ಕೈಗಾರಿಕಾ ತ್ಯಾಜ್ಯದಿಂದ ಕಲುಷಿತಗೊಂಡ ಕೆರೆ; ನೀರಿಗಾಗಿ 17 ಗ್ರಾಮಗಳ ಜನರ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 17, 2024 | 3:17 PM

ರಾಜ್ಯದಲ್ಲಿ 2024 ರ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎಲ್ಲಾ ರಾಜಕೀಯ ನಾಯಕರು, ಅಧಿಕಾರಿಗಳು ಚುನಾವಣೆಯತ್ತ ಗಮನಹರಿಸಿದರೆ,  ದೊಡ್ಡಬಳ್ಳಾಪುರ ತಾಲೂಕಿನ 17 ಗ್ರಾಮದ ಜನತೆ ಮಾತ್ರ ಕೈಗಾರಿಕಾ ತ್ಯಾಜ್ಯ ನೀರು ಮತ್ತು ನಗರಸಭೆಯ ಮಲೀನ ನೀರಿನಿಂದ ಬೇಸತ್ತು ಪರದಾಡುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿ ಪ್ರತಿಭಟನೆ ನಡೆಸಿದರೂ ಸರಿಪಡಿಸದ ಸರ್ಕಾರದ ವಿರುದ್ಧ ಮತದಾನ ಬಹಿಷ್ಕಾರದ ನಾಮಫಲಕ ಅಳವಡಿಸಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. 

ಕೈಗಾರಿಕಾ ತ್ಯಾಜ್ಯದಿಂದ ಕಲುಷಿತಗೊಂಡ ಕೆರೆ; ನೀರಿಗಾಗಿ 17 ಗ್ರಾಮಗಳ ಜನರ ಪರದಾಟ
ಕೈಗಾರಿಕಾ ತ್ಯಾಜ್ಯದಿಂದ ಕಲುಷಿತಗೊಂಡ ಕೆರೆ
Follow us on

ಬೆಂಗಳೂರು ಗ್ರಾಮಾಂತರ, ಏ.17: ದೊಡ್ಡಬಳ್ಳಾಪುರ(Doddaballapura) ತಾಲೂಕಿನ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಪಂಚಾಯತಿಯ 17 ಗ್ರಾಮಗಳು ನಿರಂತರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಇದೇ ಗ್ರಾಮದ ಕೆರೆಗೆ ಭಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹಾಗೂ ದೊಡ್ಡಬಳ್ಳಾಪುರ ನಗರದ ಕಲುಷಿತ ನೀರು ಶುದ್ದಿಕರಿಸದೆ ಈ ಭಾಗದ ಕೆರೆಗೆ ಹರಿಸುತ್ತಿದ್ದಾರೆ. ಒಂದೆಡೆ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು, ಜನತೆಗೆ ಕೆಲಸ ಸಿಗಬೇಕು ಎಂಬುದು ಹಲವು ಸರ್ಕಾರಗಳ ಕಾಳಜಿ. ಆದರೆ, ಅಭಿವೃದ್ಧಿಯ ಹೆಸರಲ್ಲಿ ಕೈಗಾರಿಕೆಗಳಿಂದ ಬರುವ ಕಲುಷಿತ ನೀರು ಕೆರೆ ಪ್ರದೇಶಗಳನ್ನು ತಲುಪಿ, ಸ್ವಾಭಾವಿಕವಾಗಿ ಶುದ್ಧವಾಗಿದ್ದಂತಹ ಕೆರೆ ನೀರನ್ನು ಅವೈಜ್ಞಾನಿಕವಾಗಿ ಶುದ್ಧೀಕರಿಸಿ ಬಿಡುತ್ತಿವೆ. ಇದೇ ಕೆರೆ ನೀರು ಅಂತರ್ಜಲ ಸೇರಿ ಸಂಪೂರ್ಣ ಕಲುಷಿತವಾಗಿದ್ದು ಕಲುಷಿತ ನೀರನ್ನು ಸೇವನೆ ಮಾಡುವ ದೌರ್ಭಾಗ್ಯ ಈ ಗ್ರಾಮಗಳ ಜನತೆಯಾದ್ದಾಗಿದೆ.

