ಬಿಜೆಪಿ ಅಧಿಕಾರವಧಿಯಲ್ಲಿ ದಕ್ಷಿಣ ಕನ್ನಡಕ್ಕೆ ಏನು ಕೊಡುಗೆ ನೀಡಿದೆ?: ಯುಟಿ ಖಾದರ್ ವಾಗ್ದಾಳಿ
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಇನ್ನು ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದು, ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರು, ಸೆಪ್ಟೆಂಬರ್ 28: ಸಿಎಂ ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ 60 ಯೋಜನೆಗಳಿಗೆ 32,611 ಕೋಟಿ ರೂ ಅನುದಾನ ಘೋಷಿಸಿದ್ದಾರೆ. ಅಲ್ಲದೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ಸಹ ನೀಡಲಾಗಿದೆ. ಇದೇ ವಿಚಾರಗಳನ್ನಿಟ್ಟುಕೊಂಡು ಸಚಿವ ಯುಟಿ ಖಾದರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ’ ಎಂದು ಕಿಡಿಕಾರಿದ್ದಾರೆ.
ನಾವು ಜನರಿಗಾಗಿ ಕೆಲಸ ಮಾಡುತ್ತೇವೆ ಎಂದ ಯುಟಿ ಖಾದರ್
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಯುಟಿ ಖಾದರ್, ‘ಬಿಜೆಪಿ ಜಿಲ್ಲೆಯಲ್ಲಿ ಕನಿಷ್ಠ ಸಂಪುಟ ಸಭೆ ಏನಾದ್ರೂ ನಡೆಸಿದ್ದಾರೆಯೇ? ಯಾವುದಾದರೂ ಪ್ರಮುಖ ಯೋಜನೆ ರೂಪಿಸಿದ್ದಾರೆಯೇ? ನಾವು ಯಾರದ್ದೋ ಮಾತು ಕೇಳಿ ಕೆಲಸ ಮಾಡುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಕರಾವಳಿ ಅಭಿವೃದ್ಧಿಗೆ ಬಂಪರ್ ಗಿಫ್ಟ್: 32,611 ಕೋಟಿ ರೂ ಯೋಜನೆಗಳಿಗೆ ಸಂಪುಟ ಅಸ್ತು
ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ವಿಚಾರವಾಗಿ ಮಾತನಾಡಿದ ಅವರು, ‘ತುಳು ಭಾಷೆ ಬಗ್ಗೆ ಮೋಹನ್ ಆಳ್ವ ಆಗ ವರದಿ ನೀಡಿದ್ದರು. ಹಿಂದಿನ ಸರ್ಕಾರದ ಬಳಿಯೇ ಮೋಹನ್ ಆಳ್ವ ವರದಿ ಇತ್ತು. ಆಗ ಸುನೀಲ್ ಕುಮಾರ್ ಸಚಿವರಾಗಿದ್ದರು. ವರದಿಗೆ ಸಹಿ ಹಾಕಿ ಮುಂದಿನ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಹಾಗೆ ಮಾಡಿಲ್ಲ, ಯಾಕೆಂದರೆ ಸಹಿ ಹಾಕುವ ಧೈರ್ಯ ಬೇಕು’ ಎಂದು ಸಚಿವ ಖಾದರ್ ಹೇಳಿದ್ದಾರೆ.
ಮಂಗಳೂರು ಸಂಪುಟ ಸಭೆಯ ಘೋಷಣೆಗಳನ್ನ ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ
ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳು ಬೋಗಸ್, ಯಾವುದು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡಿದ್ದವು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ‘ಸಿಎಂ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ’ ಎಂದು ತಿರುಗೇಟು ನೀಡಿದ್ದಾರೆ. ಆ ಮೂಲಕ ಮಂಗಳೂರಿಗರಿಗೆ ಹೊಸ ಭರವಸೆ ಮೂಡಿಸಿದ್ದಾರೆ.
‘ಯೋಜನೆಗಳ ರೂಪುರೇಷೆ, ತಾಂತ್ರಿಕ ಸಮಸ್ಯೆಗಳ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಯೋಜನೆಗಳ ಅನುಷ್ಠಾನ ನಡೆಯಲಿದ್ದು, ಅಧಿಕಾರಿಗಳು ರೂಪಿಸುವ ಯೋಜನೆಗಳನ್ನು ಸರ್ಕಾರ ಅಂತಿಮಗೊಳಿಸಲಿದೆ’ ಎಂದು ಮಾಹಿತಿ ನೀಡಿದರು.
ಕ್ಯಾಬಿನೆಟ್‌ಗೆ ತನ್ನದೇ ಆದ ಜವಾಬ್ದಾರಿ ಇದೆ
‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಸಲಹೆ, ಎಚ್ಚರಿಕೆ ನೀಡುವುದು ಸಹಜ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಾ ಬಂದಿರುವ ಪ್ರಕ್ರಿಯೆ, ಆದರೆ ಕ್ಯಾಬಿನೆಟ್‌ಗೆ ತನ್ನದೇ ಆದ ಜವಾಬ್ದಾರಿ ಇದೆ. ಸರ್ಕಾರ ನೀಡಿದ ಮಾತನ್ನು ಈಡೇರಿಸುವುದು ಸರ್ಕಾರಕ್ಕೆ ಗೊತ್ತಿದೆ. ಅನುದಾನದ ಕೊರತೆ ಆಗದಂತೆ ಆದಾಯ ಹೆಚ್ಚಿಸುವ ಹಾಗೂ ನಷ್ಟವನ್ನು ತಡೆಗಟ್ಟುವ ಬಗ್ಗೆ ಮುಖ್ಯಮಂತ್ರಿಗೆ ಸ್ಪಷ್ಟ ಅರಿವಿದೆ’ ಎಂದರು.
