ಕೆಲವೇ ದಿನಗಳಲ್ಲಿ ಬೆಂಗಳೂರು, ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ಆರಂಭ; ಎಲ್ಲೆಲ್ಲಿ ನಿಲುಗಡೆ? ಇಲ್ಲಿದೆ ವಿವರ
Bengaluru-Hyderabad Vande Bharat Express; ಈ ರೈಲು ಯಶವಂತಪುರದಿಂದ ಕಾಚೀಗುಡ ನಡುವಿನ 610 ಕಿ.ಮೀ ದೂರವನ್ನು ಏಳು ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ರೈಲು ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆ ಮಾಡಲಿದೆ. ಪ್ರಸ್ತುತ, ಎರಡು ನಗರಗಳ ನಡುವಿನ ವೇಗದ ರೈಲು ದುರಂತೊ ಎಕ್ಸ್‌ಪ್ರೆಸ್ ಆಗಿದೆ.
ಬೆಂಗಳೂರು, ಆಗಸ್ಟ್ 21: ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ವಂದೇ ಭಾರತ್ ರೈಲು (Bengaluru Hyderabad Vande Bharat train) ಆಗಸ್ಟ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಈ ರೈಲು ಸೇಡಂ (Sedam), ರಾಯಚೂರು (Raichur) ಮತ್ತು ಗುಂತಕಲ್ (Guntakal) ಜಂಕ್ಷನ್‌ಗಳಲ್ಲಿ ನಿಲುಗಡೆ ಮಾಡುವ ಸಾಧ್ಯತೆ ಇದೆ. ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ರೈಲುಗಳ ನಂತರ ಕರ್ನಾಟಕದ ಮೂರನೇ ವಂದೇ ಭಾರತ್ ರೈಲು ಇದಾಗಿರಲಿದೆ.
ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ 16 ಬೋಗಿಗಳ ರೈಲಾಗಿದ್ದು, 14 ಚೇರ್ ಕಾರ್ ಮತ್ತು ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ಗಳನ್ನು ಹೊಂದಿದೆ. ಈ ರೈಲು ಆರಂಭದಲ್ಲಿ ಯಶವಂತಪುರ, ಧರ್ಮಾವರಂ, ಧೋನೆ, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹೆಬೂಬ್‌ನಗರ, ಶಾದ್‌ನಗರ ಮತ್ತು ಕಾಚೀಗುಡ ಮೂಲಕ ಸಂಚರಿಸಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಈ ರೈಲು ಯಶವಂತಪುರದಿಂದ ಕಾಚೀಗುಡ ನಡುವಿನ 610 ಕಿ.ಮೀ ದೂರವನ್ನು ಏಳು ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ರೈಲು ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆ ಮಾಡಲಿದೆ. ಪ್ರಸ್ತುತ, ಎರಡು ನಗರಗಳ ನಡುವಿನ ವೇಗದ ರೈಲು ದುರಂತೊ ಎಕ್ಸ್‌ಪ್ರೆಸ್ ಆಗಿದ್ದು, ಇದು ಒಂಬತ್ತು ಗಂಟೆ ಸಮಯ ತೆಗೆದುಕೊಳ್ಳುತ್ತದೆ.
ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ಪ್ರಾರಂಭವಾಗಿದ್ದು, ಔಪಚಾರಿಕ ಕಾರ್ಯವಿಧಾನದ ನಂತರ ರೈಲು ಸೇವೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿಯ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Vande Bharat Train: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನೊಳಗೆ ಕಸದ ರಾಶಿ; ವೈರಲ್ ಫೋಟೋಗೆ ಜನರ ಪ್ರತಿಕ್ರಿಯೆ ನೋಡಿ
ಕರ್ನಾಟಕದಿಂದ ಎರಡು ವಂದೇ ಭಾರತ್ ರೈಲುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ರೈಲು ಜೂನ್ 27 ರಂದು ಪ್ರಾರಂಭವಾಗಿದ್ದು, ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಪ್ರಯಾಣಿಸಲು ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 504 ಕಿ.ಮೀ ದೂರವನ್ನು ಕ್ರಮಿಸಲು ಈ ರೈಲು ಆರೂವರೆ ಗಂಟೆ ತೆಗೆದುಕೊಳ್ಳುತ್ತದೆ.
ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