ಲೋಕಸಭಾ ಮತದಾನ ಬಹಿಷ್ಕಾರದ ಎಚ್ಚರಿಕೆ

ಈ ಕೊಳಚೆ ನೀರನ್ನು ಸೇವಿಸಿದ ಜನ-ಜಾನುವಾರುಗಳು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ಪರದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಹ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ 17 ಗ್ರಾಮಗಳ ಗ್ರಾಮಸ್ಥರು ಲೋಕಸಭಾ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅನೇಕ ಬಾರಿ ಭಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿ ಈ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ಒತ್ತಾಯಿಸಲಾಗಿತ್ತು. ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಮೊದಲ ಹಂತದ ಸಂಸ್ಕರಣ ಘಟಕಗಳನ್ನು ಕೇವಲ ಹೆಸರಿಗಷ್ಟೇ ತೆರೆದು ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಸಂಸ್ಕರಣೆಯಾಗುತ್ತಿಲ್ಲವಂತೆ.

ಇದನ್ನೂ ಓದಿ:ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ನೂರಾರು ವರ್ಷಗಳ ಇತಿಹಾಸವಿರುವ ಕೆರೆ ಇದೀಗ ಕಲುಷಿತ

ಇದೇ ಕಲುಷಿತ ನೀರು, ಅಂತರ್ಜಲ ಸೇರಿ ಭೂಮಿಯ ಒಡಲನ್ನು ಪ್ರವೇಶಿಸಿ ಭೂಮಿಯ ಪರಿಸರವನ್ನು ನಾಶಪಡಿಸುತ್ತಿದೆ. ಹೀಗಾಗಿ ಮೂರು ಹಂತದಲ್ಲಿ ಕೊಳಚೆ ನೀರು ಸಂಸ್ಕರಿಸಿ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ಶುದ್ದಿಕರಣ ಘಟಕ ತೆರೆಯಲು ಸರ್ಕಾರ ಮುಖ್ಯ ಕಾರ್ಯದರ್ಶಿ ಲಿಖಿತ ರೂಪದಲ್ಲಿ ಭರವಸೆ ಕೊಟ್ಟರೇ ಮಾತ್ರ ನಾವು ಮತದಾನ ಮಾಡುತ್ತೇವೆ, ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಮತದಾನ ಮಾಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಹಿಷ್ಕರಾದ ನಾಮಫಲಕಗಳು ಎಲ್ಲೆಡೆ ಹಾಕುತ್ತಿದ್ದಂತೆ ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗಾದಿಕಾರಿ ಶ್ರೀನಿವಾಸ್ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಯತ್ನ ಮಾಡಿದರು. ಜೊತೆಗೆ ಶುದ್ದೀಕರಣ ಘಟಕ ಆಗುವವರೆಗೂ ಪಂಚಾಯ್ತಿ ಹಾಗೂ ನಗರಸಭೆಯಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಆದ್ರೆ, ಈ ಕುಲಷಿತ ನೀರು ಶುದ್ದಿಕರಿಸೋಕೆ ಶಾಶ್ವತ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಒಟ್ಟಾರೆ ಕಳೆದ ಹಲವು ವರ್ಷಗಳಿಂದ ಕೈಗಾರಿಕರಣ, ಕಲುಷಿತ ನೀರು ಶುದ್ದಿಕರಿಸದೆ ಕೆರೆಗೆ ಸೇರಿ ಈ 17 ಗ್ರಾಮಗಳ ಜನರ ಬದುಕನ್ನು ಕಸಿದಿದೆ. ಈ ಬಗ್ಗೆ ಎಷ್ಟೇ ಮನವಿ ಕೊಟ್ಟರೂ ಕೂಡ ಅಧಿಕಾರಿಗಳು ಕ್ರಮಕೈಗೊಳ್ಳದೆ ಭರವಸೆಗಳನ್ನ ಮಾತ್ರ ನೀಡುತ್ತಿದ್ದಾರೆ. ಇದರಿಂದ ನೊಂದ ಜನತೆ ಈ ಭಾರಿಯ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದು, ಜಿಲ್ಲಾಡಳಿತ ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