AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರದ ಜೈಲಿನ ಗೋಡೆ ಮೇಲೆ ಅವರ ಹೆಸರು ಬರೆದು ಬಂದಿದ್ದೇನೆ: ಬಿಜೆಪಿಗರಿಗೆ ನಾಗೇಂದ್ರ ಎಚ್ಚರಿಕೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ವಾಲ್ಮೀಕಿ ಜಯಂತಿಯಂದೇ ಬಳ್ಳಾರಿಗೆ ಕಾಲಿಟ್ಟಿದ್ದಾರೆ. ಈ ವೇಳೆ ‘‘ಅವರೆಲ್ಲ’’ ಜೈಲು ಪಾಲಾಗ್ತಾರೆ ಎಂದು ಬಿಜೆಪಿ ನಾಯಕರ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪರಪ್ಪನ ಅಗ್ರಹಾರದ ಜೈಲಿನ ಗೋಡೆ ಮೇಲೆ ಅವರ ಹೆಸರು ಬರೆದು ಬಂದಿದ್ದೇನೆ: ಬಿಜೆಪಿಗರಿಗೆ ನಾಗೇಂದ್ರ ಎಚ್ಚರಿಕೆ
ನಾಗೇಂದ್ರ
ವಿನಾಯಕ ಬಡಿಗೇರ್​
| Edited By: |

Updated on:Oct 18, 2024 | 9:30 AM

Share

ಬಳ್ಳಾರಿ, (ಅಕ್ಟೋಬರ್ 17): ವಾಲ್ಮೀಕಿ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಂದು (ಅಕ್ಟೋಬರ್ 17) ವಾಲ್ಮೀಕಿ ಜಯಂತಿ ದಿನವೇ ಬಳ್ಳಾರಿ ಜಿಲ್ಲೆಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಮಾತನಾಡಿದ ನಾಗೇಂದ್ರ, ನಾನು ಯಾವುದೇ ತಪ್ಪು ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪ. ಸಣ್ಣದೋಷ ಇಲ್ಲದೇ ಹೊರ ಬರುತ್ತೇನೆ ಎಂದು ಕಣ್ಣೀರು ಹಾಕಿದರು. ಅಲ್ಲದೇ ಪರಪ್ಪನ ಅಗ್ರಹಾರದ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ. ಅವರೆಲ್ಲಾ ಜೈಲು ಪಾಲಾಗ್ತಾರೆ ನೋಡುತ್ತಿರಿ ಎಂದು ಭವಿಷ್ಯ ನುಡಿದಿದ್ದಾರೆ.

‘ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿರುವೆ ಎಂದು ಕೆಲವರು ನಂಬಿದ್ದಾರೆ. ಇದು ಸುಳ್ಳು ಎಂದು ನಾನು ಯಾರನ್ನೂ ನಂಬಿಸಬೇಕಿಲ್ಲ. ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ‌. ನಾನು ಹಲವು ಬಾರಿ ಜೈಲು‌ ನೋಡಿದ್ದೇನೆ. ನಿಮ್ಮ ನಾಯಕನಾದ ನಾನು, ಇಂತಹದ್ದಕ್ಕೆಲ್ಲ ಯಾವುದಕ್ಕೂ ಹೆದರಲ್ಲ. ಆದರೆ, ಒಂದು ಸುಳ್ಳು ಮುಂದಿಟ್ಟುಕೊಂಡು ಬಂದು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ’ ಎಂದು ಬಿಜೆಪಿ ನಾಯಕರ ವಿರುದ್ಧ ನಾಗೇಂದ್ರ ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ನೀವು ನೋಡುತ್ತಿರಿ, ಹಗರಣ ಎಂದು ಬಿಜೆಪಿಯ ಯಾರೆಲ್ಲ ಮಾತನಾಡುತ್ತಿದ್ದಾರೆಯೋ ಅವರನ್ನೇ ಅದು ಸುತ್ತಿಕೊಳ್ಳುತ್ತದೆ. ಅವರೆಲ್ಲರ ಹೆಸರನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲು ಆಗುತ್ತಾರೆ ನೋಡುತ್ತಾ ಇರಿ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಆಗ ಸಚಿವರೂ ಆಗಿದ್ದ ಬಿ.ನಾಗೇಂದ್ರ ಅವರ ಪಾತ್ರವಿದೆ ಎಂದು ಹೇಳಲಾಗಿತ್ತು. ಹೀಗಾಗಿ ಅವರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಈ ಆರೋಪದ ಮೇರೆಗೆ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. ಬಳಿಕ ಇಡಿ ಅಧಿಕಾರಿಗಳು ನಾಗೇಂದ್ರ ವಿರುದ್ಧ ಚಾರ್ಜ್‌ಶೀಟ್‌ ಕೂಡ ಸಿದ್ಧಪಡಿಸಿದ್ದರು. ಇದರಲ್ಲಿ ನಾಗೇಂದ್ರ ಅವರೇ ಆರೋಪಿ ಎಂಬುದಕ್ಕೆ ಹಲವು ಸಾಕ್ಷಿಗಳನ್ನು ಸಹ ಒದಗಿಸಿದ್ದರು. ಇದರ ನಡುವೆಯೇ ಬಿ.ನಾಗೇಂದ್ರ ಅವರಿಗೆ ಕೋರ್ಟ್‌ನಲ್ಲಿ ರಿಲೀಫ್‌ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಬಿ.ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:17 pm, Thu, 17 October 24