ಬನ್ನೇರುಘಟ್ಟ ಪಾರ್ಕ್: ಬುಡಕಟ್ಟು ಯುವತಿಯರಿಗೆ ಬ್ಯಾಟರಿ ಚಾಲಿತ ವಾಹನಗಳ ಡ್ರೈವಿಂಗ್ ಕೆಲಸ, ಮಾವುತರ ಮನೆ ಮಂದಿಗೆ ಹೊಲಿಗೆ ತರಬೇತಿ
Bengaluru Bannerghatta Biological Park: ಒಟ್ನಲ್ಲಿ ಕಾಡು ಮೇಡು ಅಲೆದಾಡಿಕೊಂಡು ಅಲೆಮಾರಿಗಳಾಗಿದ್ದ ಜೇನು ಕುರುಬ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸ್ವಾವಲಂಬನೆಯ ಬದುಕಿನ ಪಾಠ ಕಲಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅವರು ಜೇನು ಕುರುಬ (Jenu Kuruba) ಕುಟುಂಬಕ್ಕೆ ಸೇರಿದ ಮಹಿಳೆಯರು. ಕಾಡು ಮೇಡಿನಲ್ಲಿ ಜೇನು, ಗೆಡ್ಡೆ ಗೆಣಸು ಬಿಟ್ಟರೆ ಅವ್ರಿಗೆ ಹೊರಗಿನ ಪ್ರಪಂಚ ಅಷ್ಟಕಷ್ಟೆ. ಆದ್ರೆ ಅಂತಹ ಬುಡಕಟ್ಟು ಮಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bengaluru Bannerghatta Biological Park) ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವಂತಹ ಕೆಲಸ ಮಾಡಲಾಗಿದೆ.. ಅಷ್ಟಕ್ಕೂ ಅದೇನ್ ಅಂತೀರಾ ನೋಡಿ ಈ ಸ್ಟೋರಿಯಲ್ಲಿ… ಹೊಲಿಗೆ ತರಬೇತಿಯಲ್ಲಿ (Tailoring) ನಿರತರಾಗಿರುವ ಬುಡಕಟ್ಟು ಮಹಿಳೆಯರು. ಇನ್ನೊಂದೆಡೆ ಬ್ಯಾಟರಿ ಚಾಲಿತ ವಾಹನಗಳ ಚಾಲನೆ ಮಾಡುತ್ತಿರುವ ಬುಡಕಟ್ಟು ಯುವತಿಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ (Bengaluru Anekal taluk) ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ.
ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಅವಿನಾಭಾವ ಸಂಬಂಧ ಹೊಂದಿರುವ ಜೇನು ಕುರುಬರನ್ನು ರಾಜ್ಯದ ನಾನಾ ಉದ್ಯಾನವನಗಳಲ್ಲಿ ಸಾಕಾನೆಗಳ ಪಳಗಿಸಲು ನಿಯೋಜಿಸಲಾಗಿದೆ. ಅಂದರಂತಯೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 15 ಕ್ಕೂ ಅಧಿಕ ಜೇನು ಕುರುಬ ಬುಡಕಟ್ಟಿಗೆ ಸೇರಿದ ಮಾವುತರು ಮತ್ತು ಕಾವಾಡಿಗಳು ಸಾಕಾನೆಗಳ ಪಾಲನೆ ಮಾಡುತ್ತಿದ್ದು, ಅವರ ಕುಟುಂಬಗಳು ಸಹ ಇಲ್ಲಿ ನೆಲೆಸಿವೆ.
