ಬರೋಬ್ಬರಿ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೈರಾಣವಾದರೂ ಇಂದು ಚಿನ್ನದ ಬಾಲಕನಾಗಿದ್ದಾನೆ, ಜೈ ಎನ್ನಿ ಈ ಅನಿಕೇತನಗೆ!

12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಮಗ ಕಡೆ ಪಕ್ಷ ಮನೆಯಲ್ಲಿದ್ರೇ ಸಾಕು, ಕಣ್ಣಮುಂದೆ ಓಡಾಡಿಕೊಂಡಿದ್ದರೆ ಸಾಕು ಅಂತಾ ಅಪ್ಪ- ಅಮ್ಮ ಆಶಿಸಿದ್ದರು. ಆದರೆ ಇಂದು ಅದೇ ಮಗು ಹೆಮ್ಮೆ ಪಡುವ ಕೆಲಸ ಮಾಡಿದ್ದಾನೆ. ಆರೋಗ್ಯ ಸರಿಪಡಿಸಿಕೊಳ್ಳಲು ಕಲಿತ ಈಜು ಇಂದು ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಆ ಬಾಲಕನನ್ನು ಬಂಗಾರಮಯವಾಗಿಸಿದೆ!

ಬರೋಬ್ಬರಿ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೈರಾಣವಾದರೂ ಇಂದು ಚಿನ್ನದ ಬಾಲಕನಾಗಿದ್ದಾನೆ, ಜೈ ಎನ್ನಿ ಈ ಅನಿಕೇತನಗೆ!
ಅಯ್ಯೋ! 6 ವರ್ಷ ವಯಸ್ಸಿಗೇ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕಂದಮ್ಮಾ ಇದು!
TV9kannada Web Team

| Edited By: sadhu srinath

Nov 25, 2022 | 1:18 PM

ಆತ ಹುಟ್ಟಿನಿಂದಲೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನ ಎದುರಿಸಿಕೊಂಡೇ ಬರುತ್ತಿದ್ದವ. ಮಗ ಹೇಗಾದ್ರೂ ಮಾಡಿ ಬದುಕಿ ಬಾಳಲಿ ಅಂತಾ ಪೋಷಕರು ಬರೋಬ್ಬರಿ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಮಗ ಕಡೆ ಪಕ್ಷ ಮನೆಯಲ್ಲಿದ್ರೇ ಸಾಕು, ಕಣ್ಣಮುಂದೆ ಓಡಾಡಿಕೊಂಡಿದ್ದರೆ ಸಾಕು ಅಂತಾ ಅಪ್ಪ- ಅಮ್ಮ ಆಶಿಸಿದ್ದರು. ಆದರೆ ಇಂದು ಅದೇ ಮಗು ಹೆಮ್ಮೆ ಪಡುವ ಕೆಲಸ ಮಾಡಿದ್ದಾನೆ. ಆರೋಗ್ಯ ಸರಿಪಡಿಸಿಕೊಳ್ಳುವ ಸಲುವಾಗಿಯೇ ಕಲಿತ ಈಜು (Swimming) ಇಂದು ಬೆಳಗಾವಿ ಸೇರಿ ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಆ ಬಾಲಕನನ್ನು ಬಂಗಾರಮಯವಾಗಿಸಿದೆ. ಅಷ್ಟಕ್ಕೂ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ 13ನೇ ವಯಸ್ಸಿಗೇ ಮಾಡಿರುವ ಆ ಸಾಧನೆಗಳು ಎನು ಅಂತಾ ತಿಳಿಯಲು ಈ ಸ್ಟೋರಿ ಓದಿ…

ಅಯ್ಯೋ! 6 ವರ್ಷ ವಯಸ್ಸಿಗೇ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕಂದಮ್ಮಾ ಅದು!

