ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು 8 ತಿಂಗಳ ಬಳಿಕ ಪತ್ತೆ; ಒಬ್ಬಾಕೆ ಗರ್ಭಿಣಿ!
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಕಳೆದ ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿಯರನ್ನು ಸಿಐಡಿ ಪೊಲೀಸರು ಕನಕಪುರದಲ್ಲಿ ಪತ್ತೆಹಚ್ಚಿದ್ದಾರೆ. ಆಧಾರ್ ಕಾರ್ಡ್ ಬಳಸಿ ಹೊಸ ಸಿಮ್ ಖರೀದಿಸಿದಾಗ ಪೊಲೀಸರಿಗೆ ಮಹತ್ವದ ಸುಳಿವು ದೊರೆತ್ತಿದ್ದು, ಇದರ ಆಧಾರದ ಮೇಲೆ ಇಬ್ಬರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಈ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರು, (ಸೆಪ್ಟೆಂಬರ್ 09): 8 ತಿಂಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚುವಲ್ಲಿ ಸಿಐಡಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ತೇಜಸ್ವಿನಿ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದವರು ಪತ್ತೆಯಾಗಿದ್ದಾರೆ. ಇತ್ತೀಚೆಗೆ ಒಬ್ಬ ಯುವತಿ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಆಧಾರ್ ಕಾರ್ಡ್ ಬಳಸಿದ್ದಳು. ಈ ವೇಳೆ ಆಧಾರ್ ಸಂಖ್ಯೆಯ ಬಳಕೆಯ ಕುರಿತು ಸರ್ವಿಸ್ ಪ್ರೊವೈಡರ್‌ನಿಂದ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇಬ್ಬರೂ ಯುವತಿಯರು ಪತ್ತೆಯಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ಒಬ್ಬ ಯುವತಿಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು. ಯುವಕನ ಕುಟುಂಬದವರು ವಿಚಾರಿಸಿದಾಗ, ‘ತಾವಿಬ್ಬರೂ ಸಹೋದರಿಯರು, ತಮಗೆ ತಂದೆ-ತಾಯಿ ಸೇರಿದಂತೆ ಯಾರೂ ಇಲ್ಲ’ ಎಂದು ಹೇಳಿದ್ದರು. ನಂತರ ಒಬ್ಬ ಯುವತಿಯು ಅದೇ ಪರಿಚಯಸ್ಥ ಯುವಕನನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ಮತ್ತೋರ್ವ ಯುವತಿಯನ್ನೂ ತಮ್ಮೊಂದಿಗೆ ಇರಿಸಿಕೊಂಡಿದ್ದರು. ವಿವಾಹವಾಗಿರುವ ಯುವತಿ ಸದ್ಯ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಮತ್ತೆ ಬಂದ ಬ್ಲಾಕ್ ಪಲ್ಸರ್ ಖದೀಮರು: ಬೆಂಗಳೂರು ಹೊರವಲಯದಲ್ಲಿ ಸರಣಿ ಸರಗಳ್ಳತನ
ಪತಿ ಹೋಗ್ತೇನೆಂದ ತನಿಷ್ಕಾ
8 ತಿಂಗಳ ಹಿಂದೆ ನಾಪತ್ತೆಯಾಗಿದ್ಸ ತನಿಷ್ಕಾ ಪತಿ ಮನೆಯಲ್ಲಿ ಪತ್ತೆಯಾದ ಬಳಿಕ ಆಕೆಯನ್ನ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಈ ವೇಳೆ ತಾನು ಪತಿ ಜೊತೆಯಲ್ಲೇ ಹೋಗುವುದಾಗಿ ಹೇಳಿದ್ದಾಳೆ. ಸದ್ಯ ತನಿಷ್ಕಾಗೆ 18 ವರ್ಷ ತುಂಬಿದ್ದರಿಂದ ಪತಿ ಜತೆ ಹೋಗಲು ಕೋರ್ಟ್ ಸಹ ಅನುಮತಿ ನೀಡಿದೆ. ಆದರೆ ಅಪ್ರಾಪ್ತೆ ತೇಜಸ್ವೀನಿ ಕೆಲ ತಿಂಗಳು ತನಿಷ್ಕಾ ಜತೆ ಇದ್ದು, ಇತ್ತೀಚೆಗೆ ಯುವಕನ ಪರಿಚಯಸ್ಥರ ಜತೆ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಹೀಗಾಗಿ ಸಿಐಡಿ ತಂಡ ಸದ್ಯ ಆಕೆ ಪತ್ತೆಗೆ ಮುಂದಾಗಿದೆ.
ಘಟನೆ ಹಿನ್ನೆಲೆ
ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ತೇಜಸ್ವಿನಿ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೋಷಕರು ನೀಡಿದ್ದ ದೂರಿನನ್ವಯ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕಷ್ಟು ಹುಡುಕಾಟದ ಬಳಿಕವೂ ಪತ್ತೆಯಾಗದಿದ್ದಾಗ, ಒಬ್ಬ ಯುವತಿಯ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆಗೊಳಿಸಲು ನಿರ್ದೇಶನ ನೀಡಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿ ತಂಡ, ಮೂರು ತಿಂಗಳಿಂದ ಯುವತಿಯರಿಗಾಗಿ ಹುಡುಕಾಟ ನಡೆಸಿತ್ತು. ತನಿಖೆ ವೇಳೆ ಇಬ್ಬರೂ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಐಡಿ ಅಧಿಕಾರಿಗಳಿಗೆ ದೊರೆತಿತ್ತು. ಇಬ್ಬರೂ ಒಂದು ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ, ಮಗುವಿನ ತಾಯಿ ಇಬ್ಬರ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದರು. ಆ ಫೋಟೋ ಹಾಗೂ ಲಭ್ಯವಾದ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರೆಸಿದರೂ ಯುವತಿಯರ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ. ಇದೀಗ ಎಂಟು ತಿಂಗಳ ಬಳಿಕ ಯುವತಿಯರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವದ ತಿರುವು ಪಡೆದಿದೆ. ಕಾಣೆಯಾದ ಅವಧಿಯಲ್ಲಿ ಎಲ್ಲಿದ್ದರು, ನಾಪತ್ತೆಯಾಗಿದ್ದೇಕೆ? ಎಂಬುದರ ಕುರಿತು ತನಿಖೆ ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ.
Published On - 9:38 pm, Wed, 9 September 26




