ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ಅವರೇ ನೇರ ಹೊಣೆ ಎಂದ ವಿಪಕ್ಷಗಳು ಎತ್ತಿದ ಸಾಲು ಪ್ರಶ್ನೆಗಳು ಇಲ್ಲಿವೆ

ಆರ್ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಪ್ರತಿಪಕ್ಷಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಹೊಣೆಗಾರರೆಂದು ಆರೋಪಿಸಿವೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಪಕ ಭದ್ರತಾ ವ್ಯವಸ್ಥೆಯನ್ನು ಖಂಡಿಸಿದ್ದಾರೆ. ಪೊಲೀಸ್ ಆಯುಕ್ತರ ಅಮಾನತು ಕೇವಲ ನಾಟಕ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಪ್ರತಿಪಕ್ಷಗಳು ಕೇಳಿರುವ ಪ್ರಮುಖ ಪ್ರಶ್ನೆಗಳು ಇಲ್ಲಿವೆ.

ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ಅವರೇ ನೇರ ಹೊಣೆ ಎಂದ ವಿಪಕ್ಷಗಳು ಎತ್ತಿದ ಸಾಲು ಪ್ರಶ್ನೆಗಳು ಇಲ್ಲಿವೆ
ಆರ್ ಅಶೋಕ, ಕುಮಾರಸ್ವಾಮಿ ಹಾಗೂ ವಿಜಯೇಂದ್ರ
Updated By: Ganapathi Sharma

Updated on: Jun 06, 2025 | 12:25 PM

ಬೆಂಗಳೂರು, ಜೂನ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಂಭ್ರಮಾಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Bengaluru Stampede) ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿವೆ. ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್ಸಿಬಿ ಸಂಭ್ರಮಾಚರಣೆ, ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ಸಂಬಂಧ ಪ್ರತಿಪಕ್ಷ ನಾಯಕರು ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರತಿಪಕ್ಷ ನಾಯಕರು ಕೇಳಿದ ಪ್ರಶ್ನೆಗಳೇನು?

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಇದೇ ಆಯುಕ್ತರು ಇದ್ದಾಗಲೇ ಹೊಸ ವರ್ಷ ಸಂಭ್ರಮಾಚರಣೆಯೂ ನಡೆದಿತ್ತಲ್ಲವೇ? ಆಗ ಯಶಸ್ವಿಯಾಗಿ ಭದ್ರತೆ ಹೊಣೆಗಾರಿಕೆ ವಹಿಸಿದ್ದರಲ್ಲವೇ? ಹಾಗಾದರೆ ಈಗ ಏನಾಯಿತು?
  • ಗಾಯಾಳುಗಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರೇ. ನೀವು (ಕಾಂಗ್ರೆಸ್ ಸರ್ಕಾರದವರು) ಮೊಸರು ತಿಂದು ಪೊಲೀಸರ ಮೂತಿಗೆ ಒರೆಸಿದಿರಲ್ಲವೇ?
  • ಅನಧಿಕೃತ ಕಾರ್ಯಕ್ರಮ ಎಂದು ಪೊಲೀಸರು ದಾಖಲಿಸಿದ ಎಫ್​ಐಆರ್​​ನಲ್ಲಿ ಹೇಳಲಾಗಿದೆ. ಹಾಗಾದರೆ ಅನಧಿಕೃತ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?
  • ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರು ಯಾರು, ಯಾಕೆ?
  • ಕಮಿಷನರ್ ಅನುಮತಿ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದವರು ಯಾರು?
  • ‘ಯಾರು ಏನೇ ಮಾಡಿದರು ನಾನು ಇದ್ದೀನಿ’ ಎಂದವರು ಯಾರು?
  • ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ, ಆ ಸ್ಟೇಡಿಯಂ ಕರ್ನಾಟಕದಲ್ಲಿ ಇಲ್ಲವೇ?
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದು ಪೊಲೀಸರ ಅನುಮತಿ ಇಲ್ಲದ ಕಾರ್ಯಕ್ರಮವೇ ಹೌದಾದರೆ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?

