ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಡಾ. ಮಂಜುನಾಥ್ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತು!

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿರುವ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಬಗ್ಗೆ ಕೇಳಿದ ಪ್ರಶ್ನೆಗೆ ಯಾವ ರೀತಿ ಉತ್ತರಿಸಿದರು ಎಂಬುದು ಇಲ್ಲಿದೆ ಓದಿ.

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಡಾ. ಮಂಜುನಾಥ್ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತು!
ಸಿದ್ದರಾಮಯ್ಯ
Follow us
| Updated By: ಗಣಪತಿ ಶರ್ಮ

Updated on: Mar 28, 2024 | 1:13 PM

ರಾಮನಗರ, ಮಾರ್ಚ್​ 28: ಲೋಕಸಭೆ ಚುನಾವಣೆಗೆ (Lok Sabha Elections) ಬೆಂಗಳೂರು ಗ್ರಾಮಾಂತರ (Bengaluru rural) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಗುರುವಾರ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅನೇಕ ಕಾಂಗ್ರೆಸ್ ನಾಯಕರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಲೋಕಸಭೆ ಅಖಾಡಕ್ಕೆ ಭರ್ಜರಿ ಬಲ ಪ್ರದರ್ಶನ ನಡೆಯಿತು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಏನ್ ಹೃದಯ ನೋಡಿ ವೋಟ್ ಹಾಕ್ತಾರೆ ಎಂದ ಸಿದ್ದರಾಮಯ್ಯ

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಡಾ. ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಅವರ ‘ಹೃದಯ’ ನೋಡಿ ಜನ ಮತದಾನ ಮಾಡಲಿದ್ದಾರೆ. ಹೀಗಾಗಿ ಡಿಕೆ ಸುರೇಶ್ ಈ ಬಾರಿ ಸೋಲಬಹುದು ಎಂದು ಹೇಳಲಾಗುತ್ತಿದೆಯಲ್ಲ’ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಏನ್ ಹೃದಯ ನೋಡಿ ವೋಟ್ ಹಾಕ್ತಾರೆ ಎಂದು ಪ್ರಶ್ನಿಸಿದರು.

ಡಾ. ಮಂಜುನಾಥ್​ ಸರ್ಕಾರಿ ಕೆಲಸದಲ್ಲಿದ್ದವರು. ನಿವೃತ್ತರಾಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ. ಸಂಸದ ಡಿಕೆ ಸುರೇಶ್ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದು, ಸಾಕಷ್ಟು ಕೆಲಸ ಮಾಡಿದ್ದಾರೆ. ಸಂಸತ್​​ನಲ್ಲಿ, ಸಂಸತ್ ಹೊರಗಡೆ, ಕ್ಷೇತ್ರದಲ್ಲಿ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡಿದವರು. ಹೀಗಾಗಿ ಬಿಜೆಪಿಯವರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಡಿಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಪಕ್ಷದ ಸರ್ಕಾರ ಬಡವರ ಪರವಾಗಿ ಅನೇಕ ಯೋಜನೆಗಳನ್ನು ನೀಡಿದೆ. ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಡಿ‌ಕೆ ಸುರೇಶ್ ಈ ಕ್ಷೇತ್ರಕ್ಕೆ ಬಹಳ ಕೆಲಸ ಮಾಡಿದ್ದಾರೆ. ಹಗಲು ರಾತ್ರಿ ದುಡಿದಿದ್ದಾರೆ. ಹೀಗಾಗಿ ಅವರಿಗೆ ಜನ ಮತ ನೀಡುತ್ತಾರೆ. ಕಳೆದ‌ ಬಾರಿ ಬಿಜೆಪಿಯವರು ಎಲ್ಲಾ 28 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದರು. ಆದರೆ,‌ ಗೆದ್ರಾ? ಕಳೆದ ಬಾರಿ ನಮ್ಮ ಸರ್ಕಾರ ಇರಲಿಲ್ಲ. ಈ‌ಬಾರಿ ನಮ್ಮ ಸರ್ಕಾರ ಇದೆ. ಐದು ಗ್ಯಾರಂಟಿಗಳಿಂದ ನಾವು ಗೆಲ್ಲುತ್ತೇವೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ನಾಮಪತ್ರ ಸಲ್ಲಿಕೆ ಕೇಂದ್ರಗಳ ಬಳಿ ನಿಷೇಧಾಜ್ಞೆ: ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧ? ಇಲ್ಲಿದೆ ವಿವರ

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ನಡೆಯಿತು. ರಾಮನಗರದಲ್ಲಿ ತೆರೆದ ವಾಹನದಲ್ಲಿ ಅಭ್ಯರ್ಥಿ ಡಿಕೆ ಸುರೇಶ್​ ಮೆರವಣಿಗೆ ನಡೆಸಿದರು. ರಾಮನಗರ ಜ್ಯೂನಿಯರ್ ಕಾಲೇಜಿನಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಯಿತು.

ಜನಜಂಗುಳಿ ಮಧ್ಯೆ ಸಿಲುಕಿದ ಸಿಎಂ ವಾಹನ

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ವಾಹನ ಜನಜಂಗುಳಿಯಲ್ಲಿ ಸಿಲುಕಿತು. ಬೆಂಗಾವಲು ವಾಹನಗಳು ಹರಸಾಹಸ ಪಟ್ಟು ಮುಂದೆ ಸಾಗಿದ್ದು ಕಂಡುಬಂತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