ಸಕ್ರೆಬೈಲು, ಶಿವಮೊಗ್ಗ ಮತ್ತು ಹುಣಸೂರು ಕಡೆಯಿಂದ ಆಗಮಿಸಿದ್ದ ಮಾವುತರ ಮಡದಿ ಮಕ್ಕಳಿಗೆ ಕಾಡು ಮೇಡು ಬಿಟ್ಟರೆ ಬೇರೇನೂ ತಿಳಿದಿಲ್ಲ. ಹಾಗಾಗಿ ಅವರ ಮೂಲ ಕಸುಬಿನ ಜೊತೆ ಆರ್ಥಿಕವಾಗಿ ಸದೃಢರಾಗಲು ಮತ್ತು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಮಾವುತರ ಮಡದಿಯರಿಗೆ ಹೊಲಿಗೆ ತರಬೇತಿ ಮತ್ತು ಮಕ್ಕಳಿಗೆ ಬ್ಯಾಟರಿ ಚಾಲಿತ ವಾಹನ ಚಾಲನೆಗೆ ಅವಕಾಶ ಮಾಡಿ ಕೊಡಲಾಗಿದೆ ಎಂದು ಸುನೀಲ್ ಪನ್ವಾರ್, ಕಾರ್ಯನಿರ್ವಾಹಕ ನಿರ್ದೇಶಕ, ಬನ್ನೇರುಘಟ್ಟ ಜೈವಿಕ ಉದ್ಯಾನವನ ತಿಳಿಸಿದ್ದಾರೆ.
ಇನ್ನು ಜೇನು ಕುರುಬ ಬುಡಕಟ್ಟು ಸಮುದಾಯದ ನಮಗೆ ಕಾಡು ಮತ್ತು ಕಾಡು ಪ್ರಾಣಿಗಳೇ ಪ್ರಪಂಚ. ಹಾಗಾಗಿ ನಮ್ಮ ಕುಟುಂಬದ ಪುರುಷರು ಉದ್ಯಾನವನದ ಸಾಕಾನೆಗಳ ಮಾವುತರಾಗಿದ್ದಾರೆ. ಉಳಿದಂತೆ ಮಹಿಳೆಯರು, ಯುವತಿಯರು ಮನೆಯ ಕೆಲಸಕ್ಕಷ್ಟೇ ಸೀಮಿತರಾಗಿದ್ದರು. ಆದ್ರೆ ಈಗಾಗಲೇ ಬ್ಯಾಟರಿ ಚಾಲಿನ ವಾಹನಗಳ ಚಾಲನಾ ತರಬೇತಿ ನೀಡಿ ಒಂಬತ್ತು ಬುಡಕಟ್ಟು ಯುವತಿಯರಿಗೆ ಉದ್ಯೋಗ ನೀಡಿದ್ದಾರೆ.
ಹತ್ತು ಮಂದಿ ಮಾವುತರ ಪತ್ನಿಯರಿಗೆ ಹೊಲಿಗೆ ತರಬೇತಿ ಯೋಜನೆ ರೂಪಿಸಿದ್ದು, ಬಹುತೇಕ ಎಲ್ಲಾ ಮಹಿಳೆಯರು ತರಬೇತಿ ಪಡೆದು ಚೂಡಿದಾರ್, ಶರ್ಟ್ ಪ್ಯಾಂಟ್ ಸೇರಿದಂತೆ ಎಲ್ಲಾ ಮಾದರಿಯ ಉಡುಪುಗಳನ್ನು ಸಿದ್ದಪಡಿಸಲು ಕಲಿತಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯಾನವನದ ಸಿಬ್ಬಂದಿಗೆ ಸಮವಸ್ತ್ರ ಸಿದ್ದಪಡಿಸುವ ಮೂಲಕ ಉದ್ಯಾನವನದ ಅಧಿಕಾರಿಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ದಾರಿ ದಾರಿ ತೋರಿಸಿದ್ದಾರೆ ಎಂದು ಬುಡಕಟ್ಟು ಕುಟುಂಬದ ಯುವತಿ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಕಾಡು ಮೇಡು ಅಲೆದಾಡಿಕೊಂಡು ಅಲೆಮಾರಿಗಳಾಗಿದ್ದ ಜೇನು ಕುರುಬ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸ್ವಾವಲಂಬನೆಯ ಬದುಕಿನ ಪಾಠ ಕಲಿಸುತ್ತಿದ್ದು, ಮುಖ್ಯವಾಹಿನಿಗೆ ಕರೆತರಲು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಮು, ಟಿವಿ9, ಆನೇಕಲ್