‘ಅಮಾನತು ನಾಟಕ’ ಎಂದ ಕುಮಾರಸ್ವಾಮಿ

ಬೆಂಗಳೂರು ಕಾಲ್ತುಳಿತ ಸಂಬಂಧ ಪೊಲೀಸರ ಅಮಾನತು ಮಾಡಿರುವುದು ನಾಟಕವಷ್ಟೇ. ‘ಒಂದು ತಿಂಗಳು ಸಸ್ಪೆಂಡ್ ಅಂತಾ ನಾಟಕ ಮಾಡುತ್ತೇವೆ, ಬೇಸರ ಮಾಡಿಕೊಳ್ಳಬೇಡಿ’ ಎಂಬುದಾಗಿ ಮೊದಲೇ ಹೇಳಿರುತ್ತಾರೆ ಅಷ್ಟೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದರು. ಪೊಲೀಸ್ ಇಲಾಖೆ ಸಲಹೆ ಧಿಕ್ಕರಿಸಿ 11 ಜೀವಗಳ ಬಲಿಯಾಗಿದೆ. ಅದಕ್ಕೆ ಮೂಲ ಕಾರಣ ರಾಜ್ಯ ಸರ್ಕಾರ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕಮಿಷನರ್​ ಸೇರಿ ಹಲವರ ಅಮಾನತು ಮಾಡಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕಮಿಷನರ್ ದಯಾನಂದ್ ಇದ್ದರು. ಲಕ್ಷಾಂತರ ಜನ ಸೇರಿದ್ದರೂ ಸಣ್ಣ ಅಹಿತಕರ ಘಟನೆಗೆ ಅವಕಾಶ ಕೊಟ್ಟಿರಲಿಲ್ಲ. ನಾನು ಬಿ. ದಯಾನಂದ್​ ಪರ ವಕಾಲತ್ತು ಮಾಡುತ್ತಿಲ್ಲ. ಸಸ್ಪೆಂಡ್ ಆದ ಡಿಸಿಪಿ ಒಬ್ಬರು ‘ಅಪ್ಪಯ್ಯ’ನ ಆತ್ಮೀಯರು ಎಂದೂ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ
ಸರ್ಕಾರ ಸ್ಥಿಮಿತ ತಪ್ಪಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಭಾಸ್ಕರ ರಾವ್
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ಆಗಿ ಸೀಮಂತ್​ ಕುಮಾರ್ ಸಿಂಗ್ ನೇಮಕ

ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ: ಅಶೋಕ್ ಕಿಡಿ

ಐಪಿಎಲ್ ಕಪ್ ಗೆದ್ದಿದ್ದು ಆರ್​ಸಿಬಿ, ಫೋಟೋಗೆ ಪೋಸ್ ಕೊಟ್ಟಿದ್ದು ಕೆಪಿಸಿಸಿ ತಂಡ. ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ ಎಂದು ಅಶೋಕ್ ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಬ್ಯಾಟರ್, ಡಿಸಿಎಂ ಡಿಕೆ​ ಬೌಲರ್. ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ರನೌಟ್ ಮಾಡಿಸಬೇಕು ಎಂಬುದು ಡಿಕೆ ಆಶೆ. ಆದರೆ ಹಿಟ್ ವಿಕೆಟ್ ಆಗಿದ್ದು ರಾಜ್ಯದ ಜನರು ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ

ಕ್ರಿಕೆಟ್ ಬಗ್ಗೆ ಇವರಿಗೆ ಎಬಿಸಿಡಿನೂ ಗೊತ್ತಿಲ್ಲ. ಟ್ರೋಫಿ ಆಟಗಾರರ ಕೈಯಲ್ಲಿ ಇರಲಿಲ್ಲ, ಇವರ ಕೈಯಲ್ಲೇ ಇತ್ತು. ವರ್ಷಾನುಗಟ್ಟಲೇ ತಯಾರಿ ಮಾಡಿ ಆಟ ಆಡಿದ್ದು ಆಟಗಾರರು. ಕೊನೆಗೆ ಆಟಗಾರರು ಬೇಜಾರಾಗಿ ಹೊರಟೇ ಹೋದರು. ವಿರಾಟ್ ಕೊಹ್ಲಿ ಹಾಗೂ ಆರ್​ಸಿಬಿ ತಂಡದ್ದು ಇದರಲ್ಲಿ ತಪ್ಪಿಲ್ಲ ಎಂದು ಅಶೋಕ್ ಹೇಳಿದರು.

ಸಿಎಂ, ಡಿಸಿಎಂ ಪ್ರಮುಖ ಆರೋಪಿಗಳು: ವಿಜಯೇಂದ್ರ

ಕಾಲ್ತುಳಿತ ಘಟನೆಯ ಪ್ರಮುಖ ಆರೋಪಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಂದು ವಿಜಯೇಂದ್ರ ಆರೋಪಿಸಿದರು. ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ ಎನ್ನುತ್ತಾರೆ. ಹಾಗಾದರೆ, ಡಿಸಿಎಂ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಟ್ರೋಫಿಗೆ ಮುತ್ತಿಕ್ಕಿ ಫೋಟೊಗೆ ಪೋಸ್ ಕೊಟ್ಟಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