ಬಳ್ಳಾರಿ, ಡಿಸೆಂಬರ್ 30: ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ಬಸ್ ಚಾಲಕ, ನಿರ್ವಾಕರ ಮೇಲೆ ಹಲ್ಲೆ ಮಾಡಿರುವ ಘಟನೆ ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದ ಎರಡನೇ ಘಟದಲ್ಲಿ ನಡೆದಿದೆ. ಹಲ್ಲೆಗೊಳಗಾದ ನಿರ್ವಾಹಕ ಮಲ್ಲಿಕಾರ್ಜುನ ಮತ್ತು ಚಾಲಕ ಪಂಪಣ್ಣ ಅವರನ್ನು ಬಳ್ಳಾರಿ (Ballari) ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ (ಡಿ.29) ರ ಸಾಯಂಕಾಲ ಕೆಎ 35 ಎಫ್ 350 ನಂಬರಿನ ಕೆಎಸ್ಆರ್ಟಿಸಿ ಬಸ್ ಸಂಡೂರಿನಿಂದ ಬಳ್ಳಾರಿಗೆ ಬರುತ್ತಿತ್ತು.
ಸಂಡೂರು ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಬಳ್ಳಾರಿಗೆ ಹೋಗಲು ಬಸ್ ಹತ್ತಿದರು. ಬಳಿಕ ನಮ್ಮ ಕಡೆಯವರು ಬರುತ್ತಿದ್ದಾರೆ ಇನ್ನೂ ಕೆಲ ಹೊತ್ತು ನಿಲ್ಲಿಸಿ, ಬಸ್ ಬಿಡಬೇಡಿ ಎಂದು ಮಹಿಳೆಯರು ಚಾಲಕ ಮತ್ತು ನಿರ್ವಾಹಕರಿಗೆ ಹೇಳಿದರು. ಹೀಗಾಗಿ ಚಾಲಕ ಪಂಪಣ್ಣ ಹೆಚ್ಚಿಗೆ ಐದು ನಿಮಿಷಗಳ ಕಾಲ ಅವರಿಗೋಸ್ಕರ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದರು. ನಂತರ ಪ್ರಯಾಣಿಕರ ಒತ್ತಾಯದ ಮೇರೆಗೆ ಚಾಲಕ ಪಂಪಣ್ಣ ಬಸ್ ಬಿಟ್ಟರು.
ಇದರಿಂದ ಆಕ್ರೋಶಗೊಂಡ ಮಹಿಳೆಯರು “ಕೆಲ ಕಾಲ ಬಸ್ ನಿಲ್ಲಿಸಿ ಅಂದರೂ ನಿಲ್ಲಿಸಿಲ್ಲ, ನಿಮ್ಮ ಅಪ್ಪನದಾ ಬಸ್? ಎಂದು ಚಾಲಕ, ನಿರ್ವಾಹಕರಿಗೆ ಅವಾಚ್ಯ ಪದಳಿಂದ ನಿಂದಿಸಿದರು. ನಂತರ ಮಹಿಳೆಯರು ಮತ್ತು ಚಾಲಕನ ನಡುವೆ ವಾಗ್ವಾದ ಶುರುವಾಯಿತು. ಆಗ ಮಹಿಳೆಯರು ಬಳ್ಳಾರಿಯಲ್ಲಿ ನಮ್ಮ ಕಡೆ ಜನ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಅವಾಜ್ ಹಾಕಿದರು.
ಇದನ್ನೂ ಓದಿ: ಒಂದು ಆಧಾರ್ ಕಾರ್ಡ್ನ ಎರಡು ಪ್ರತಿಗಳನ್ನು ತೋರಿಸಿ KSRTCಯಲ್ಲಿ ಪ್ರಯಾಣ, ಸಿಕ್ಕಿಬಿದ್ದ ಇಬ್ಬರು ಮಹಿಳೆಯರು
ನಂತರ ಮಹಿಳೆಯರು ಈ ವಿಚಾರವನ್ನು ಅವರ ಕಡೆಯವರಿಗೆ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸುಮಾರು 30 ರಿಂದ 40 ಜನರ ಗುಂಪು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿದೆ. ಬಳ್ಳಾರಿ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ, ಏಕಾಏಕಿ ಬಸ್ ಒಳಗೆ ನುಗ್ಗಿದ ಗುಂಪು ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿದೆ. ಅಲ್ಲದೇ ನಾವು ಬಳ್ಳಾರಿಯ ಮುಂಚೇರಿ ಗ್ರಾಮದವರು ನಮ್ಮನ್ನ ಕೆಣಕಿದರೇ ಹಿಂಗೆ ಆಗೋದು ಎಂದು ಅವಾಜ್ ಹಾಕಿದ್ದಾರೆ.
ಇದರಿಂದ ಚಾಲಕ ಮತ್ತು ನಿರ್ವಾಹಕರ ತಲೆ, ಮುಖ, ಬೆನ್ನು ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಸದ್ಯ ನಿರ್ವಾಹಕ ಮಲ್ಲಿಕಾರ್ಜುನ ಮತ್ತು ಚಾಲಕ ಪಂಪಣ್ಣ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