ಗಳಿಸಿದ ಟ್ರೋಫಿಯನ್ನೇ ಸರಿಯಾಗಿ ಹಿಡಿದುಕೊಳ್ಳಲು ಆಗದ ಅಂಗವೈಕಲ್ಯ ಬಾಲಕನಲ್ಲಿದ್ರೂ ಮಾಡಿದ ಸಾಧನೆ ನೋಡಿ ಇಂದು ಇಡೀ ರಾಜ್ಯವೇ ಮನಸಾರೆ ಕೊಂಡಾಡುತ್ತಿದೆ. 13 ವರ್ಷದ ಈ ಬಾಲಕನೇ ಅನಿಕೇತ್ ಪಿಲನಕರ್. ಬೆಳಗಾವಿ ನಗರದ ಅನಗೋಳ ಬಡಾವಣೆಯ ನಿವಾಸಿ. (Aniket Chidambar Pilankar, Belagavi) ಏಳನೇ ತರಗತಿಯಲ್ಲಿ ಓದುತ್ತಲೂ ಇದ್ದಾನೆ. ಹೌದು ಹುಟ್ಟಿದ ಸಂದರ್ಭದಲ್ಲೇ ಆರ್ಥೋ ಗ್ರ್ಯಾಫ್ಸೋಸಿಸ್ ಅನ್ನೋ ಕಾಯಿಲೆಯಿಂದ ಬಳಲತೊಡಗಿದ ಅನಿಕೇತ, ಮೂರು ವರ್ಷದವನಿದ್ದಾಗಿನಿಂದ ಹಿಡಿದು ಆರು ವರ್ಷದವರೆಗೆ ಬರೋಬ್ಬರಿ 12 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

ಬೋನ್ ಸಮಸ್ಯೆಯಿಂದ ಬಳಲುತ್ತಿದ್ದ ಈತನಿಗೆ ಶಸ್ತ್ರಚಿಕಿತ್ಸೆ ಆದ ನಂತರ ವೈದ್ಯರು ಆರೋಗ್ಯದಲ್ಲಿ ಚೇತರಿಕೆ ಆಗದ ಹಿನ್ನೆಲೆ ಸ್ವಿಮ್ಮಿಂಗ್ ಮಾಡಿಸಲು ತಂದೆ ತಾಯಿಗೆ ಸಲಹೆ ನೀಡ್ತಾರೆ. ಅದರಂತೆ ಪೋಷಕರು ಮಗನನ್ನ ಈಜುಕೊಳಕ್ಕೆ ತಂದು ನಿತ್ಯವೂ ಒಂದು ಗಂಟೆ ಕಾಲ ನೀರಿನಲ್ಲೇ ಬಿಟ್ಟು ಈಜು ಕಲಿಸಲು ಆರಂಭಿಸುತ್ತಾರೆ. ಆರಂಭದಲ್ಲಿ ಕೋಚ್ ಗೂ ಮನವಿ ಮಾಡಿಕೊಂಡ ಕುಟುಂಬಸ್ಥರು ಆತನಿಗೆ ಈಜು ಕಲಿಸಲು ಹೇಳ್ತಾರೆ.

ಆರೋಗ್ಯ ಸುಧಾರಣೆಗೆ ಅಂತಾ ಮಗನನ್ನ ಪೋಷಕರು ಈಜು ಕೊಳಕ್ಕೆ ಇಳಿಸಿದ್ರೇ ಇಂದು ಅಲ್ಲಿ ಇದ್ದುಕೊಂಡೇ ಬಾಲಕ ಅನಿಕೇತ್ ರಾಷ್ಟ್ರಮಟ್ಟ್ರದಲ್ಲಿ ಹೆಸರು ಮಾಡಿದ್ದಾನೆ. ಅಸ್ಸಾಂನ ಗುಹಾವಟಿಯಲ್ಲಿ ನಡೆದ ರಾಷ್ಟ್ಟೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿ ಬರೋಬ್ಬರಿ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಬೆಳಗಾವಿ ಹಾಗೂ ರಾಜ್ಯಕ್ಕೂ ಕೀರ್ತಿ ತಂದಿದ್ದಾನೆ.

