ಬಳ್ಳಾರಿ, ಆಗಸ್ಟ್ 28: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಇದೇ ಕಾರಣಕ್ಕೆ ದರ್ಶನ್ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ, ಬಳ್ಳಾರಿ ಜೈಲಿನ ಬಗ್ಗೆ ಅದೇ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಹಣ ನೀಡಿದ್ರೆ ಬಳ್ಳಾರಿ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ ಎಂದು ಬಳ್ಳಾರಿ ಜೈಲಿನಲ್ಲಿದ್ದ ಆನಂದಿ ಕೊಟ್ಟಂ ಜಯಸಿಂಹ ಹೇಳಿದ್ದಾರೆ. ‘ಟಿವಿ9’ ಜತೆ ಮಾತನಾಡಿರುವ ಅವರು, ಸಿಬ್ಬಂದಿಗೆ ದುಡ್ಡು ಕೊಟ್ಟರೆ ಬಳ್ಳಾರಿ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ. ಮೊಬೈಲ್, ಗಾಂಜಾ, ಸಿಗರೇಟ್ ಎಲ್ಲವೂ ಜೈಲಿನಲ್ಲಿ ಸಿಗುತ್ತದೆ. ಜೈಲಿನಲ್ಲಿ ಕೈದಿಗಳನ್ನು ನೋಡಬೇಕಾದರೂ ಲಂಚ ಕೊಡಬೇಕು ಎಂದು ಹೇಳಿದ್ದಾರೆ.
ಬಳ್ಳಾರಿ ಜೈಲಿನ ವಿಐಪಿ ಸೆಲ್‌ನಲ್ಲಿ ಟಿವಿ ವ್ಯವಸ್ಥೆ, ಮಲಗಲು ಬೆಡ್ ವ್ಯವಸ್ಥೆ, ಫ್ಯಾನ್, ಮೊಬೈಲ್ ಎಲ್ಲವೂ ಇದೆ. ದರ್ಶನ್ರನ್ನು ಬಳ್ಳಾರಿಗೆ ಕರೆತಂದರೆ ಮತ್ತೆ ಕೆಟ್ಟು ಹೋಗುತ್ತಾರೆ. ಪರಪ್ಪನ ಅಗ್ರಹಾರ ಜೈಲಿಗಿಂತ ಬಳ್ಳಾರಿ ಜೈಲಲ್ಲಿ ಏನೂ ಕಡಿಮೆ ಇಲ್ಲ ಎಂದು ಕೊಟ್ಟಂ ಜಯಸಿಂಹ ಹೇಳಿದ್ದಾರೆ.
ಕೊಲೆ ಆರೋಪದ ಕೇಸ್ನಲ್ಲಿ ಜೈಲು ಸೇರಿದ್ದ ಜಯಸಿಂಹ ಆರು ವರ್ಷ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದರು. 2006 ರಿಂದ 2021 ರ ವರಗೆ ಜೈಲಿನಲ್ಲಿದ್ದರು.
ದರ್ಶನ್ಗೆ ಹೆಚ್ಚು ಅನುಕೂಲ ಮಾಡಿಕೊಡುವುದಕ್ಕಾಗಿಯೇ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬುದಾಗಿಯೂ ಕೆಲವು ಮೂಲಗಳು ಹೇಳಿದ್ದವು. ಇದೀಗ ಆನಂದಿ ಕೊಟ್ಟಂ ಜಯಸಿಂಹ ನೀಡಿರುವ ಮಾಹಿತಿ ಆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ದರ್ಶನ್ ಶಿಫ್ಟ್ ಆಗುವ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸ
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶತಮಾನದ ಇತಿಹಾಸವಿದೆ. ಸುಮಾರು 140 ವರ್ಷಗಳ ಇತಿಹಾಸವಿರುವ ಈ ಕೇಂದ್ರ ಕಾರಾಗೃಹದಲ್ಲಿ ಅನೇಕ ನಟೋರಿಯಸ್ ರೌಡಿಗಳನ್ನು ಕೂಡ ಇರಿಸಲಾಗಿತ್ತು. ಭೀಮಾತೀರದ ಹನುಮಂತ ನಾಯ್ಕ್, ಬೆಂಗಳೂರಿನ ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿನ 80 ಆರೋಪಿಗಳು, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳನ್ನೆಲ್ಲ ಇದೇ ಜೈಲಿನಲ್ಲಿ ಇರಿಸಲಾಗಿತ್ತು.
ಸದ್ಯ 500 ಕೈದಿಗಳ ಸಾಮರ್ಥ್ಯದ ಕಾರಾಗೃಹದಲ್ಲಿ 368 ಕೈದಿಗಳಿದ್ದಾರೆ. 80 ಸಿಸಿ ಕ್ಯಾಮರಾ, ಇದ್ದು 9 ಡಾನ್ ಮೆಟರಿಯಲ್ ಹಾಲ್ ಮತ್ತು 16 ಸ್ಪೆಷಲ್ ಬ್ಯಾರಿಕೇಡ್ ಇವೆ.
Published On - 12:25 pm, Wed, 28 August 24