ಬೆಳಗಾವಿ: ತನ್ನ ಜನ್ಮದಿನದಂದು ಮಂಡಿಯೂರಿ ಕ್ಷಮೆಯಾಚಿಸಿದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್; ಯಾಕೆ ಗೊತ್ತಾ?
ತನ್ನ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಮಂಡಿಯೂರಿ ಕ್ಷಮೆಯಾಚಿಸಿದರು. ಯಾಕೆ ಎಂದು ಇಲ್ಲಿದೆ ನೋಡಿ.
ಬೆಳಗಾವಿ: ತನ್ನ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಅವರು ಮಂಡಿಯೂರಿ ಕ್ಷಮೆಯಾಚಿಸಿದ ಘಟನೆ ನಡೆಯಿತು. ಜನ್ಮದಿನ ಕಾರ್ಯಕ್ರಮದಲ್ಲಿ ಅಬ್ಬರದ ಭಾಷಣ ಮಾಡುತ್ತಿದ್ದ ಸಂಜಯ್ ಪಾಟೀಲ್, ಛತ್ರಪತಿ ಶಿವಾಜಿ ಮಹಾರಾಜ್ಗೆ ಅಪಮಾನ ಮಾಡಿದವರಿಗೆ ಅವರ ಸ್ಥಾನ ತೋರಿಸುವುದು ಬೇಡವಾ? 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಬೇಕು. 10 ವರ್ಷದಲ್ಲಿ ಶಾಸಕನಾದಾಗ ಏನಾದರೂ ತಪ್ಪು ಮಾಡಿದರೆ ನನ್ನ ಕ್ಷಮಿಸಿ, ಮಂಡಿಯೂರಿ ನಿಮ್ಮ ಕ್ಷಮೆ ಕೇಳುವೆ ನನ್ನ ಕ್ಷಮಿಸಿ ಎಂದು ಹೇಳಿ ವೇದಿಕೆ ಮೇಲೆಯೇ ಮಂಡಿಯೂರಿ ಕ್ಷಮೆಯಾಚಿಸಿದರು.
ಶಾಸಕನಾಗಿದ್ದಾಗ ನಾನು ತಪ್ಪು ಮಾಡಿದ್ದರೆ ಕ್ಷಮೆ ಕೇಳುವೆ, ಆದರೆ ಪ್ರಧಾನಿ ನರೇಂದ್ರ ಮೋದಿಗೆ ಶಿಕ್ಷೆ ಕೊಡಬೇಡಿ, ಹಿಂದು ಸಂಸ್ಕೃತಿ ರಕ್ಷಿಸುವ ಮೋದಿ ಕೈ ಬಲಹೀನ ಮಾಡಬೇಡಿ. ಸಂಜಯ್ ಪಾಟೀಲ್‌ಗೆ ಶಿಕ್ಷೆ ನೀಡಬೇಕಂದರೆ ಕಪಾಳಮೋಕ್ಷ ಮಾಡಿ ನಡೆಯುತ್ತದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಿ. ಯಾರಿಗೆ ಟಿಕೆಟ್ ಸಿಗುತ್ತದೆಯೋ ನನಗೆ ಗೊತ್ತಿಲ್ಲ. ನಾನು ಧರ್ಮ ಬಿಟ್ಟಿಲ್ಲ, ದೇವರ ಮೇಲೆ ನನಗೆ ವಿಶ್ವಾಸ ಇದೆ. ದೇವರ ಆಶೀರ್ವಾದದಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ಅಡುಗೆ ಅನಿಲದ ಬೆಲೆ ಏರಿಕೆ; ಇದು ಕೇಂದ್ರ ಸರ್ಕಾರದ ಹೊಸ ವರುಷದ ಉಡುಗೊರೆ ಎಂದು ಟೀಕಿಸಿದ ಕಾಂಗ್ರೆಸ್
ನನ್ನ ಹುಟ್ಟುಹಬ್ಬ ಅಂತಾ ಹೇಳಿ ಗಿಫ್ಟ್ ಕೊಡಬೇಕು ಅಂತಾ ಬಯಸಿದ್ದೇನೆ. ಯಾರಿಗೆ ಸಿಕ್ಕಿಲ್ಕ ಅವರಿಗೆ ಮುಟ್ಟಿಸುತ್ತೇನೆ. ಅಕೆ (ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್) ಏನರೇ ಕೊಟ್ಟರೂ ನಾನು ಅದರ ಎರಡು ಪಟ್ಟು ಕೊಡುವವ. ಏಪ್ರಿಲ್ ಮೇ ತಿಂಗಳವರೆಗೆ ಕಾಳಜಿ ಮಾಡಬೇಡಿ. ಏನೇ ಆದರೂ ಆ ಕಡೆ ಹೋಗಬೇಡಿ ಎಂಬುದೊಂದೇ ನನ್ನ ವಿನಂತಿಯಾಗಿದೆ ಎಂದು ಹೇಳುವ ಮೂಲಕ ಮತದಾರರಿಗೆ ಬಹಿರಂಗ ಆಮೀಷವೊಡ್ಡಿದರು. ಅಲ್ಲದೆ ಅಮ್ಮ, ಅಪ್ಪನ ಮೇಲೆ ಆಣೆ ಮಾಡುತ್ತೇನೆ ನಿಮ್ಮ ಬೆನ್ನಿಗೆ ಚೂರಿ ಹಾಕಲ್ಲ ಎಂದರು.
