ಬಳ್ಳಾರಿ: ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದಿದ್ದ ವೈದ್ಯಾಧಿಕಾರಿ ಅಮಾನತು
ಸಿರಗುಪ್ಪ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಈರಣ್ಣ ಅವರು ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದು ಅಸಭ್ಯವಾಗಿ ವರ್ತಿಸಿದ್ದಕ್ಕೆ ಅಮಾನತುಗೊಂಡಿದ್ದಾರೆ. ಟಿವಿ9 ವರದಿಯ ನಂತರ ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನಿಖೆ ನಡೆಸಿ, ಕರ್ತವ್ಯ ಲೋಪ ಮತ್ತು ದುರ್ನಡತೆಯ ಆಧಾರದ ಮೇಲೆ ಅವರನ್ನು ಅಮಾನತು ಮಾಡಿದೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬಳ್ಳಾರಿ, ಡಿಸೆಂಬರ್ 13: ಮದ್ಯಪಾನ (Alcohol) ಮಾಡಿ ಆಸ್ಪತ್ರೆಗೆ (Hospital) ಬರುತ್ತಿದ್ದ ಸಿರಗುಪ್ಪ (Siraguppa) ತಾಲೂಕು ವೈದ್ಯಾಧಿಕಾರಿ ಈರಣ್ಣ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ವೈದ್ಯ ಈರಣ್ಣ ಅವರು ಆಸ್ಪತ್ರೆಗೆ ಕುಡಿದು ಬಂದು ಸಿಬ್ಬಂದಿ ಮತ್ತು ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು.
ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯ ಈರಣ್ಣ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಸೂಚನೆ ಮೇರೆಗೆ ತನಿಖೆ ನಡೆಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಇಲಾಖೆಗೆ ವರದಿ ಸಲ್ಲಿಸಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ಫ್ಲೂಯಿಡ್ ಕಂಪನಿ ವಿರುದ್ಧ 4 ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು
ವರದಿಯಲ್ಲಿ ವೈದ್ಯ ಈರಣ್ಣ ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ವೈದ್ಯ ಈರಣ್ಣ ಕರ್ತವ್ಯ ಲೋಪ ಹಾಗೂ ದುರ್ನಡತೆಯ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.
ಬಾಣಂತಿಯರ ಸಾವು
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಬಾಣಂತಿಯರ ಸಾವಿಗೆ IV ದ್ರಾವಣ ಕಾರಣ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಬಳ್ಳಾರಿಯಲ್ಲಿ ಬಾಣಂತಿಯರು ಮೃತಪಟ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಬಾಣಂತಿಯರ ಸಾವಿಗೆ ಸರ್ಕಾರ ಕಾರಣ ಎಂದು ಆರೋಪ ಮಾಡಿವೆ. ಇನ್ನು, ಸರ್ಕಾರ ಮೃತ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಬಾಣಂತಿಯರ ಸಾವಿನ ವಿಚಾರ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 am, Fri, 13 December 24