ಮೂಡಬಿದ್ರೆಯ ಸತ್ಯ ಸಾರಾಮಣಿ ದೈವಸ್ಥಾನಕ್ಕೆ ಜಾಗ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಇದಕ್ಕೆಲ್ಲಾ ಕ್ಯಾಬಿನೆಟ್ ತೀರ್ಮಾನದ ಅಗತ್ಯವಿಲ್ಲ. ಸರ್ಕಾರದ ಆದೇಶದ ಮೂಲಕವೂ ಕ್ರಮಕೈಗೊಳ್ಳಬಹುದು’ ಎಂದು ತಿಳಿಸಿದರು.
ಅಲ್ಲಿರುವ ವೈದ್ಯರಿಗೆ ವೇತನವೇಕೆ ನೀಡಬೇಕು: ಖಾದರ್ ಪ್ರಶ್ನೆ
ವೆನ್ಲಾಕ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ‘ಉತ್ತಮ ಚಿಕಿತ್ಸೆ ಸಿಕ್ಕರೆ ರೋಗಿಗಳು ಹೆಚ್ಚಾಗುವುದು ಸಾಮಾನ್ಯ. ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶ್ರೀಮಂತರೂ ಬರುತ್ತಾರೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಗೂ ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜುಗಳಿರುವಾಗ ಅಲ್ಲಿನ ಸಣ್ಣಪುಟ್ಟ ಪ್ರಕರಣಗಳನ್ನೂ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸುವ ಅಗತ್ಯವೇನು? ಸಣ್ಣ ಪ್ರಕರಣಗಳನ್ನು ಇಲ್ಲಿಗೆ ಕಳುಹಿಸುವುದಾದರೆ ಅಲ್ಲಿರುವ ವೈದ್ಯರಿಗೆ ವೇತನವೇಕೆ ನೀಡಬೇಕು’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಹುದಿನಗಳ ಕನಸು ನನಸು: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ಸಚಿವ ಸಂಪುಟ ತೀರ್ಮಾನ
‘ಯಾವ ಪ್ರಕರಣವನ್ನು ಯಾವ ಆಸ್ಪತ್ರೆಗೆ ಕಳುಹಿಸಬೇಕು ಎಂಬುದಕ್ಕೆ ಸೂಕ್ತ ನಿಯಮ ರೂಪಿಸಬೇಕಾಗಿದೆ. ಮೊಬೈಲ್ ಆ್ಯಪ್ ಮೂಲಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳು ಹಾಗೂ ಐಸಿಯು ಸೌಲಭ್ಯಗಳ ಮಾಹಿತಿ ದೊರೆಯುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಮೂಡಬಿದ್ರೆ, ಬೈಂದೂರು, ಭಟ್ಕಳ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಗಳು ಅಭಿವೃದ್ಧಿಯಾದಂತೆ ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳ ಒತ್ತಡವೂ ಕಡಿಮೆಯಾಗಲಿದೆ’ ಎಂದಿದ್ದಾರೆ.
ಹೆಚ್ಚು ಉಪ್ಪು ಸೇವಿಸಿದ್ರೆ ನಾವೇನೂ ಮಾಡಲಾಗದು
‘ಬಹುತೇಕ ಕಾಯಿಲೆಗಳಿಗೆ ಉಪ್ಪು ಮತ್ತು ಸಕ್ಕರೆಯಿಂದ ಬರುತ್ತಿದೆ. ಉಪ್ಪಿನಲ್ಲಿರುವ ಸೋಡಿಯಂ ಪ್ರಮಾಣ ನಿಯಂತ್ರಿಸುವ ಕುರಿತು ಚರ್ಚೆ ಮಾಡಲಾಗುತ್ತಿದೆ. ಪ್ಯಾಕೆಟ್ ಮೇಲೆ ಆರೋಗ್ಯದ ಬಗ್ಗೆ ಎಚ್ಚರಿಕೆ ಸಂದೇಶ ಅಳವಡಿಸುವ ಬಗ್ಗೆಯೂ ಚಿಂತನೆ ಇದೆ. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿ. ಇಷ್ಟೆಲ್ಲಾ ಮಾಡಿದ್ರೂ ಹೆಚ್ಚು ಉಪ್ಪು ಸೇವಿಸಿದ್ರೆ ನಾವೇನೂ ಮಾಡಲಾಗದು. ವೆನ್ಲಾಕ್ ಆಸ್ಪತ್ರೆಯೂ ಇದೆ, ಖಾಸಗಿ ಆಸ್ಪತ್ರೆ ಇದೆ, ಸ್ಮಶಾನವೂ ಇದೆ’ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