ಹೆಬ್ಬಾಳ್ಕರ್‌ನ ಪರೋಕ್ಷವಾಗಿ ಕೈಕೇಯಿಗೆ ಹೋಲಿಸಿದ ಸಂಜಯ್ ಪಾಟೀಲ್
ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಭಾಷಣದ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರನ್ನು ಪರೋಕ್ಷವಾಗಿ ಕೈಕೇಯಿಗೆ ಹೋಲಿಸಿದರು. ನಾನು ಅಕ್ಕಾ ಬಗ್ಗೆ ಹೇಳಿದ್ದೇನೆ, ಮಹಿಳೆಯರ ವಿರೋಧಿ ಹೇಳಿಕೆ ನೀಡಿಲ್ಲ. ಜೀಜಾಮಾತಾ ಇಲ್ಲದಿದ್ದರೆ ಛತ್ರಪತಿ ಶಿವಾಜಿ ಮಹಾರಾಜ ಇರುತ್ತಿರಲಿಲ್ಲ. ಕೌಸಲ್ಯೆ ಇಲ್ಲದಿದ್ದರೆ ರಾಮ ಇರುತ್ತಿರಲಿಲ್ಲ. ತ್ರಿಶಲಾ ಇಲ್ಲದಿದ್ದರೆ ಭಗವಾನ್ ಮಹಾವೀರ ಇರ್ತಿರಲಿಲ್ಲ ನನಗೆ ಗೊತ್ತು. ಆದರೆ ನಮ್ಮ ಭಾರತದ ಇತಿಹಾಸದಲ್ಲಿ ರಾಮಾಯಣದಲ್ಲಿ ಕೈಕೇಯಿ ಬಂದು ಹೋದಳು ಎಂದರು.
ಕೈಕೇಯಿ ಇದ್ದಿದ್ದಕ್ಕೆ ರಾಮಾಯಣ ಆಯ್ತು, ಮನೆ ಒಡೆಯಿತು, ವನವಾಸ ಅನುಭವಿಸಬೇಕಾಯಿತು. ಕೈಕೇಯಿಗೆ ಗೌರವ ನೀಡಿ ಅಂತಾ ನನಗ್ಯಾರು ಹೇಳಬೇಡಿ. ಅದು ನಾನು ಮಾಡಿಯೂ ಇಲ್ಲ, ಮಾಡುವುದೂ ಇಲ್ಲ. ಅವರು ಕುಕ್ಕರ್, ಡಬ್ಬಿ ಕೊಡುತ್ತಾರೆ. ನೀವೇನೂ ಬರೀ ಭಾಷಣ ಮಾಡುತ್ತೀರಿ ಅಂತೀರಬಹುದು. ಅವರು ಏನು ಕೊಡುತ್ತಾರೆ, ಅದರ ಡಬಲ್ ಕೊಡುತ್ತೇನೆ, ಆದರೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಬೇಕು ಎಂದು ಬಹಿರಂಗವಾಗಿಯೇ ಹೇಳಿದರು.
ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್
ಕಾಂಗ್ರೆಸ್ ಪಕ್ಷ ಜೊತೆ ಇರುವುದು ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನ. ಹರ್ಷಾ ಶುಗರ್ಸ್‌ಗೆ ಕಬ್ಬು ಕಳಿಸಿದ ರೈತರನ್ನು ಕೇಳಿರಿ. ರೈತರ ಎರಡೆರಡು ಟನ್ ಕಬ್ಬಿನ ದುಡ್ಡು ಹೊಡೆದು, ಅದನ್ನೇ ವಾಪಸ್ ಕೊಡುತ್ತಾರೆ. ಮತ್ತೆ ನೀವು ಹೇಳುತ್ತೀರಿ ಅಕ್ಕಾ ಕೊಟ್ಟಾಳ ಅಂತಾ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.
ಎದುರುಗಿನ ಮನುಷ್ಯ ತಲ್ವಾರ್ ಹಿಡಿದರೆ ನೀವು ತಲ್ವಾರ್ ಹಿಡಿಯಬೇಕಾಗುತ್ತದೆ ಎಂದು ಛತ್ರಪತಿ ಶಿವಾಜಿ ಮಹಾರಾಜರು ತಿಳಿಸಿದ್ದಾರೆ. ಎದುರುಗಿನ ಮನುಷ್ಯ ಯುದ್ಧಕ್ಕೆ ಸಜ್ಜಾಗಿದ್ದರೆ ನೀನೂ ಯುದ್ಧ ಮಾಡಬೇಕು. ವಿರೋಧಿ ಅಭ್ಯರ್ಥಿ ಕುಕ್ಕರ್ ನೀಡಿ ಮತ ಪಡೆಯುತ್ತಿದ್ದರೆ ಏನ್ ಮಾಡಬೇಕು ಎಂದು ಸಂಜಯ್ ಪಾಟೀಲ್ ಪ್ರಶ್ನೆ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Mon, 2 January 23