ಬೆಂಗಳೂರು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಸಿಸಿಬಿಗೆ ವರ್ಗ
ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಮಾಡಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಜನವರಿ 12: ನಗರದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ (Visvesvaraya Museum) ಹುಸಿ ಬಾಂಬ್ ಬೆದರಿಕೆ (Fake Bomb Threat) ಇಮೇಲ್ ಮಾಡಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. ಶುಕ್ರವಾರ (ಜ.06) ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು‘Morgue999lol’ ಎಂಬ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟೆನಯೊಂದರ (Terrorizers 111) ಹೆಸರನ್ನು ದುಷ್ಕರ್ಮಿಗಳು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು.
ಮ್ಯೂಸಿಯಂ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ಬಳಿಕ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಪತ್ತೆಯಾಗಿತ್ತು. ಇದೀಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಜಯಪುರದ ಮ್ಯೂಸಿಯಂಗೂ ಬಾಂಬ್ ಬೆದರಿಕೆ
ವಿಜಯಪುರದ ಗೋಳಗುಮ್ಮಟ ಆವರಣದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಮ್ಯೂಸಿಯಂಗೂ ಬಾಂಬ್ ಬೆದರಿಕೆ ಕರೆ ಬಂದಿತ್ತು. morgue999lol ನಿಂದ ಇಮೇಲ್ ಬಂದಿತ್ತು. ಮ್ಯೂಸಿಯಂಗಳಲ್ಲಿ ಬಹು ಸ್ಪೋಟಕಗಳನ್ನು ಕಾಣದಂತೆ ಇಟ್ಟಿದ್ದೇವೆ. ಮುಂಜಾನೆ ವೇಳೆ ಅವು ಸ್ಟೋಟಗೊಂಡು ಒಳಗಿದ್ದವರೆಲ್ಲಾ ಮೃತರಾಗುತ್ತಾರೆ. ನಾವು Terrozers111 ಗ್ರೂಪ್ನವರು. ನಮ್ಮ ಗ್ರೂಪ್ನ ಹೆಸರನ್ನು ಮಾದ್ಯಮಕ್ಕೆ ನೀಡಿದರೂ ನನ್ನ ಕೃತ್ಯ ನಿಲ್ಲದು ಎಂದು ಮೇಲ್ನಲ್ಲಿ ದುಷ್ಕರ್ಮಿಗಳು ಉಲ್ಲೇಖಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳ ತಪಾಸಣೆ ನಡೆಸಿದ್ದರು. ಈ ವೇಳೆ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ.
ಇದನ್ನೂ ಓದಿ: ಬೆಂಗಳೂರಿನ ಮ್ಯೂಸಿಯಮ್ಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಪೊಲೀಸರಿಗೆ ತಲೆನೋವಾದ ಆರೋಪಿಗಳ ಲೊಕೇಷನ್ ಟ್ರೇಸ್
ರಾಷ್ಟ್ರೀಯ ಷೇರು ವಿನಿಮಯ ಬೆಂಗಳೂರು ಕಚೇರಿಗೆ ಬಾಂಬ್ ಬೆದರಿಕೆ ಕರೆ
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ (National Stock Exchange of India) ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ (Bomb threat) ಬಂದಿತ್ತು. ಆರೋಪಿಗಳು ಜನವರಿ 3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದರು.
ಕೂಡಲೇ ಮುಂಬೈನ ಎನ್ಎಸ್ಇ ಕಚೇರಿ ಅಧಿಕಾರಿಗಳು ಮಧ್ಯರಾತ್ರಿ ಒಂದು ಗಂಟೆಗೆ ಸುಮಾರಿಗೆ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕವಸ್ತು ಪತ್ತೆಯಾಗಿಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Fri, 12 January 24