ಗಿಟಾರ್‌ಗೆ ‘ಹೆಲ್ಮೆಟ್ ಇಲ್ಲ’ ಎಂದು 500 ರೂ. ದಂಡ; ಬೆಂಗಳೂರಿನ ಎಐ ಟ್ರಾಫಿಕ್ ಕ್ಯಾಮೆರಾದ ಯಡವಟ್ಟು!

ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (AI) ಟ್ರಾಫಿಕ್ ಕ್ಯಾಮೆರಾದ ಭಾರಿ ಎಡವಟ್ಟು ಬೆಳಕಿಗೆ ಬಂದಿದೆ. ಸ್ಕೂಟರ್ ಸವಾರ ಬೆನ್ನಿಗೆ ಕಟ್ಟಿಕೊಂಡಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರನೆಂದು ಭಾವಿಸಿದ ಎಐ ಕ್ಯಾಮೆರಾ, 'ಹೆಲ್ಮೆಟ್ ಧರಿಸಿಲ್ಲ' ಎಂದು 500 ರೂ. ಚಲನ್ ಜಾರಿಗೊಳಿಸಿದೆ. ಸವಾರ ದೂರು ನೀಡಿದ ಬಳಿಕ ತಪ್ಪು ದಂಡ ರದ್ದುಗೊಳಿಸಲು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಗಿಟಾರ್‌ಗೆ ಹೆಲ್ಮೆಟ್ ಇಲ್ಲ ಎಂದು 500 ರೂ. ದಂಡ; ಬೆಂಗಳೂರಿನ ಎಐ ಟ್ರಾಫಿಕ್ ಕ್ಯಾಮೆರಾದ ಯಡವಟ್ಟು!
ಗಿಟಾರ್‌ಗೆ 'ಹೆಲ್ಮೆಟ್ ಇಲ್ಲ' ಎಂದು 500 ರೂ. ದಂಡ
Image Credit source: head topic
Edited By:

Updated on: Sep 27, 2026 | 11:09 AM

ಬೆಂಗಳೂರು, ಸೆಪ್ಟೆಂಬರ್ 27: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕ ಬುದ್ಧಿಮತ್ತೆ (ಎಐ) ಮಾಡುವ ಯಡವಟ್ಟುಗಳು ಸಾರ್ವಜನಿಕರನ್ನು ಅಚ್ಚರಿಗೆ ತಳ್ಳುತ್ತಿವೆ. ಬೆಂಗಳೂರಿನಲ್ಲಿ ಇಂತಹುದೇ ಒಂದು ವಿಚಿತ್ರ ಹಾಗೂ ತಮಾಷೆಯ ಘಟನೆ ನಡೆದಿದ್ದು, ಬೆನ್ನಿಗೆ ಗಿಟಾರ್ ಬ್ಯಾಗ್ ಕಟ್ಟಿಕೊಂಡು ಸ್ಕೂಟರ್ ಚಲಾಯಿಸುತ್ತಿದ್ದ ಸವಾರನಿಗೆ ಎಐ ಕ್ಯಾಮೆರಾ 500 ರೂ. ದಂಡ ವಿಧಿಸಿದೆ! ಗಿಟಾರ್ ಬ್ಯಾಗ್ ಅನ್ನು ‘ಹಿಂಬದಿ ಸವಾರ’ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ, ಆ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಚಲನ್ ಹಾಕಿದೆ.

ಮೆಸೇಜ್ ನೋಡಿ ಬೆಚ್ಚಿಬಿದ್ದ ಸವಾರ!

ಸ್ಕೂಟರ್ ಸವಾರ ಸೌವಿಕ್ ದತ್ತಾ ಎಂಬುವವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ತಮ್ಮ ಹೆಂಡತಿಯ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆನ್ನಿಗೆ ಗಿಟಾರ್ ಚೀಲವನ್ನು ಹಾಕಿಕೊಂಡಿದ್ದರು. ಔಟರ್ ರಿಂಗ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಎಐ ಆಧಾರಿತ ಟ್ರಾಫಿಕ್ ಕ್ಯಾಮೆರಾ, ಗಿಟಾರ್ ಬ್ಯಾಗ್ ಅನ್ನು ಮನುಷ್ಯನೆಂದು ಭಾವಿಸಿ ಹೆಲ್ಮೆಟ್ ರಹಿತ ಪ್ರಯಾಣದ ವಿಭಾಗದಡಿ ಫೈನ್ ಹಾಕಿದೆ. ಮರುದಿನ ಸೌವಿಕ್ ಅವರ ಪತ್ನಿಯ ಮೊಬೈಲ್‌ಗೆ ಬಂದ ದಂಡದ ಮೆಸೇಜ್ ಮತ್ತು ಫೋಟೋ ನೋಡಿ ದಂಪತಿ ಬೆಚ್ಚಿಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್, ಪೊಲೀಸರ ಸ್ಪಂದನೆ

ತಮಗೆ ವಿಧಿಸಲಾದ ತಪ್ಪು ಚಲನ್ ಮತ್ತು ಫೋಟೋವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡ ಸೌವಿಕ್ ದತ್ತಾ, “ನಾನು ಒಬ್ಬನೇ ಗಿಟಾರ್ ಬೆನ್ನಿಗೆ ಹಾಕಿ ಸ್ಕೂಟರ್ ಚಲಾಯಿಸುತ್ತಿದ್ದೆ. ಆದರೆ ಬೆಂಗಳೂರು ಸಂಚಾರ ಪೊಲೀಸರಿಂದ ‘ಹಿಂಬದಿ ಸವಾರ ಹೆಲ್ಮೆಟ್ ಹಾಕಿಲ್ಲ’ ಎಂದು 500 ರೂ. ದಂಡ ಬಂದಿದೆ. ಎಐ ಟ್ರಾಫಿಕ್ ಸಿಸ್ಟಮ್‌ ನೈಜತೆ ಇಲ್ಲಿದೆ!” ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ಘಟನೆ ವೈರಲ್ ಆಗುತ್ತಿದ್ದಂತೆ ಸ್ಪಂದಿಸಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಪ್ರಕರಣವನ್ನು ಪರಿಶೀಲಿಸಿ ತಪ್ಪು ಚಲನ್ ಆಗಿದ್ದರೆ ತಕ್ಷಣವೇ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. 2022ರಿಂದ ನಗರದಲ್ಲಿ ಜಾರಿಯಲ್ಲಿರುವ ಎಐ ಕ್ಯಾಮೆರಾಗಳು ಕೆಲವೊಮ್ಮೆ ಇಂತಹ ತಾಂತ್ರಿಕ ದೋಷಗಳನ್ನು ಎಸಗುತ್ತಿದ್ದು, ಸಾರ್ವಜನಿಕರು ದೂರು ನೀಡಿದರೆ ಪರಿಶೀಲಿಸಿ ರದ್ದುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us