
ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ (Accident) ಸಂಭವಿಸಿ ಏಳು ಜನ ದುರ್ಮರಣ ಹೊಂದಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್ ಯುವಿ ಕಾರಿನ (XUV Car) ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು, ಘಟನೆ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್ ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರ ಪೈಕಿ 6 ಮಂದಿ ಕಾರಿನಲ್ಲಿದ್ದವರು. ಕಾರಿನಲ್ಲಿದ್ದ ಅಶ್ವಿನ್, ಅರ್ಹಾನ್, ಅಯಾನ್ ಅಲಿ, ಭರತ್
ಹೆಣ್ಣೂರು ಮೂಲದ ಈಥನ್(17) ಸೇರಿ 6 ಯುವಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ ಗಗನ್ ಎಂಬುದು ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆದ್ದಾರಿಯ ಕಳಪೆ ನಿರ್ಮಾಣ ಮತ್ತು ವಿನ್ಯಾಸದ ಬಗ್ಗೆ ಸ್ತಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ಈ ರಸ್ತೆಯು ಸರಿಯಾದ ವಿನ್ಯಾಸವನ್ನು ಹೊಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NH) ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದೆ. ಹೆದ್ದಾರಿಯ ವಿನ್ಯಾಸದ ಬಗ್ಗೆ ಕಾಮಗಾರಿ ಸಂದರ್ಭದಲ್ಲೇ ಎಂಜಿನಿಯರ್ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕಮಳಿಪುರ ಗ್ರಾಮದ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಭಯಾನಕ ರೋಡ್ರೇಜ್ಗೆ ಬೆಚ್ಚಿಬಿದ್ದ ಬೆಂಗಳೂರು: ಕಾರಿನ ಬಾನೆಟ್ನಲ್ಲೇ ವ್ಯಕ್ತಿಯ ಒಂದು ಕಿಮೀ ಹೊತ್ತೊಯ್ದ ಚಾಲಕ!
ಸರ್ವೀಸ್ ರಸ್ತೆಗಳ ಸಮಸ್ಯೆ ಬಗ್ಗೆಯೂ ಮಾತನಾಡಿದ ಅವರು, ಸರ್ವೀಸ್ ರಸ್ತೆಗಳು ಕನಿಷ್ಠ 18 ಅಡಿ ಅಗಲ ಇರಬೇಕಿದ್ದರೂ, ಇಲ್ಲಿ ಮೂರೂವರೆ ಅಥವಾ ಎರಡೂವರೆ ಅಡಿ ಮಾತ್ರ ಇದೆ. ರೈತರು 2010ರಲ್ಲಿ ತಮ್ಮ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಬಿಟ್ಟುಕೊಟ್ಟಿದ್ದರೂ, ಅವರಿಗೆ ಯಾವುದೇ ಬೆಲೆ ಸಿಕ್ಕಿಲ್ಲ ಮತ್ತು ರಸ್ತೆಯನ್ನು ಕೂಡ ಸರಿಯಾಗಿ ನಿರ್ಮಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
Published On - 7:13 am, Fri, 13 February 26