AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ: ಹಾಸ್ಟೆಲ್​ನಲ್ಲಿ ಅತ್ಯಾಚಾರ ಪ್ರಕರಣ, ಮುಧೋಳ ಲೋಕಾಪುರ ಯುವಕ ಪರಮಾನಂದ ಜೈನ್ ಬಂಧನ

ಕೋಲ್ಕತ್ತಾದ ಐಐಎಂ ಕಾಲೇಜಿನ ಬಾಯ್ಸ್ ಹಾಸ್ಟೆಲ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ಪರಮಾನಂದ ಜೈನ್ ಎಂಬಾತನನ್ನು ಬಂಧಿಸಲಾಗಿದೆ. ಜುಲೈ 12 ರಂದೇ ಬಂಧನವಾಗಿದ್ದು, ಮಾದಕ ದ್ರವ್ಯ ಮಿಶ್ರಿತ ಪಾನೀಯ ನೀಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಆತನ ಮೇಲಿದೆ. ಸದ್ಯ ಆತನ ಪೋಷಕರು ಕೋಲ್ಕತ್ತಾಕ್ಕೆ ತೆರಳಿದ್ದಾರೆ.

ಕೋಲ್ಕತ್ತಾ: ಹಾಸ್ಟೆಲ್​ನಲ್ಲಿ ಅತ್ಯಾಚಾರ ಪ್ರಕರಣ, ಮುಧೋಳ ಲೋಕಾಪುರ ಯುವಕ ಪರಮಾನಂದ ಜೈನ್ ಬಂಧನ
ಮುಧೋಳ ತಾಲೂಕಿನ ಲೋಕಾಪುರದಲ್ಲಿರುವ ನಿವಾಸ ಮತ್ತು ಒಳ ಚಿತ್ರದಲ್ಲಿ ಆರೋಪಿ ಪರಮಾನಂದ
ರವಿ ಹೆಚ್ ಮೂಕಿ, ಕಲಘಟಗಿ
| Updated By: Ganapathi Sharma|

Updated on: Jul 17, 2025 | 2:18 PM

Share

ಬಾಗಲಕೋಟೆ, ಜುಲೈ 17: ಕೋಲ್ಕತ್ತಾ ಕಾಲೇಜು ಹಾಸ್ಟೆಲ್​​ನಲ್ಲಿ ಯುವತಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಎ1 ಆರೋಪಿಯಾಗಿರುವ ಬಾಗಲಕೋಟೆ (Bagalkot) ಮೂಲದ ಯುವಕ ಪರಮಾನಂದ ಜೈನ್ (Paramananda Jain) ಬಂಧನವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿರುವ ಪರಮಾನಂದ ಜೈನ್​ನನ್ನು ಜುಲೈ 12 ರಂದೇ ಪೊಲೀಸರು ಬಂಧಿಸಿ ಕರೆದೊಯ್ದಿರುವುದು ಗೊತ್ತಾಗಿದೆ. ಕೋಲ್ಕತ್ತಾದ ಐಐಎಂ ಕಾನೂನು ಕಾಲೇಜಿನಲ್ಲಿ ಓದುತ್ತಿರುವ ಪರಮಾನಂದ, ಅದೇ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ವಿದ್ಯಾರ್ಥಿನಿಯನ್ನು ಹಾಸ್ಟೆಲ್​​ಗೆ ಕರೆಸಿಕೊಂಡು ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರವೆಸಗಿರುವ ಆರೋಪವಿದೆ.

ಇದೀಗ ಪರಮಾನಂದ ಜೈನ್ ತಂದೆ, ತಾಯಿ ಕೋಲ್ಕತ್ತಾಗೆ ತೆರಳಿದ್ದಾರೆ.

ಏನಿದು ಪ್ರಕರಣ?

ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕ್ಯಾಂಪಸ್‌ನ ಹುಡುಗರ ಹಾಸ್ಟೆಲ್​​​ನಲ್ಲಿ ವಿದ್ಯಾರ್ಥಿಯೊಬ್ಬ ಮಾದಕ ದ್ರವ್ಯ ಬೆರೆಸಿದ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಇತ್ತೀಚೆಗೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಳು. ಕೌನ್ಸೆಲಿಂಗ್ ನೆಪದಲ್ಲಿ ಹುಡುಗರ ಹಾಸ್ಟೆಲ್‌ಗೆ ಕರೆಸಿ ಕೃತ್ಯ ಎಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು.

ಇದನ್ನೂ ಓದಿ
Image
ಸುರಂಗ ಮಾರ್ಗ: ಡಿಕೆಶಿ ಜತೆ ಬಹಿರಂಗ ಚರ್ಚೆಗೆ ತೇಜಸ್ವಿ ಸೂರ್ಯ ಸವಾಲು
Image
ಸ್ಮಾರ್ಟ್ ಮೀಟರ್ ಅಕ್ರಮ: ಜಾರ್ಜ್​ಗೆ ಸಂಕಷ್ಟ, ಕೋರ್ಟ್​ಗೆ ಬಿಜೆಪಿ ದೂರು
Image
ಬೇಕರಿ, ಕಾಂಡಿಮೆಂಡ್ಸ್ ಬಂದ್ ಅಷ್ಟೇ ಅಲ್ಲ: ಈ ಮೂರು ದಿನ ಹಾಲು ಕೂಡ ಸಿಗಲ್ಲ!
Image
ಕೊಲ್ಕತ್ತಾ ಐಐಎಂ ಬಾಲಕರ ಹಾಸ್ಟೆಲ್‌ನಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ

ವಿದ್ಯಾರ್ಥಿಯೊಬ್ಬರು ಅಪರಾಧ ಕೃತ್ಯವೊಂದರಲ್ಲಿ ಶಾಮೀಲಾಗಿರುವ ಗಂಭೀರ ದೂರಿನ ಬಗ್ಗೆ ತಿಳಿದಿದೆ. ಆದರೆ, ದೂರುದಾರರು ಸಂಸ್ಥೆಯವರಲ್ಲ ಎಂದು ಐಐಎಂ ಆಡಳಿತ ನಂತರ ಸ್ಪಷ್ಟಪಡಿಸಿತ್ತು. ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಮತ್ತು ಪ್ರಸ್ತುತ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಆಡಳಿತ ಮಂಡಳಿ ತಿಳಿಸಿತ್ತು.

ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದೇನು?

ಕೌನ್ಸೆಲಿಂಗ್ ಅವಧಿಗೆಂದು ಹಾಸ್ಟೆಲ್‌ಗೆ ಕರೆಸಲಾಗಿತ್ತು. ನಂತರ ಹಾಸ್ಟೆಲ್‌ನಲ್ಲಿ ಮಾದಕ ದ್ರವ್ಯ ಬೆರೆಸಿದ ಪಾನೀಯ ನೀಡಿದ್ದರು. ಅದನ್ನು ಸೇವಿಸಿದ ನಂತರ ಪ್ರಜ್ಞೆ ತಪ್ಪಿತ್ತು. ಪ್ರಜ್ಞೆ ಮರಳಿದ ನಂತರ ಅತ್ಯಾಚಾರ ನಡೆದಿರುವುದು ಅರಿವಾಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾಳೆ. ಅಲ್ಲದೆ, ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಕೊಲ್ಕತ್ತಾದ ಐಐಎಂ ಬಾಲಕರ ಹಾಸ್ಟೆಲ್‌ನಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ

ನಂತರ ಪರಮಾನಂದ ಜೈನ್​​ನನ್ನು ವಶಕ್ಕೆ ಪಡೆದಿದ್ದ ಕೋಲ್ಕತ್ತಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋಲ್ಕತ್ತಾ ನ್ಯಾಯಾಲಯವು ಆರೋಪಿಯ ಜಾಮೀನು ತಿರಸ್ಕರಿಸಿ, ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಜುಲೈ 19 ರಂದು ಕಸ್ಟಡಿ ಅವಧಿ ಮುಗಿಯಲಿದ್ದು, ವಿದ್ಯಾರ್ಥಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