ಬಾಗಲಕೋಟೆ ಡಿಸಿಸಿ ಬ್ಯಾಂಕ್ ಬಾನಗಡಿ: ಹಣ ಕಳೆದುಕೊಂಡು ಕಂಗಾಲಾಗಿರುವ ಗ್ರಾಹಕರಿಗೆ ಫಾರೆನ್ಸಿಕ್ ಸಂಸ್ಥೆಯಿಂದ ನೊಟೀಸ್ ಭಾಗ್ಯ!
ಒಟ್ಟಿನಲ್ಲಿ ಹಣ ಎಗರಿಸಿದವನು ಹಾಯಾಗಿ ಜಾಮೀನು ಪಡೆದು ಓಡಾಡ್ತಿದ್ರೆ, ಯಾವುದೇ ತಪ್ಪು ಮಾಡದ ಗ್ರಾಹಕರು ಇತ್ತ ತನಿಖೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಎನ್ನುವಂತಾಗಿದೆ.
ಅದು ಬಾಗಲಕೋಟೆಯ (bagalkot) ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ (dcc bank). ಆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಜವಾನ 12 ಕೋಟಿ ರೂಪಾಯಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ. ಪೊಲೀಸರು ಹುಡುಕಾಟದಲ್ಲಿದ್ರೆ, ಆತ ಸೀದಾ ಸುಪ್ರೀಂ ಕೋರ್ಟ್ ಗೆ ಹೋಗಿ ಜಾಮೀನು ತಂದಿದ್ದಾನೆ. ಆದರೆ ಆತ ದೋಖಾ ಮಾಡಿದ ಹಿನ್ನೆಲೆ ಇದೀಗ ಅಮಾಯಕ ಗ್ರಾಹಕರಿಗೆ (customers) ಬೆಂಗಳೂರು ಮೂಲಕ ಫಾರೆನ್ಸಿಕ್ ತನಿಖಾ ಸಂಸ್ಥೆಯಿಂದ (forensic department) ನೊಟೀಸ್ ಬಂದಿವೆ. ಇದರಿಂದ ಕಂಗಾಲಾದ ಗ್ರಾಹಕರು ನಾವು ಮಾಡದ ತಪ್ಪಿಗೆ ನಮಗ್ಯಾಕೆ ನೊಟೀಸ್ ಅಂತಿದ್ದಾರೆ.
ಬ್ಯಾಂಕ್ ಮುಂದೆ ಬಂದು ಪ್ರತಿಭಟನೆ, ಹೋರಾಟ ಮಾಡುತ್ತಿದ್ದ ಗ್ರಾಹಕರಿಗೆ ತಿಳಿವಳಿಕೆ ನೀಡುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಅಂದ ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿರುವ ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ ಮುಂಭಾಗದಲ್ಲಿ. ಹೀಗೆ ಪ್ರತಿಭಟನೆ ಮಾಡಿರುವ ಜನರೆಲ್ಲ ಡಿಸಿಸಿ ಬ್ಯಾಂಕ್ ನ ಅಮೀನಗಡ ಶಾಖೆಯಲ್ಲಿ ಹಣ ಇಟ್ಟವರು.
ಆದರೆ ಡಿಸಿಸಿ ಬ್ಯಾಂಕ್ ನ ಜವಾನ ಪ್ರವೀಣ ಪತ್ರಿ ತಾನು ಕೆಲಸ ಮಾಡಿದ ಡಿಸಿಸಿ ಬ್ಯಾಂಕ್ ಶಾಖೆಗಳಾದ ಅಮೀನಗಢ, ಗುಡೂರು, ಕಮತಗಿಯಲ್ಲಿ ಗ್ರಾಹಕರ ಠೇವಣಿ ಮೇಲಿನ ಬಡ್ಡಿ ಹಣವನ್ನು ವಂಚನೆ ಮಾಡಿದ್ದಾನೆ. ಈ ಬಾಬತ್ತಿನಲ್ಲಿ ಬರೊಬ್ಬರಿ 12 ಕೋಟಿ ರೂಪಾಯಿ ಎತ್ತಿದ್ದಾನೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಇದೀಗ ಅಮೀನಗಢ ಶಾಖೆಯ ನೂರಾರು ಗ್ರಾಹಕರಿಗೆ ಫಾರೆನ್ಸಿಕ್ ಇಲಾಖೆಯಿಂದ ನೊಟೀಸ್ ಬಂದಿದೆ.
