ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದಲೇ 2.68 ಕೋಟಿ ರೂ ದರೋಡೆಗೆ ಯತ್ನ: 7 ಜನರ ಬಂಧನ

ಶಾಸಕ ರಮೇಶ್ ಜಾರಕಿಹೊಳಿ ಗನ್​ಮ್ಯಾನ್ ಸೇರಿ 7 ಮಂದಿಯನ್ನು ಬೆಳಗಾವಿಯ ಮೂಡಲಗಿಯಲ್ಲಿ 2.68 ಕೋಟಿ ರೂ ಮನಿ ಡಬ್ಲಿಂಗ್ ದರೋಡೆ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ಹಣದ ಆಮಿಷವೊಡ್ಡಿ ಹಣ ಪಡೆದು, ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಿದ್ದರು. ಆದರೆ, ದೂರುದಾರರ ಹುಡುಗರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದಲೇ 2.68 ಕೋಟಿ ರೂ ದರೋಡೆಗೆ ಯತ್ನ: 7 ಜನರ ಬಂಧನ
ವಶಕ್ಕೆ ಪಡೆದಿರುವ ಹಣ, ಚಿದಾನಂದ ಕುರಬೆಟ್
Edited By:

Updated on: Nov 08, 2026 | 3:03 PM

ಮುಖ್ಯಾಂಶಗಳು

  • ಶಾಸಕ ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದ ದರೋಡೆಗೆ ಯತ್ನ
  • ಮನಿ ಡಬ್ಲಿಂಗ್ ಹೆಸರಲ್ಲಿ 2.68 ಕೋಟಿ ದೋಚಲು ಸಂಚು ಆರೋಪ
  • ಗನ್​ಮ್ಯಾನ್‌ ಸೇರಿ 7 ಜನ‌ರ ಬಂಧನ

ಬೆಳಗಾವಿ, ನವೆಂಬರ್​​ 08: ಶಾಸಕ ರಮೇಶ್ ಜಾರಕಿಹೊಳಿ ಗನ್​ಮ್ಯಾನ್​ನಿಂದ ಮನಿ ಡಬ್ಲಿಂಗ್ ಹೆಸರಲ್ಲಿ 2.68 ಕೋಟಿ ರೂ ದರೋಡೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅಕ್ಟೋಬರ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು 7 ಜನ‌ರನ್ನ ಬಂಧಿಸಿದ್ದಾರೆ. ಗನ್​ಮ್ಯಾನ್​ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್​, ರಾಘವೇಂದ್ರ ಕೊಪ್ಪದ್, ರಾಮಪ್ಪ ತಳವಾರ ಬಂಧಿತರು. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕಲ್ಮೇಶ್​ ಎಂಬ ವ್ಯಕ್ತಿ ಶಿವಂ ಅಸೋಸಿಯೇಟ್​ನಲ್ಲಿ ಹಣ ಕಳೆದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಗನ್​ಮ್ಯಾನ್​ ಚಿದಾನಂದ ಕುರಬೆಟ್, ಹೆಚ್ಚಿನ ಹಣ ಮಾಡಿ ಕೊಡುವುದಾಗಿ ನಂಬಿಸಿದ್ದ. 1 ಲಕ್ಷಕ್ಕೆ 30 ಸಾವಿರ ರೂ ಹೆಚ್ಚಿನ ಆಮಿಷವೊಡ್ಡಿದ್ದಾರೆ. ಹಣ ಕೊಟ್ಟರೆ ಅಕೌಂಟ್​ಗೆ ಜಮಾ ಮಾಡುತ್ತೇವೆ ಎಂದು ನಂಬಿಸಿದ್ದಾರೆ.

Loading...

ಖಾರದ ಪುಡಿ ಎರಚಿ ಹಲ್ಲೆ: ದರೋಡೆಗೆ ಯತ್ನಿ

ಗನ್​ಮ್ಯಾನ್ ಮಾತು ನಂಬಿದ ಕಲ್ಮೇಶ್,​ ಬ್ಯಾಂಕ್, ಸೊಸೈಟಿ ಮತ್ತು ಸ್ನೇಹಿತರಿಂದ ಬರೋಬ್ಬರಿ 2.68 ಕೋಟಿ ರೂ. ಸಂಗ್ರಹಿಸಿದ್ದಾರೆ. ಬಳಿಕ ಚಿದಾನಂದಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ಚಿದಾನಂದ ಕುರಬೆಟ್ ಆ್ಯಂಡ್​ ಗ್ಯಾಂಗ್ ಹಣ ಎಣಿಕೆಗೆ ಶೆಡ್​ಗೆ ಕರೆದಿದ್ದಾರೆ. ಹಣ ತರುತ್ತಿದ್ದಂತೆ ಚಿದಾನಂದ ಟೀಮ್​ನಿಂದ ಶೆಡ್ ಮೇಲೆ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದೆ. ಆದರೆ ಕಲ್ಮೇಶ್​​​, ಶೆಡ್ ಸುತ್ತಲೂ ಹುಡುಗರನ್ನು ಮೊದಲೇ ಕಾವಲಿಗೆ ನಿಲ್ಲಿಸಿದ್ದ.

ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!

ಕೂಡಲೇ ಚಿದಾನಂದ ಆ್ಯಂಡ್​ ಗ್ಯಾಂಗ್​​ನನ್ನು​ ಶೆಡ್ ಹೊರಗಿದ್ದ ಕಲ್ಮೇಶ್ ಹುಡುಗರು ಹಿಡಿದಿದ್ದಾರೆ. ಆರೋಪಿಗಳ ಮೇಲೆ ಹಲ್ಲೆ ಮಾಡಿ ಬಳಿಕ ಕಲ್ಮೇಶ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 2.39 ಕೋಟಿ ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದು ಮತ್ತು ಉಳಿದ ಹಣಕ್ಕೆ ಶೋಧ ಕಾರ್ಯ ನಡೆದಿದೆ.

ಗನ್​ಮ್ಯಾನ್​ ಚಿದಾನಂದ ಅಮಾನತು 

ಇನ್ನು ದರೋಡೆ ಕೇಸ್​ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ​ ಗನ್​ಮ್ಯಾನ್​ ಚಿದಾನಂದ ಬಂಧನ ಬೆನ್ನಲ್ಲೇ ಅವರನ್ನ ಅಮಾನತು ಮಾಡಿ ಬೆಳಗಾವಿ ಎಸ್​ಪಿ ಕೆ.ರಾಮರಾಜನ್ ಆದೇಶ ಹೊರಡಿಸಿದ್ದಾರೆ. ಆರೋಪಿ ಬಂಧಿಸಿ ಮುಂದಿನ ತನಿಖೆ ನಡೆಸುವಂತೆ ಎಸ್​ಪಿ ಸೂಚಿಸಿದ್ದು, ‘ಪ್ರಕರಣದಲ್ಲಿ ಶಾಸಕರ ಪಾತ್ರ ಇಲ್ಲ. ಪರಾರಿಯಾದ ಆರೋಪಿ ಬಂಧನಕ್ಕೆ ಶೋಧ ನಡೆಸುತ್ತಿದ್ದೇವೆ. ಹೆಚ್ಚಿನ ಹಣಕ್ಕೆ ನಂಬಿ ವಂಚನೆಗೆ ಒಳಗಾಗದಂತೆ’ ಅವರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us