ಮತ್ತೆ ಬಂದ ಬ್ಲಾಕ್​ ಪಲ್ಸರ್​ ಖದೀಮರು: ಬೆಂಗಳೂರು ಹೊರವಲಯದಲ್ಲಿ ಸರಣಿ ಸರಗಳ್ಳತನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಬ್ಲಾಕ್ ಪಲ್ಸರ್ ಬೈಕ್‌ನಲ್ಲಿ ಬಂದ ಸರಗಳ್ಳರು ಸರಣಿ ಅಪರಾಧಗಳನ್ನು ಎಸಗುತ್ತಿದ್ದಾರೆ. ನಂದಗುಡಿ, ಸೂಲಿಬೆಲೆ, ವಿಜಯಪುರ, ಹೊಸಕೋಟೆ, ದೇವನಹಳ್ಳಿ ಪ್ರದೇಶಗಳಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಮಾಂಗಲ್ಯ ಸರ ಕಳ್ಳತನ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

ಮತ್ತೆ ಬಂದ ಬ್ಲಾಕ್​ ಪಲ್ಸರ್​ ಖದೀಮರು: ಬೆಂಗಳೂರು ಹೊರವಲಯದಲ್ಲಿ ಸರಣಿ ಸರಗಳ್ಳತನ
ಸರಗಳ್ಳತನ
Image Credit source: tv9 kannada
Edited By:

Updated on: Sep 09, 2026 | 5:54 PM

ದೇವನಹಳ್ಳಿ, ಸೆಪ್ಟೆಂಬರ್​ 09: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದಲ್ಲಿ ಕದ್ದ ಬ್ಲ್ಯಾಕ್ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಸರಣಿ ಸರಗಳ್ಳತನ ಎಸಗಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದಾರೆ. ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮಾಂಗಲ್ಯ ಸರಗಳನ್ನು ಎಗರಿಸಿ ಪರಾರಿಯಾಗುತ್ತಿರುವ ಈ ಗ್ಯಾಂಗ್‌ನ ಕೃತ್ಯಕ್ಕೆ ಪೊಲೀಸರು ಸೇರಿದಂತೆ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ.

ನೆಲಮಂಗಲದಲ್ಲಿ ಬೈಕ್ ಕಳವು ಮಾಡಿ ಸರಗಳ್ಳತನ

ನೆಲಮಂಗಲದಲ್ಲಿ ಕಳವು ಮಾಡಿದ್ದ ಕಪ್ಪು ಬಣ್ಣದ ಪಲ್ಸರ್ ಬೈಕ್ ಬಳಸಿಕೊಂಡು ಇಬ್ಬರು ಖದೀಮರು ಕೃತ್ಯಕ್ಕಿಳಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ತಮ್ಮ ಕೈಚಳಕ ತೋರಿಸಿರುವ ಗ್ಯಾಂಗ್, ನಂದಗುಡಿ, ಸೂಲಿಬೆಲೆ ಮತ್ತು ವಿಜಯಪುರ ಠಾಣಾ ವ್ಯಾಪ್ತಿಗಳಲ್ಲಿ ಒಂಟಿ ಮಹಿಳೆಯರ ಮಾಂಗಲ್ಯ ಸರಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.

ಸರಗಳ್ಳತನಕ್ಕೆ‌ ವಿಫಲ ಯತ್ನ

ಇನ್ನು ಮಾಲೂರು ಹಾಗೂ ದೇವನಹಳ್ಳಿ ಭಾಗದಲ್ಲೂ ಖದೀಮರು ಸರಗಳ್ಳತನಕ್ಕೆ ಯತ್ನಿಸಿದ್ದು, ಅಲ್ಲಿ ಇವರ ಕೃತ್ಯ ವಿಫಲಗೊಂಡಿದೆ. ಒಂದೇ ಬೈಕ್‌ನಲ್ಲಿ ಅಡ್ಡಾಡುತ್ತಾ ಸಿಟಿ ಔಟ್‌ಸ್ಕರ್ಟ್ಸ್‌ನಲ್ಲಿ ಸರಣಿ ಅಪರಾಧ ಎಸಗುತ್ತಿರುವ ಈ ಕಳ್ಳರ ಚಲನವಲನ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಮೂರು ಠಾಣೆಗಳಲ್ಲಿ ಕೇಸ್: ವಿಶೇಷ ತಂಡಗಳಿಂದ ತನಿಖೆ

ಸರಗಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಖದೀಮರ ಹೆಡೆಮುರಿ ಕಟ್ಟಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಪೀಣ್ಯದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಸರಗಳ್ಳತನ: ಸಿಸಿಟಿವಿ ದೃಶ್ಯ ವೈರಲ್

ಇನ್ನು ಇತ್ತೀಚೆಗೆ ಬೆಂಗಳೂರಿನ ಪೀಣ್ಯ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದಿದ್ದ ಖದೀಮರು ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಎಗರಿಸಿದ್ದ ಆಘಾತಕಾರಿ ಘಟನೆ ನಡೆದಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು, ಏಕಾಏಕಿ ಅವರ ಮೇಲೆ ದಾಳಿ ನಡೆಸಿ ನೆಲಕ್ಕೆ ಬೀಳಿಸಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

ಇದನ್ನೂ ಓದಿ: ನೆಲಮಂಗಲ: ಹೀಗೆ ಹೋಗಿ ಹಾಗೆ​ ಬರುವಷ್ಟರಲ್ಲಿ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಮಾಯ!

ಹಲ್ಲೆಯ ತೀವ್ರತೆಗೆ ಮಹಿಳೆ ಗಾಯಗೊಂಡಿದ್ದು, ಈ ಇಡೀ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us