ಅಕ್ಕನ ಮೇಲೆ ತಮ್ಮನಿಂದ ದರ್ಪ: ಹೊರದಬ್ಬಿ ಮನೆಗೆ ಬೀಗ ಹಾಕಿದ ಒಡ ಹುಟ್ಟಿದಾತ
ಅಕ್ಕ ಮತ್ತು ತಮ್ಮನ ನಡುವೆ ತವರು ಮನೆಯ ಆಸ್ತಿ ವಿಚಾರದಲ್ಲಿ ಉಂಟಾದ ಕಲಹದಿಂದಾಗಿ, ಅಕ್ಕ ತನ್ನ ಮನೆಯಿಂದ ಹೊರಹಾಕಲ್ಪಟ್ಟಿದ್ದಾಳೆ. 25 ವರ್ಷಗಳಿಂದ ಅಕ್ಕ ಆ ಮನೆಯಲ್ಲಿ ವಾಸಿಸುತ್ತಿದ್ದಳು. ನ್ಯಾಯಾಲಯದ ವಿಚಾರಣೆಯ ನಡುವೆ, ತಮ್ಮ ಮನೆಯ ವಸ್ತುಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಹಾಕಿದ್ದಾನೆ. ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಮನೆಗೆ ಮತ್ತೆ ಪ್ರವೇಶ ಪಡೆದಿದ್ದಾರೆ.
ದೇವನಹಳ್ಳಿ, ನವೆಂಬರ್ 21: ಅವರಿಬ್ಬರು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ-ತಂಗಿ ಕಳೆದ 2 ದಶಕಗಳಿಂದ ತವರು ಮನೆಯಲ್ಲೇ ನೆಲೆ ಕಂಡು ಕಂಡಿದ್ದರು. ಅಕ್ಕ ಪಕ್ಕದಲ್ಲೇ ವಾಸ ಮಾಡುತ್ತಿದ್ದರು. ಆದರೆ ಈ ನಡುವೆ ಆಸ್ತಿ (Property) ವಿಚಾರಕ್ಕೆ ಶುರುವಾದ ಕಲಹದಿಂದ ಏಕಾಏಕಿ ಅಕ್ಕನ ಮನೆಗೆ ನುಗ್ಗಿದ ತಮ್ಮ ಮನೆಯಲ್ಲಿನ ವಸ್ತುಗಳನ್ನು ಹೊರ ಹಾಕಿ ಮನೆಗೆ ಬೀಗ ಜಡಿದಿರುವಂತಹ ಘಟನೆ ನಡೆದಿದೆ.
ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲು ಏರಿದ್ದ ಅಕ್ಕ-ತಮ್ಮ
ಬೆಂಗಳೂರು ಉತ್ತರ ತಾಲೂಕಿನ ಮಾರೇನಹಳ್ಳಿ ನಿವಾಸಿಯಾದ ಶಾರದಮ್ಮ, ಕಳೆದ 25 ವರ್ಷಗಳ ಹಿಂದೆ ಗಂಡ ತೀರಿಕೊಂಡ ಅಂತ ಗಂಡನ ಮನೆಯಿಂದ ತವರು ಮನೆಗೆ ಬಂದು ಸೇರಿಕೊಂಡಿದ್ದು, ತವರು ಮನೆಯವರು ನೀಡಿದ್ದ ಜಮೀನಿನಲ್ಲೇ ಮನೆಯನ್ನ ಕಟ್ಟಿಕೊಂಡು ಜೀವನ ಮಾಡ್ತಿದ್ದಾರೆ. ಆದರೆ ಈ ನಡುವೆ ಇತ್ತೀಚೆಗೆ ಶಾರದಮ್ಮ ಮತ್ತು ಆಕೆಯ ಸಹೋದರ ರಾಜಣ್ಣ ನಡುವೆ ವೈಮನಸ್ಸು ಶುರುವಾಗಿದ್ದು, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲು ಸಹ ಏರಿದ್ರಂತೆ.
ಇದನ್ನೂ ಓದಿ: ವೃದ್ಧ ದಂಪತಿಯ ಮೇಲೆ ಕುಡಗೋಲು, ಬಂದೂಕು ಹಿಡಿದು ಹಲ್ಲೆಗೆ ಯತ್ನಿಸಿದ ಸಾಕು ಮಗ
ಹೀಗಾಗಿ ಅಕ್ಕನ ಮನೆಯವರು ಕೋರ್ಟ್ ಮೆಟ್ಟಿಲೇರಿದರು ಅಂತ ತಮ್ಮ ರಾಜಣ್ಣ 25 ವರ್ಷಗಳಿಂದ ಶಾರದಮ್ಮ ವಾಸಿಸುತ್ತಿದ್ದ ಮನೆಗೆ ಜನರನ್ನ ಕರೆದುಕೊಂಡು ಬಂದು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಹೊರಗಡೆ ಹಾಕಿದ್ದಾನೆ. ಜೊತೆಗೆ ಮನೆ ನಾನು ಕಟ್ಟಿಕೊಂಡಿರುವುದು ಅಂತ ಮನೆಯಲ್ಲೇ ಕೂತ ಅಕ್ಕನನ್ನು ಬಲವಂತವಾಗಿ ಮನೆಯಿಂದ ಹೊರಗಡೆ ಹಾಕಿದ್ದು, ಇರುವುದಕ್ಕೆ ಸೂರಿಲ್ಲದೆ ಕುಟುಂಬಸ್ಥರೆಲ್ಲಾ ಕಂಗಾಲಾಗಿದ್ದಾರೆ.