ಇದರಿಂದ ಕಂಗಾಲಾದ ಗ್ರಾಹಕರು ಅಮೀನಗಢ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ಮಾಡಿದ್ದಾರೆ. ನಾವು ಯಾವುದೇ ಮೋಸ ಮಾಡಿಲ್ಲ ತಪ್ಪು ಮಾಡಿಲ್ಲ. ಅಂಥದ್ದರಲ್ಲಿ ನಮಗೇಕೆ ನೊಟೀಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಡಿಸಿಸಿ ಬ್ಯಾಂಕ್ ಎಂಡಿ ಸೇರಿದಂತೆ ಅಧಿಕಾರಿಗಳು ಗ್ರಾಹಕ ರೈತರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ವಲ್ಪ ವಾಗ್ವಾದ ಕೂಡ ನಡೆದಿದೆ.
ಇದನ್ನು ಓದಿ: ಡಿಸಿಸಿ ಬ್ಯಾಂಕ್ಗೆ 12 ಕೋಟಿ ರೂ. ಪಂಗನಾಮ -ಈಗ ಸುಪ್ರೀಂನಿಂದ ಜಾಮೀನು ತಂದು ಅಚ್ಚರಿ ಮೂಡಿಸಿದ ಜವಾನ
ಕೊನೆಗೆ ಅಧಿಕಾರಿಗಳು ಗ್ರಾಹಕರಿಗೆ ಯಾವುದೇ ತೊಂದರೆಯಾಗೋದಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ ಹಿನ್ನೆಲೆ ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಈ ಮಧ್ಯೆ, ಒಂದು ವಾರದೊಳಗೆ ಈ ಸಮಸ್ಯೆ ಸರಿಪಡಿಸಬೇಕು ಎಂದು ಗ್ರಾಹಕ ರೈತರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಡಿಸಿಸಿ ಬ್ಯಾಂಕಿನಲ್ಲಿ ಜವಾನ ಆಗಿದ್ದ ಪ್ರವೀಣ್ ಪತ್ರಿ ಎಂಬಾತ 12 ಕೋಟಿ ಎಗರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಗ್ರಾಹಕರಿಗೆ ನೊಟೀಸ್ ನೀಡಲಾಗಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಕೈಗೊಂಡಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಇತ್ತೀಚೆಗಷ್ಟೇ ಆರೋಪಿ ಪ್ರವೀಣ್ ಪತ್ರಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದಿದ್ದಾನೆ.
ಇನ್ನು ಪ್ರತಿಭಟನಾಕಾರರು ಮನವೊಲಿಸಿರುವ ಡಿಸಿಸಿ ಬ್ಯಾಂಕ್ ಸಿಬ್ಬಂದಿ ನೋಟಿಸ್ ಕುರಿತು ತಿಳಿವಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರನಾಯಕ, ಪ್ರವೀಣ ಪತ್ರಿ ಲಪಟಾಯಿಸಿರುವ ಹಣ ಕೆಲವು ಖಾತೆಗಳಿಗೆ ಜಮೆ ಆಗಿದೆ. ಆದರೆ ಕದ್ದಿರುವ ಹಣ ಯಾವ ಖಾತೆಗೆ ಜಮೆ ಆಗಿದೆ ಎಂಬುದು ಗೊತ್ತಿಲ್ಲ.
ಹೀಗಾಗಿ ಹಣ ಕದ್ದಿರುವ ದಿನಾಂಕದಂದು ಯಾವ ಖಾತೆಗಳಿಗೆ ಹಣ ಜಮೆಯಾಗಿದೆಯೋ ಅಂತಹ ಖಾತೆಗಳಿಗೆ ನೊಟೀಸ್ ನೀಡಲಾಗಿದೆ. ಇದು ಕೇವಲ ತನಿಖೆಯ ಸಲುವಾಗಿಯೇ ಹೊರತು, ಇದುವೇ ಅಂತಿಮವಲ್ಲ. ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಹಣ ಎಗರಿಸಿದವನು ಹಾಯಾಗಿ ಜಾಮೀನು ಪಡೆದು ಓಡಾಡ್ತಿದ್ರೆ, ಯಾವುದೇ ತಪ್ಪು ಮಾಡದ ಗ್ರಾಹಕರು ಇತ್ತ ತನಿಖೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಎನ್ನುವಂತಾಗಿದೆ. (ವರದಿ: ರವಿ ಮೂಕಿ, ಟಿವಿ 9, ಬಾಗಲಕೋಟೆ)
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