
ಬೆಳಗಾವಿ, ಸೆಪ್ಟೆಂಬರ್ 28: ಇಲ್ಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ವಿಶ್ವವಿದ್ಯಾಲಯದ ನೌಕರರು ಹಾಗೂ ಸಿಬ್ಬಂದಿಯ ಭವಿಷ್ಯ ನಿಧಿ (ಪಿಎಫ್) ಮತ್ತು ಎನ್‌ಪಿಎಸ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿ ಸಹಾಯಕ ಕುಲಸಚಿವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಹೆಚ್.ಎಂ. ಮುರುಗೇಶ್ ಹಾಗೂ ತಂಡ 2020ರಿಂದ 2023ರ ವರೆಗಿನ ನೌಕರರ ಪಿಎಫ್ ಹಾಗೂ ಎನ್‌ಪಿಎಸ್ ಹಣಕ್ಕೆ ಕನ್ನ ಹಾಕಿದೆ. ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 32 ಲಕ್ಷ ರೂ ಹಣವನ್ನು ತಮ್ಮ ಸ್ವಂತ ಹಾಗೂ ಇತರ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಳಗಾವಿ ವಿಟಿಯು ಖಜಾನೆ ಮೇಲೆ ಸರ್ಕಾರ ಕಣ್ಣು: 610 ಪೈಕಿ 250 ಕೋಟಿ ರೂ ನೀಡುವಂತೆ ಪತ್ರ
ಅಷ್ಟೇ ಅಲ್ಲದೆ, ವಿವಿ ಖಾತೆಯಿಂದ ಫರ್ನಿಚರ್ ಶಾಪ್‌ಗೂ ಹಣ ವರ್ಗಾವಣೆ ಮಾಡಿ ಸ್ವಂತಕ್ಕೆ ಬಳಸಿಕೊಂಡಿರುವುದು ಪತ್ತೆಯಾಗಿದೆ.
ಇನ್ನು 2024ರಲ್ಲಿ ಆರೋಪಿಗಳು ವಿವಿಯ ಆನ್‌ಲೈನ್ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿಸಿದ್ದರು. ಖಾತೆಯನ್ನು ಏಕೆ ಕ್ಲೋಸ್ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದಾಗ, ಕಳೆದ ಮೂರು ವರ್ಷಗಳಿಂದ ನೌಕರರ ಪಿಎಫ್ ಹಣವನ್ನು ಅಕ್ರಮವಾಗಿ ಡ್ರಾ ಮಾಡಿ ಸ್ವಂತಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಕ್ರಮ ಪತ್ತೆಯಾಗುತ್ತಿದ್ದಂತೆ ವಿವಿ ಆಡಳಿತ ಮಂಡಳಿ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ದೂರಿನನ್ವಯ ತನಿಖೆ ಆರಂಭಿಸಿರುವ ಪೊಲೀಸರು ಈಗಾಗಲೇ ಸಹಾಯಕ ಕುಲಸಚಿವ ಹೆಚ್.ಎಂ. ಮುರುಗೇಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ, ‘ಪ್ರಕರಣ ಸಂಬಂಧ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.