Physically challenged Aniket Pilankar from Belagavi

ಅನಿಕೇತ ತಂದೆ ಚಿದಂಬರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರೇ ತಾಯಿ ಶ್ವೇತಾ ಅವರು ಮನೆಯಲ್ಲೇ ಇರ್ತಾರೆ. ಮಗನಿಗೆ ಕಾಯಿಲೆ ಇರುವುದನ್ನ ಕಂಡ ಅಪ್ಪ ಅಮ್ಮ ಮಗ ಅಂಗವಿಕಲನಾದ್ರೂ ಪರವಾಗಿಲ್ಲ. ಆತನನ್ನ ಪಾಲನೆ ಪೋಷಣೆ ಮಾಡೋಣ ಅಂದುಕೊಂಡು ನಾನಾ ವೈದ್ಯರಿಗೆ ತೋರಿಸಿದರು. ಶಸ್ತ್ರಚಿಕಿತ್ಸೆ ನಡೆಸಿದರೂ ಆತನ ಕಾಯಿಲೆ ಮಾತ್ರ ಸರಿಹೋಗಲಿಲ್ಲ.

ಆರಂಭದಲ್ಲಿ ಶಾಲೆಗೆ ಪೋಷಕರೇ ಎತ್ತುಕೊಂಡು ಹೋಗಿ ಕೂಡಿಸುವ ಕೆಲಸ ಮಾಡುತ್ತಿದ್ದರು. ಹೀಗಿದ್ದ ಅನಿಕೇತ್ ಇದೀಗ ಈಜುವುದನ್ನ ಕಲಿತು ನಿತ್ಯ ಒಂದರಿಂದ ಎರಡು ಗಂಟೆಗಳ ಕಾಲ ನಿರಂತರವಾಗಿ ಈಜಲಾರಂಭಿಸುತ್ತಾನೆ. ಹೀಗೆ ಈಜುವುದರಲ್ಲಿ ಪರಿಣತಿ ಗಳಿಸಿದ ಅನಿಕೇತ್ ಇಲ್ಲಿವರೆಗೂ ಒಟ್ಟು 9 ಚಿನ್ನದ ಪದಕವನ್ನ ನಾನಾ ಈಜು ಸ್ಪರ್ಧೆಗಳಲ್ಲಿ ಬೇಟೆಯಾಡಿದ್ದಾನೆ! ಬ್ಯಾಕ್ ಸ್ವಿಮ್ ಮಾಡುವುದನ್ನು ಕೂಡ ಕಲಿತಿರುವ ಅನಿಕೇತ ಅದರಲ್ಲೂ ಟ್ರೋಫಿ ಗೆದ್ದು ಈ ಬಾರಿ ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಸ್ಪರ್ಧೆಯಲ್ಲೇ ಅತೀ ಹೆಚ್ಚು ಚಿನ್ನ ಗೆದ್ದ ಬಾಲಕ ಅನ್ನೋ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಸಾಮಾನ್ಯವಾಗಿ ಎರಡೂ ಕೈಗಳಿದ್ದವರೇ ಜೀವನದಲ್ಲಿ ಎನೂ ಸಾಧನೆ ಮಾಡಲು ಆಗದೆ ಕೈಚೆಲ್ಲುತ್ತಾರೆ. ಅಂತಹುದರಲ್ಲಿ ಎರಡೂ ಕೈ-ಕಾಲುಗಳಲ್ಲಿ ಅಷ್ಟೊಂದು ಸ್ವಾಧೀನ ಇಲ್ಲದಿದ್ರೂ… ಕಾಯಿಲೆಗೇ ಸೆಡ್ಡು ಹೊಡೆದು ದೇಹವನ್ನ ದಂಡಿಸಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಅನಿಕೇತ ಎಲ್ಲರಿಗೂ ಮಾದರಿಯಾಗಿದ್ದಾನೆ. ಇಂತಹ ಬಾಲಕರಿಗೆ ಸರ್ಕಾರದಿಂದ ಸಹಾಯ ಸಿಕ್ಕಿದರೇ ದೇಶಕ್ಕೂ ಈತ ದೊಡ್ಡ ಹೆಸರು ತಂದು ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. (ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada