AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಧಿಕಾರಿ ಕಿಚ್ಚು ಜೋರು ಬೆನ್ನಲ್ಲೇ ಎಂಎಲ್‌ಸಿ ಯತೀಂದ್ರ ಸ್ಪಷ್ಟನೆ: ಸಿಎಂ ಪುತ್ರ ಹೇಳಿದ್ದಿಷ್ಟು

ನವೆಂಬರ್​ನಲ್ಲಿ ಕ್ರಾಂತಿ ಚರ್ಚೆ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್​​ಸಿ ಯತೀಂದ್ರ ಮಾತು ಕಾಂಗ್ರೆಸ್​​​ನಲ್ಲಿ ಕಿಚ್ಚು ಹಚ್ಚಿಸಿದೆ. ಸದ್ಯ ಈ ಕುರಿತಾಗಿ ಎಂಎಲ್​​ಸಿ ಡಾ. ಯತೀಂದ್ರ ಸ್ಪಷ್ಟನೆ ಕೂಡ ನೀಡಿದ್ದಾರೆ. ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಉತ್ತರಾಧಿಕಾರಿ ಕಿಚ್ಚು ಜೋರು ಬೆನ್ನಲ್ಲೇ ಎಂಎಲ್‌ಸಿ ಯತೀಂದ್ರ ಸ್ಪಷ್ಟನೆ: ಸಿಎಂ ಪುತ್ರ ಹೇಳಿದ್ದಿಷ್ಟು
ಎಂಎಲ್‌ಸಿ ಯತೀಂದ್ರ
Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 22, 2025 | 6:42 PM

Share

ಬೆಳಗಾವಿ, ಅಕ್ಟೋಬರ್​ 22: ತಂದೆಯವರು (ಸಿಎಂ ಸಿದ್ದರಾಮಯ್ಯ) ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ಧಾಂತದಲ್ಲಿ ಸಚಿವ ಸತೀಶ್ ಜಾರಕಿಹೊಳಿ‌ (satish jarkiholi) ಕೂಡ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರನ್ನ ಲೀಡ್ ಮಾಡಲಿ ಅನ್ನೋ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ. ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದು ಎಂಎಲ್‌ಸಿ ಡಾ. ಯತೀಂದ್ರ (Yathindra) ಸ್ಪಷ್ಟನೆ ನೀಡಿದ್ದಾರೆ.

2028ರ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲ್ಲ: ಡಾ. ಯತೀಂದ್ರ

ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ‌ ಎಂಬ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಯತೀಂದ್ರ, 2028ರ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲ್ಲ ಅಂದಿದ್ದಾರೆ. ಅದು ಆದ ಮೇಲೆ ಜಾತ್ಯತೀತ ಸಿದ್ಧಾಂತ ಇಟ್ಟುಕೊಂಡ ಸಾಕಷ್ಟು ನಾಯಕರಿದ್ದಾರೆ. ಇವರೆಲ್ಲರನ್ನೂ ಸತೀಶ್ ಜಾರಕಿಹೊಳಿ‌ ಮುನ್ನಡೆಸಲಿ ಎಂದರು.

2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದ್ಧಾಂತಿಕ ರಾಜಕಾರಣ ಮಾಡುವವರ ಪೈಕಿ ಸಚಿವ ಸತೀಶ್ ಸಹ ಒಬ್ಬರು. ಆ ರೀತಿ ಸಿದ್ಧಾಂತ ಇಟ್ಟುಕೊಂಡವರಿಗೆ ಸತೀಶ್ ಮಾರ್ಗದರ್ಶನ ಮಾಡಲಿ. ನಾಳೆಯೇ ಕೊನೆ ದಿನ ಅಲ್ಲ, 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿರುವೆ ಎಂದಿದ್ದಾರೆ.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಸಂಕಲ್ಪ ಬೆನ್ನಲ್ಲೇ ಉತ್ತರಾಧಿಕಾರಿ ದಾಳ ಉರುಳಿಸಿದ ಸಿಎಂ ಪುತ್ರ ಯತೀಂದ್ರ

ನವೆಂಬರ್ ಕ್ರಾಂತಿ ಕೇವಲ ಊಹಾಪೋಹ. ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ, ಪಕ್ಷದಲ್ಲಿ ಆ ರೀತಿ ಚರ್ಚೆ ನಡೆದಿಲ್ಲ. ಆ ರೀತಿ ಸಿಎಂ ಆಗುವ ಅರ್ಹತೆ ಇದ್ದವರು ಹಲವು ನಾಯಕರು ಇದ್ದಾರೆ. ಈ ಬಗ್ಗೆ ಎಲ್ಲಾ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸದ್ಯಕ್ಕೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್‌ಗೆ ಖಂಡಿತಾ ಇದೆ. ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾದ ಬಳಿಕ ಆ ಸ್ಥಾನ ತುಂಬುವ ಶಕ್ತಿ ಕೆಲವೇ ನಾಯಕರಲ್ಲಿ ಸತೀಶ್ ಜಾರಕಿಹೊಳಿ‌ಗೆ ಇದೆ ಎಂದು ಎಂಎಲ್‌ಸಿ ಡಾ. ಯತೀಂದ್ರ ಹೇಳಿದ್ದಾರೆ.

ಎಂಎಲ್‌ಸಿ ಡಾ. ಯತೀಂದ್ರ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಎಂಎಲ್‌ಸಿ ಡಾ. ಯತೀಂದ್ರ, ನಮ್ಮ ತಂದೆಯವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ, ಸಿದ್ಧಾಂತ ಇರುವ ನಾಯಕ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಿಕೊಳ್ಳುವ ನಾಯಕ ಬೇಕು. ಸಚಿವ ಸತೀಶ್ ಜಾರಕಿಹೊಳಿ ಅಂತಹ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.