ಬೆಳಗಾವಿ, ಸೆಪ್ಟೆಂಬರ್ 23: ರಾಜ್ಯದ ಅತಿದೊಡ್ಡ ಜಿಲ್ಲೆಯಲ್ಲೊಂದಾದ ಆ ಜಿಲ್ಲೆಯ ಉಪವಿಭಾಗವೊಂದರಲ್ಲಿ ಪಂಚನದಿಗಳು ಹರಿದಿವೆ. ಆ ಉಪವಿಭಾಗದಲ್ಲಿ ಶೇಕಡ 25ರಷ್ಟು ಗ್ರಾಮಗಳು ನದಿಪಾತ್ರದಲ್ಲಿದ್ದು ನೀರಾವರಿ ಪ್ರದೇಶವಾಗಿದ್ರೆ, ಇನ್ನುಳಿದ ಶೇಕಡ 75ರಷ್ಟು ಭಾಗದಲ್ಲಿ ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಈ ಮಧ್ಯೆ ನದಿಪಾತ್ರದ ಗ್ರಾಮಗಳ ರೈತರಿಗೆ (Farmers) ಕಳ್ಳರ ಕಾಟ ಶುರುವಾಗಿದೆ. ಅಷ್ಟಕ್ಕೂ ಯಾವುದು ಆ ಉಪವಿಭಾಗ? ಆ ಭಾಗದ ರೈತರು ಯಾವೆಲ್ಲ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮುಂದೆ ಓದಿ.
ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲೊಂದಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ರೈತರು ಮಳೆ ಬಾರದ ಹಿನ್ನೆಲೆ ಅಕ್ಷರಶಃ ಕಂಗಾಲಾಗಿದ್ದಾರೆ. ಜೂನ್ ಆರಂಭದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಸಮರ್ಪಕ ಮಳೆ ಬಾರದೇ ಗದ್ದೆಯಲ್ಲಿ ಬೆಳೆದ ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಹಂತಕ್ಕೆ ತಲುಪಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ರೈತರು ಯಾವ ರೀತಿ ನರಕಯಾತನೆ ಅನುಭವಿಸುತ್ತಿದ್ದಾರೆ ಅನ್ನೋದಕ್ಕೆ
ಹಾಲಟ್ಟಿ ಗ್ರಾಮದ ರೈತ ಬಸವರಾಜನೇ ಸಾಕ್ಷಿ. ಹೀಗೆ ಒಣಗಿದ ಮೆಕ್ಕೆಜೋಳ ಬೆಳೆ ನಿರಾಶೆಯಿಂದ ನೋಡುತ್ತಿರುವ ರೈತನ ಹೆಸರು ಬಸವರಾಜ, ಹಾಲಟ್ಟಿ ಗ್ರಾಮದಲ್ಲಿ ಇದ್ದ ತನ್ನ ಒಂದು ಎಕರೆ ಗದ್ದೆಯಲ್ಲಿ 25 ಸಾವಿರ ರೂ. ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದ. ಆದರೆ ಮುಂಗಾರು ಕೈಕೊಟ್ಟ ಹಿನ್ನೆಲೆ ಎರಡು ಎರಡೂವರೆ ಅಡಿಯಷ್ಟು ಬೆಳೆದು ನಿಂತ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದೆ. ಇದರಿಂದ ರೈತ ಬಸವರಾಜ ಅಕ್ಷರಶಃ ಕಂಗಾಲಾಗಿದ್ದು ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾನೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ: ರೈತನ ಪಾಲಿಗೆ ಕಹಿಯಾದ ಸಿಹಿ ಗೆಣಸು
ಟಿವಿ9 ಜೊತೆ ಮಾತನಾಡಿದ ರೈತ ಬಸವರಾಜ ಗ್ಯಾರಂಟಿ ಯೋಜನೆಗಳಿಂದ ಯಾರ ಹೊಟ್ಟೆಯೂ ತುಂಬಲ್ಲ, ಕಣ್ಣು ಮುಚ್ಚಿ ಕುಳಿತ ಸರ್ಕಾರ ರೈತರತ್ತ ಕಣ್ಣುತೆರೆದು ನೋಡಬೇಕು. ಸಾಲಸೋಲ ಮಾಡಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಒಣಗಿಹೋಗಿದ್ದು ಈಗ ಅದನ್ನು ಕಿತ್ತು ಹೊಲ ಹಸಣು ಮಾಡಬೇಕಂದ್ರು ಮತ್ತೆ ಹತ್ತು ಸಾವಿರ ರೂ. ಸಾಲ ಮಾಡಬೇಕಿದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಇದು ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ಕಥೆಯಾದ್ರೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ದೂಧ್ಗಂಗಾ, ವೇದಗಂಗಾ, ಕೃಷ್ಣಾ ನದಿ ಹರಿಯುತ್ತೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ನದಿಗೆ ಸ್ಲಲ್ಪ ಮಟ್ಟಿಗೆ ನೀರು ಬಂದಿದ್ದು ಚಿಕ್ಕೋಡಿ ಉಪವಿಭಾಗದ ನದಿಪಾತ್ರದ 63 ಹಳ್ಳಿಗಳಲ್ಲಿ ರೈತರು ನದಿ ನೀರನ್ನು ಪಂಪ್ಸೆಟ್ ಮೂಲಕ ಗದ್ದೆಗೆ ಹಾಯಿಸಿ ಕೃಷಿ ಮಾಡುತ್ತಾರೆ. ಹೀಗೆ ಅಳವಡಿಸಿದ ಪಂಪ್ಸೆಟ್ಗಳು ಕಳ್ಳತನವಾಗುತ್ತಿದ್ದು ರೈತರಿಗೆ ತಲೆನೋವಾಗಿದೆ.
ಇದನ್ನೂ ಓದಿ: ಬೆಳಗಾವಿ: ಮಲಪ್ರಭಾ ಡ್ಯಾಂನಿಂದ 4 ಜಿಲ್ಲೆಗಳ 14 ತಾಲೂಕುಗಳಿಗೆ ನೀರು ಬಿಡುಗಡೆ
ಈ ಕುರಿತು ಮಾತನಾಡಿರುವ ಕಲ್ಲೋಳ ಗ್ರಾಮದ ರೈತ ತುಕಾರಾಮ್ ಕೋಳಿ ಬರಗಾಲದ ಸಮಯದಲ್ಲಿ ನದಿಪಾತ್ರದ ಗ್ರಾಮಗಳ ರೈತರಿಗೆ ಕಳ್ಳರ ಕಾಟ ತಲೆನೋವಾಗಿದೆ. ನದಿ ದಡದಲ್ಲಿಟ್ಟ ರೈತರ ಪಂಪ್ಸೆಟ್ಗಳು ಕಳ್ಳತನವಾಗುತ್ತಿದ್ದು ಕೆಲವೊಂದಿಷ್ಟು ರೈತರು ಎಲ್ಲಿ ಪೊಲೀಸ್ ಠಾಣೆಗೆ ಕೇಸ್ ನೀಡಿ ಕೋರ್ಟ್ ಕಚೇರಿ ಅಂತಾ ಅಲೆದಾಡೋದು ಅಂತಾ ಸುಮ್ಮನಾದ್ರೆ ಕೆಲವರು ದೂರು ನೀಡುತ್ತಾರೆ. ಹೀಗಾಗಿ ಪೊಲೀಸರು ನದಿ ಪಾತ್ರದ ಗ್ರಾಮಗಳಲ್ಲಿ ನಿಗಾ ವಹಿಸಬೇಕು. ಬೀಟ್ ಪೊಲೀಸರಿಗೆ ಗಸ್ತು ತಿರುಗಿ ನಿಗಾ ವಹಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತಿಚೆಗೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದ ಪಂಪ್ಸೆಟ್ ಕಳ್ಳತನ ಪ್ರಕರಣ ಸಂಬಂಧ ಇಬ್ಬರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಇನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ ಎಲ್ಲಾ ತಾಲೂಕುಗಳು ಬರಪೀಡಿತ ಅಂತಾ ಸರ್ಕಾರ ಘೋಷಣೆ ಮಾಡಿದ್ದು, ಆದಷ್ಟು ಬೇಗ ಬೆಳೆಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಕೆಲಸ ಮಾಡಲಿ ಎಂಬುದು ಅನ್ನದಾತರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.