ಮೊದಲಿಗೆ ಅಕ್ಕ-ತಮ್ಮ ಜೊತೆಯಲ್ಲಿದ್ದಾಗ ಗಂಡನ ಮನೆಯಿಂದ ಬಂದಿದ್ದ ಹಣದಲ್ಲಿ ಮನೆ ಕಟ್ಟಿಕೊಂಡಿದ್ದ ಶಾರದಮ್ಮ, ಮನೆಯ ದಾಖಲೆಗಳನ್ನ ಮಾತ್ರ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಜೊತೆಗೆ ಕೇಳಿದಾಗಲೆಲ್ಲಾ ಸಹೋದರ ನನ್ನ ಮೇಲೆ ನಂಬಿಕೆಯಿಲ್ವಾ ಅಂತ ಹೇಳಿದ್ದು, ತಮ್ಮನೇ ಅಲ್ವಾ ಏನಾಗುತ್ತೆ ಅಂತ ಸುಮ್ಮನಾಗಿದ್ರಂತೆ. ಆದರೆ ಇತ್ತೀಚೆಗೆ ಅಕ್ಕ ತಮ್ಮನ ನಡುವೆ ತವರು ಮನೆಯ ಆಸ್ತಿ ವಿಚಾರಕ್ಕೆ ಕಲಹ ಶುರುವಾಗಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಇದೀಗ ಮನೆ ನನ್ನ ಹೆಸರಲ್ಲಿದೆ ಅಂತ ತಮ್ಮ ಅಕ್ಕನ ವಿರುದ್ದ ದಬ್ಬಾಳಿಕೆ ಮಾಡ್ತಿದ್ದಾನೆ ಅಂತ ಶಾರದಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಜಿ ಸಂಧಾನ
ಇನ್ನೂ ಕುಟುಂಬಸ್ಥರು ಮನೆಯಿಂದ ಹೊರಗಡೆ ದಿನಪೂರ್ತಿ ಕಣ್ಣೀರು ಹಾಕಿದ್ದನ್ನು ಕಂಡ ಗ್ರಾಮದ ಮುಖಂಡ ಪುಟ್ಟಣ್ಣ ಸ್ಥಳಕ್ಕೆ ಬಂದು ರಾಜಿ ಸಂಧಾನ ಮಾಡಿಸಿದ್ದಾರೆ. ಅಲ್ಲದೆ ಗ್ರಾಮದ ಹೆಣ್ಣು ಮಗಳಿಗೆ ಅನ್ಯಾಯವಾಗಬಾರದು ಅಂತ ಎರಡು ಕಡೆಯವರಿಗೂ ಬುದ್ದಿವಾದ ಹೇಳಿದ್ದು ಲಾಕ್ ಆಗಿದ್ದ ಮನೆಯ ಬೀಗ ತೆಗೆಸಿ ಬೀದಿಯಲ್ಲಿದ್ದ ಕುಟುಂಬಸ್ಥರನ್ನ ಮನೆ ಒಳಗಡೆ ಕಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಣಿ ಕಾಲೇಜಿನಲ್ಲಿ ಅವ್ಯವಸ್ಥೆ ಆಗರ: 20 ಕೋಟಿ ರೂ ಅನುದಾನದ ಬಗ್ಗೆ ಪ್ರಶ್ನಿಸಿದ ಮಹಿಳಾ ಆಯೋಗದ ಅಧ್ಯಕ್ಷೆ
ಒಡ ಹುಟ್ಟಿದ ಅಕ್ಕ ತಮ್ಮನೆ ದಾಯಾದಿಗಳಂತೆ ಆಸ್ತಿ ವಿಚಾರಕ್ಕೆ ಬಾಳಿ ಬದುಕುತ್ತಿದ್ದ ಮನೆಗೆ ಬೀಗ ಹಾಕಿ ನಾಲ್ಕು ಗೋಡೆಯ ಒಳಗಿನ ಜಗಳವನ್ನ ನಾಲ್ಕು ಜನರ ಮುಂದೆಗೆ ತಂದಿದ್ದು ನಿಜಕ್ಕೂ ವಿಪರ್ಯಾಸ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.