ಟಿವಿ9 ಇಂಪ್ಯಾಕ್ಟ್: ಬೆಳಗಾವಿಯ ಮಜಗಾಂವ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ, ನಿಟ್ಟುಸಿರು ಬಿಟ್ಟ ಜನ
ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಏಳು ನದಿಗಳು ಮತ್ತು ಮೂರು ಅಣೆಕಟ್ಟುಗಳಿರುವ ಜಿಲ್ಲೆಯಲ್ಲಿ ಈ ಸಮಸ್ಯೆ ಎದುರಾಗಿತ್ತು. ಟಿವಿ9 ವರದಿಯ ಬಳಿಕ ಎಲ್&ಟಿ ಕಂಪನಿ ನೀರು ಪೂರೈಕೆ ಮಾಡಿದ್ದು, ಆದರೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗಿದೆ.

ಬೆಳಗಾವಿ, ಫೆಬ್ರವರಿ 14: ಏಳು ನದಿಗಳು, ಮೂರು ಡ್ಯಾಂ ಇರುವ ಜಿಲ್ಲೆಯಲ್ಲಿ ಜನರು ನೀರಿಗಾಗಿ (water) ಪರಿತಪ್ಪಿಸುತ್ತಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಜನರು ಕೊಡಗಳನ್ನ ಹಿಡಿದು ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರೋಷಿ ಹೋದ ಜನರು ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಎಲ್ ಆ್ಯಂಡ್ ಟಿ ಗೆ ಕೊನೆಯ ಎಚ್ಚರಿಕೆ ನೀಡಿದ್ದರು. ಈ ಕುರಿತು ನಿನ್ನೆಯಷ್ಟೇ ಟಿವಿ9ನಲ್ಲಿ ವಿಸ್ತೃತ ವರದಿ ಬಿತ್ತರಿಸದ ಬೆನ್ನಲ್ಲೇ ಇಂದು ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.
ಟಿವಿ9 ವರದಿ ಬೆನ್ನಲ್ಲೇ ಗ್ರಾಮಕ್ಕೆ ನೀರು ಪೂರೈಕೆ
ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದ ಜನರು ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗಾಗಿ ಪರದಾಟ ನಡೆಸಿದ್ದರು. ಕಳೆದ ಒಂದು ತಿಂಗಳಿನಿಂದ ಹನಿ ನೀರಿಗೂ ಪರದಾಡುತ್ತಿದ್ದರು. ನಿನ್ನೆ ಟಿವಿ9 ವರದಿ ಬೆನ್ನಲ್ಲೇ ಇಂದು ಗ್ರಾಮಕ್ಕೆ ಎಲ್ ಆ್ಯಂಡ್ ಟಿ ಕಂಪನಿಯಿಂದ ಮಜಗಾಂವ ಗ್ರಾಮಕ್ಕೆ ನೀರು ಪೂರೈಕೆ ಮಾಡಿದೆ. 24/7 ನೀರು ಸರಬರಾಜು ಟೆಂಡರ್ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿ ನೀರು ಪೂರೈಸಲಿದೆ.
ಇದನ್ನೂ ಓದಿ: ಹಾರೂಗೇರಿ ಪೊಲೀಸ್ ಠಾಣೆ ಮುಂದೆ ತಂದೆಯ ಶವವಿಟ್ಟು ಇನ್ಸ್ಪೆಕ್ಟರ್ ಪ್ರತಿಭಟನೆ
ಬೆಳಗಾವಿ ನಗರಕ್ಕೆ ಹೊಂದಿಕೊಂಡ ಮಜಗಾಂವ ಗ್ರಾಮದಲ್ಲಿ ಇನ್ನೂರಕ್ಕೂ ಅಧಿಕ ಮನೆಗಳಿದ್ದು, ಕಳೆದ ಒಂದು ತಿಂಗಳಿಂದ ನೀರು ಬಾರದೆ ಜನ ಪರಿತಪ್ಪಿಸುತ್ತಿದ್ದರು. ಸಾಕಷ್ಟು ಭಾರೀ ಪಾಲಿಕೆಗೆ ಹಾಗೂ ನೀರು ಸರಬರಾಜು ಮಾಡುವ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹತ್ತು, ಹನ್ನೆರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಇದರಿಂದ ಬೇಸಿಗೆಗೂ ಮುನ್ನವೇ ಜನ ನೀರಿಲ್ಲದೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಅಧಿಕಾರಿಗಳ ವಿರುದ್ದ ಆಕ್ರೋಶ
ಕೆಲವೊಮ್ಮೆ ಆ ನೀರು ಕೂಡ ಬರುವುದಿಲ್ಲ. ಆಗ ಒಂದು ಅಥವಾ ಎರಡು ಟ್ಯಾಂಕರ್ ನೀರು ಸಪ್ಲೈ ಮಾಡಿ ಸುಮ್ಮನಾಗ್ತಾರೆ. ಇದರಿಂದ ದುಡ್ಡು ಕೊಟ್ಟು ನೀರು ಖರೀದಿ ಮಾಡಿ ಬಳಸುವ ಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮದ ಬಹುತೇಕ ಜನರು ನಿನ್ನೆ ಕೈಯಲ್ಲಿ ಕೊಡ ಹಿಡಿದು ಹೋರಾಟ ಮಾಡಿದ್ದಾರೆ. ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಅಂಕಲ್- ಆಂಟಿ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್: ಒಬ್ಬನಿಗಾಗಿ ಇಬ್ಬರ ಮಹಿಳೆಯರ ಹೊಡೆದಾಟ
ಇನ್ನೂ ಸಾಕಷ್ಟು ದಿನಗಳಿಂದಲೂ ನೀರಿನ ಸಮಸ್ಯೆ ಇದ್ದು ಶಾಸಕರು ಸೇರಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೋಷಿ ಹೋದ ಗ್ರಾಮಸ್ಥರು ಕೊಡ ಹಿಡಿದು ಮಜವಾಂವ ಮತ್ತು ಬೆಳಗಾವಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಶ್ವತವಾದ ನೀರಿನ ವ್ಯವಸ್ಥೆ ಮಾಡಲು ಒಂದು ವಾರಗಳ ಕಾಲ ಗಡುವು ಕೂಡ ನೀಡಿದ್ದರು. ಶೀಘ್ರದಲ್ಲಿ ನೀರಿನ ವ್ಯವಸ್ಥೆ ಮಾಡದಿದ್ದರೆ, ಕೊಡಗಳನ್ನ ಹಿಡಿದುಕೊಂಡು ಮಹಾನಗರ ಪಾಲಿಕೆ ಎದುರು ಹೋರಾಟ ಮಾಡುವುದಾಗಿ ಜೊತೆಗೆ ಬೆಳಗಾವಿ ಖಾನಾಪುರ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:37 pm, Fri, 14 February 25



