಾತ್ವಿಕ್ ಕೋಲ್ಕತ್ತಾದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಜಯಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪಶ್ಚಿಮ ಬಂಗಾಳದ ಆಲ್ ಇಂಡಿಯಾ ಶೇಶಿಂಕೈ ಶಿಟೋ ರಿಯು ಕರಾಟೆ ಡು ಫೆಡರೇಶನ್ ವತಿಯಿಂದ ಜುಲೈ 20 ಹಾಗೂ 21 ರಂದು ಎರಡು ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಿದ್ದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶಿಗಿಕೇರಿಯ ಇಬ್ಬರೂ ಸಹೋದರರು ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಗೆ ಸಹೋದರರಿಬ್ಬರು ಕೀರ್ತಿ ತಂದಿದ್ದು, ಹೆತ್ತವರು, ತರಬೇತುದಾರರು ಚಿನ್ನ ಗೆದ್ದ ಮಕ್ಕಳಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಬರಮಾಡಿಕೊಂಡು ಸಂಭ್ರಮಿಸಿದರು.
ಇನ್ನು ಕೋಲ್ಕತ್ತಾದಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 9 ದೇಶಗಳಿಂದ 4 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ರು. ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ ಕರ್ನಾಟಕದಿಂದ ಒಟ್ಟು 45 ಜನ ಕ್ರೀಡಾಳುಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ರು. ಟೂರ್ನಿಯಲ್ಲಿ ಕರ್ನಾಟಕಕ್ಕೆ 9 ಚಿನ್ನ, 12 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಲಭಿಸಿವೆ. ಬಾಗಲಕೋಟೆಯ ಶಿಗಿಕೇರಿಯ ಸಹೋದರರಾದ ಸಾತ್ವಿಕ್ 15 ವರ್ಷದೊಳಗಿನವರ 25-30 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ಪುಟ್ಟರಾಜ ಸೇಬಣ್ಣವರ 15 ವರ್ಷದೊಳಗಿನವರ 45 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇನ್ನು ಸಹೋದರರ ಸಾಧನೆಗೆ ತರಬೇತುದಾರರು, ಪೋಷಕರು ಪಟ್ಟಿದ್ದಾರೆ.
ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ
Published On - 8:54 pm, Wed, 3 August 22